ಬೆಂಗಳೂರು: ಬಿಟ್‌ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ಕರ್ನಾಟಕ ಸಿಐಡಿ ಪೊಲೀಸರು, ರಾಜ್ಯ ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ (ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪೋರ್ಟಲ್) ಅನ್ನು ಹ್ಯಾಕ್ ಮಾಡಿ ಹಣ ಸುಲಿಗೆ ಮಾಡಿದ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಪಂಜಾಬ್ ಮೂಲದ ಅರವಿಂದರ್ ಸಿಂಗ್ (32) ಎಂದು ಗುರುತಿಸಲಾಗಿದ್ದು, ಸಿಐಡಿ ವಿಶೇಷ ತನಿಖಾ ತಂಡ ಬಂಧಿಸಿದೆ. ಈ ಸಂಬಂಧ ಸಿಐಡಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಿಂಗ್, ಅಂತಾರಾಷ್ಟ್ರೀಯ ಹ್ಯಾಕರ್ ಮತ್ತು ಬಿಟ್‌ಕಾಯಿನ್ ಹಗರಣದ ಕಿಂಗ್‌ಪಿನ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯೊಂದಿಗೆ ರಾಜ್ಯ ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡುವಲ್ಲಿ ಭಾಗಿಯಾಗಿದ್ದಾನೆ ಎಂದು ವರದಿಯಾಗಿದೆ. ವಂಚಿಸಿದ ಹಣವನ್ನು ತನ್ನ ಖಾತೆಗೆ ಜಮಾ ಮಾಡಲು ಶ್ರೀಕಿಯ ಸೂಚನೆಗಳನ್ನು ಅನುಸರಿಸಿದ್ದಾನೆ ಎಂದು ಹೇಳಲಾಗಿದೆ.
ಅರವಿಂದರ್ ಸಿಂಗ್ ಪಂಜಾಬ್ ಮತ್ತು ನೆರೆಯ ರಾಜ್ಯಗಳ ಉದ್ಯಮಿಗಳು ಮತ್ತು ವ್ಯಾಪಾರಿಗಳೊಂದಿಗೆ ಬಲವಾದ ಸಂಬಂಧವನ್ನು ಹೊಂದಿದ್ದು, ಶ್ರೀಕಿಯಿಂದ ಪಡೆದ ಹಣವನ್ನು ಹವಾಲಾ ಮೂಲಕ ತನ್ನ ವ್ಯಾಪಾರಿ ಸ್ನೇಹಿತರಿಗೆ ವರ್ಗಾಯಿಸಿ ಅದನ್ನು ಶ್ರೀಕಿಗೆ ಹಿಂದಿರುಗಿಸುವ ಮೊದಲು ಲಾಂಡರಿಂಗ್ ಮಾಡಿದ್ದ ಇದಕ್ಕಾಗಿ ಸಿಂಗ್ ಅವರು ಭಾರಿ ಕಮಿಷನ್ ಪಡೆದಿದ್ದ ಎಂದು ತಿಳಿದು ಬಂದಿದೆ.
ಸರಕಾರದ ವ್ಯವಹಾರ ನಿಧಿಗಳ ಸಂಗ್ರಹ ಮತ್ತು ನಿರ್ವಹಣೆಗಾಗಿ ವಿನ್ಯಾಸಗೊಳಿಸಲಾದ ಇ-ಪ್ರೊಕ್ಯೂರ್‌ಮೆಂಟ್ ವೆಬ್‌ಸೈಟ್ ಅನ್ನು ಸುಮಾರು ನಾಲ್ಕೂವರೆ ವರ್ಷಗಳ ಹಿಂದೆ ಶ್ರೀಕಿ ಹ್ಯಾಕ್ ಮಾಡಿದ್ದ. ಟೆಂಡರ್‌ಗಳಿಂದ ಕೋಟ್ಯಂತರ ರೂಪಾಯಿಗಳನ್ನು ಅರವಿಂದರ್ ಸಿಂಗ್ ಖಾತೆಗೆ ವರ್ಗಾಯಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಶ್ರೀಕಿ ನಂತರ ಹಣವನ್ನು ಹಿಂಪಡೆದು ಅದನ್ನು ತನ್ನ ಗೆಳತಿ ಮತ್ತು ಸ್ನೇಹಿತರೊಂದಿಗೆ ವಿದೇಶದಲ್ಲಿ ಐಷಾರಾಮಿ ಜೀವನ ನಡೆಸಲು ಬಳಸಿಕೊಂಡಿದ್ದ.
ವಿಚಾರಣೆ ವೇಳೆ ಶ್ರೀಕಿ ನೀಡಿದ ಮಾಹಿತಿ ಮೇರೆಗೆ ಸಿಂಗ್ ನನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪರಾರಿಯಾಗಿದ್ದ ಆರೋಪಿಯನ್ನು ಪಂಜಾಬ್‌ನಲ್ಲಿ ಬಂಧಿಸಲಾಗಿದೆ.