Advertisement

ಕೂಡಲಿ ಊಟದ ಸೊಗಸು

09:31 PM Mar 13, 2020 | Lakshmi GovindaRaj |

ಕೂಡಲಿಯ ಶಾರದಮ್ಮನನ್ನು ನೋಡಲು ಎರಡು ಕಣ್ಣು ಸಾಲದು. ಅಷ್ಟು ಸುಂದರ. ಹಾಗೆಯೇ ಇಲ್ಲಿನ ಭೋಜನದ ತಂಪು ವರ್ಣಿಸಲು ಪದಗಳೂ ಸಾಲವು…

Advertisement

ಆದಿ ಶಂಕರಾಚಾರ್ಯರು ಶಾರದಾಂಬೆಯನ್ನು ಶೃಂಗೇರಿಗೆ ಕರೆತರುತ್ತಿದ್ದರು. ಅದಾಗಲೇ ದೇವಿ ಒಂದು ಷರತ್ತು ವಿಧಿಸಿದ್ದಳು: “ನೀವು ಮುಂದೆ ಹೋಗಿ, ನಾನು ಹಿಂದ್ಹಿಂದೆ ಬರುತ್ತೇನೆ. ಯಾವುದೇ ಕಾರಣಕ್ಕೂ ಹಿಂದೆ ತಿರುಗಿ ನನ್ನನ್ನು ನೋಡದಿರಿ’ ಎಂದಿದ್ದಳು. ಆದರೆ, ತುಂಗಾಭದ್ರಾ ನದಿ ಕೂಡುವ ಸ್ಥಳಕ್ಕೆ ಬಂದಾಗ, ಶಂಕರರಿಗೆ ದೇವಿಯ ಗೆಜ್ಜೆಯ ಸಪ್ಪಳ ಕೇಳಿಸುವುದೇ ನಿಂತಿತು. ಹಾಗೆ ಶಾರದೆ ನೆಲೆನಿಂತ ಸ್ಥಳವೇ, ಶಿವಮೊಗ್ಗ ಸಮೀಪದ ಹೊಳೆಹೊನ್ನೂರು ಬಳಿ ಇರುವ ಕೂಡಲಿ ಕ್ಷೇತ್ರ.

ಶಂಕರರು ಇಲ್ಲಿ ಶಾರದೆಯನ್ನು ಶ್ರೀಚಕ್ರವನ್ನು ವಿಧಿವತ್ತಾಗಿ ರಚಿಸಿ, ಪೂಜಿಸಿ, ಶೃಂಗೇರಿಗೆ ತೆರಳಿದರಂತೆ. ಕೂಡಲಿಯ ಶಾರದಮ್ಮನನ್ನು ನೋಡಲು ಎರಡು ಕಣ್ಣು ಸಾಲದು. ಅಷ್ಟು ಸುಂದರ. ಕೂಡಲಿ ಶೃಂಗೇರಿ ಪೀಠದ ದಾಸೋಹಕ್ಕೆ ಸುಮಾರು 600 ವರ್ಷಗಳ ಇತಿಹಾಸವಿದೆ. ಇಲ್ಲಿನ ಶಾರದಾಂಬಾ ಪೀಠ, ದಕ್ಷಿಣಾಮಾಯಿ ಪೀಠಗಳಲ್ಲಿ ಒಂದು. ಮಠದ ಆವರಣದಲ್ಲಿ ಶಾರದಾಂಬೆ, ಚಂದ್ರಮೌಳೇಶ್ವರ, ಕೋದಂಡರಾಮ, ಶಕ್ತಿಗಣಪತಿ ಹಾಗೂ ವಿದ್ಯಾಶಂಕರ, ಆದಿಶಂಕರಾಚಾರ್ಯರ ದೇವಸ್ಥಾನಗಳಿವೆ. ಪುಣ್ಯಸ್ನಾನಕ್ಕೆ ಹೆಸರಾದ ಈ ಕ್ಷೇತ್ರದಲ್ಲಿ, ನಿತ್ಯ ನಡೆಯುವ ಅನ್ನದಾನಕ್ಕೂ ದೈವಿಕ ಮಹತ್ವವಿದೆ.

