ದೀಕ್ಷಿತ್ ಶೆಟ್ಟಿ ನಟನೆಯ “ಕೆಟಿಎಂ’ ಚಿತ್ರ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರ 25 ದಿನ ಪೂರೈಸಿದ್ದು, ಈ ಸಂಭ್ರಮವನ್ನು ಇತ್ತೀಚೆಗೆ ಚಿತ್ರತಂಡ ಆಚರಿಸಿದೆ.
25 ದಿನದ ಟ್ರೋಫಿ ಸ್ವೀಕರಿಸಿ ಮಾತನಾಡಿದ ನಟ ದೀಕ್ಷಿತ್, “ಇದು ಕೈ ಸೇರೋದಿಕ್ಕೆ 10 ವರ್ಷ ಬೇಕಾಯ್ತು. 20214ರಲ್ಲಿ ಶುರುವಾದ ಪ್ರಯಾಣ. ಇದು ನೋಡ್ತಾ ಇದ್ದಾರೆ ನನಗೊಂದು ಹಾಡು ನೆನಪು ಆಗುತ್ತದೆ. ನನಗೆ ನಾನು ಹೇಳಿಕೊಳ್ಳುತ್ತಿದ್ದ ಹಾಡು. ಏನೇ ಮಾಡು ಎದುರುವೇನೇನೂ ಬಾಳುವೆನು ನೋಡು, ಬದುಕುವೆ ನೇನೂ ನೋಡು.. ನನ್ನ ಪ್ರಾರಂಭದ ದಿನದಲ್ಲಿ ಈ ಹಾಡನ್ನು ಯಾವಾಗಲೂ ಕೇಳ್ತಾ ಇದ್ದೆ. ನನ್ನನ್ನು ನಾನು ಗಟ್ಟಿ ಮಾಡಿಕೊಳ್ಳುತ್ತಿದ್ದೆ. ಎದೆಗೆ ಒತ್ತಿಕೊಂಡು ಮಾಡಿದ ಸಿನಿಮಾ ಇದು. ಎಲ್ಲಿ ಹೋದರು ಈ ಚಿತ್ರದ ಬಗ್ಗೆ ಹೇಳುತ್ತಿದ್ದೆ. ಕೆಟಿಎಂ ಬರುತ್ತದೆ ಎಂದು. ಈಗ ಈ ರೂಪದಲ್ಲಿ ಇದು ಸೇರಿಕೊಂಡಿದೆ’ ಎಂದರು.
ನಿರ್ದೇಶಕ ಅರುಣ್ ಕುಮಾರ್ ಮಾತನಾಡಿ, “ಕೆಟಿಎಂ 25 ದಿನ ಪೂರೈಸಿದೆ. ಇನ್ನೂ ಶೋ ಇದೆ. 12 ಸಿನಿಮಾ ರಿಲೀಸ್ ಆಯ್ತು. 12 ಸಿನಿಮಾದಲ್ಲಿ ನಮ್ಮ ಸಿನಿಮಾ 25 ದಿನ ಆಗಿದೆ. ಅದೇ ಸಂತೋಷ. ಈಗ 2 ವಾರ ಉಳಿಯುವುದೇ ಕಷ್ಟ. ನಮ್ಮದು 25 ದಿನ ಆಗಿದೆ. ಕಾರಣ ಮೀಡಿಯಾ, ಜನರು ಸಪೋರ್ಟ್ ನಿಂದ ಇದು ಆಗಿದೆ. ಈ ಚಿತ್ರ ಆಗೋದಿಕ್ಕೆ ಮುಖ್ಯ ಕಾರಣ ನನ್ನ ಟೆಕ್ನಿಷಿಯನ್ಸ್. ಅವರನ್ನು ನೆನಪಿಸಿಕೊಳ್ಳೋದಿಕ್ಕೆ ಇಷ್ಟಪಡುತ್ತೇನೆ. ಕಲಾವಿದರ ನಟನೆ ಬಗ್ಗೆ ಎಲ್ಲರೂ ಮಾತನಾಡಿದ್ದಾರೆ’ ಎಂದರು.
ಕೆಟಿಎಂ ಸಿನಿಮಾದಲ್ಲಿ ನಾಯಕನಾಗಿ ನಟಿಸಿ ರುವ ದೀಕ್ಷಿತ್ ಶೆಟ್ಟಿಗೆ ಸಂಜನಾ ದಾಸ್, ಕಾಜಲ್ ಕುಂದರ್ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಉಷಾ ಭಂಡಾರಿ, ರಘು ರಮಣಕೊಪ್ಪ, ಪ್ರಕಾಶ್ ತುಮ್ಮಿನಾಡು, ಬಾಬು ಹಿರಣ್ಣಯ್ಯ, ಶಾನಿಲ್ ಗುರು, ದೇವ್ ದೇವಯ್ಯ, ಅಭಿಷೇಕ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತೋಷ್ ಈ ಸಿನಿಮಾದಲ್ಲಿದ್ದಾರೆ. ಈ ಚಿತ್ರವನ್ನು ಮಹಾಸಿಂಹ ಮೂವೀಸ್ ಬ್ಯಾನರ್ ಅಡಿಯಲ್ಲಿ ವಿನಯ್ ಅವರು ಸಿನಿಮಾ ನಿರ್ಮಾಣ ಮಾಡಿದ್ದಾರೆ. ರಕ್ಷಯ್ ಸಹ ನಿರ್ಮಾಣವಿದೆ.