ನಿತ್ಯ ದಾಸೋಹದ ಕಥೆ: ಇಲ್ಲಿ ಪ್ರತಿದಿನ ಮಧ್ಯಾಹ್ನ ದಾಸೋಹ ನಡೆಯುತ್ತಿದೆ. ವಿಶೇಷ ದಿನಗಳಲ್ಲಿ ರಾತ್ರಿ ಕೂಡ ಭೋಜನದ ವ್ಯವಸ್ಥೆ ಇರುತ್ತದೆ. ಪ್ರತಿದಿನ ಸಾಮಾನ್ಯವಾಗಿ 250ರಿಂದ 300 ಭಕ್ತರಿಗೆ ಅನ್ನಸಂತರ್ಪಣೆ ನೆರವೇರುತ್ತದೆ. ಶುಕ್ರವಾರ, ಭಾನುವಾರ ಸದ್ಭಕ್ತರ ಸಂಖ್ಯೆ 500ರಿಂದ 600 ದಾಟುತ್ತದೆ. ಸಂಕ್ರಾಂತಿ, ಯುಗಾದಿ, ನವರಾತ್ರಿ ಸಂದರ್ಭದಲ್ಲಿ 5- 6 ಸಾವಿರ ಮಂದಿ ಬರುತ್ತಾರೆ. ಭೂಮಿ ಹುಣ್ಣಿಮೆ, ಶಂಕರ ಜಯಂತಿ, ಪ್ರತಿ ತಿಂಗಳ ಸಂಕ್ರಮಣದಂದು ಇಲ್ಲಿನ ಸಹಸ್ರಾರು ಮಂದಿ ಸೇರುತ್ತಾರೆ.

ಭಕ್ಷ್ಯ ಸಮಾಚಾರ
– ಪ್ರತಿದಿನ ಅನ್ನ, ಸಾರು, ಪಲ್ಯ, ಚಟ್ನಿ, ಮಜ್ಜಿಗೆ ಇದ್ದೇ ಇರುತ್ತದೆ.
– ಶುಕ್ರವಾರ ಮತ್ತು ಭಾನುವಾರ ಪಾಯಸ, ಚಿತ್ರಾನ್ನ, ಮೊಸರನ್ನ, ಪುಳಿಯೋಗರೆ, ಬಾದುಶಾ, ಲಾಡು, ಮೈಸೂರು ಪಾಕ್‌ನ ವಿಶೇಷ.

Advertisement

ಅಡುಗೆ ವಿಶೇಷ
– ಈರುಳ್ಳಿ, ಬೆಳ್ಳುಳ್ಳಿ ಬಳಸದೆ ಅಡುಗೆ ತಯಾರಿ.
– ದ್ವಾದಶಿಯ ದಿನ ದಾನಿಗಳು ತರಕಾರಿ, ಅಕ್ಕಿ ಅರ್ಪಣೆ ಮಾಡುತ್ತಾರೆ.
– ರಾಣೆಬೆನ್ನೂರು ತಾಲೂಕಿನ ಊದಗಟ್ಟಿ ಗ್ರಾಮಸ್ಥರು ಪ್ರತಿವರ್ಷ 50 ಕ್ವಿಂಟಲ್‌ ಅಕ್ಕಿ ದಾನ ಕೊಡುತ್ತಾರೆ.

ತಂಪು ನೆಲದ ಭೋಜನ: ಹೊರಗೆ ಅದೆಷ್ಟೇ ಬಿಸಿಲಿನ ಝಳವಿರಲಿ, ಕಲ್ಲಿನಿಂದ ನಿರ್ಮಿತವಾದ ಕೂಡಲಿ ದೇವಸ್ಥಾನದೊಳಗೆ ಸದಾ ತಂಪು ವಾತಾವರಣವಿರುತ್ತದೆ. ಪ್ರಸ್ತುತ ಇರುವ ಭೋಜನಶಾಲೆ 70 ವರುಷ ಹಳೆಯದು. ಸರಿಸುಮಾರು 300 ಮಂದಿ ಭಕ್ತರು ಏಕಕಾಲದಲ್ಲಿ ಊಟಕ್ಕೆ ಕೂರಬಹುದು. ಶ್ರೀಮದ್‌ ಜಗದ್ಗುರು ಶ್ರೀವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮೀಜಿಗಳು ಸಾವಿರ ಮಂದಿ ಕೂರುವ ಭೋಜನಾಲಯ ಕಟ್ಟಿಸಲು, ಯೋಜಿಸಿದ್ದಾರೆ.

ಊಟದ ಸಮಯ: ಮಧ್ಯಾಹ್ನ 1.30ರಿಂದ 2.30ರವರೆಗೆ

ಸಂಖ್ಯಾ ಸೋಜಿಗ
3- ಬಾಣಸಿಗರಿಂದ ನಿತ್ಯ ಅಡುಗೆ
5- ಮಂದಿ ಅಡುಗೆ ಸಹಾಯಕರು
250- ಭಕ್ತರಿಗೆ ನಿತ್ಯ ಭೋಜನ
600- ಮಂದಿಗೆ ವಾರಾಂತ್ಯದಲ್ಲಿ ಭೋಜನ
1,50,000- ರೂ. ಪ್ರತಿತಿಂಗಳ ಅನ್ನಸಂತರ್ಪಣೆ ವೆಚ್ಚ

* ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next