ಚೆನ್ನೈ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು “ಕೆಎಸ್‌ಆರ್‌ಟಿಸಿ’ ಹೆಸರನ್ನು ಬಳಸುತ್ತಿರುವುದನ್ನು ಪ್ರಶ್ನಿಸಿ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮವು ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. ಹೀಗಾಗಿ “ಕೆಎಸ್‌ಆರ್‌ಟಿಸಿ’ ಹಕ್ಕು ಈಗ ಕರ್ನಾಟಕದ ಬಳಿ ಉಳಿಯಲಿದ್ದು, ಕೇರಳಕ್ಕೆ ಭಾರೀ ಹಿನ್ನಡೆಯಾಗಿದೆ.
ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ ಕೂಡ ತನ್ನ ಹೆಸರನ್ನು ಸಂಕ್ಷಿಪ್ತವಾಗಿ “ಕೆಎಸ್‌ಆರ್‌ಟಿಸಿ’ ಎಂದೇ ಬಳಸುತ್ತಿದೆ. ಹೀಗಾಗಿ ಇದೇ ಹೆಸರನ್ನು ಕರ್ನಾಟಕ ಬಳಸಬಾರದು ಎಂದು ಕೇರಳ ತಕಾರರು ತೆಗೆದಿತ್ತು. ಆದರೆ ಕೇರಳದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸುವ ಮೂಲಕ ಸುದೀರ್ಘ ಕಾನೂನು ಹೋರಾಟದಲ್ಲಿ ಕರ್ನಾಟಕಕ್ಕೆ ಜಯ ಸಿಕ್ಕಿದೆ.
ಪ್ರಕರಣದ ಹಿನ್ನೆಲೆ
“ಕೆಎಸ್‌ಆರ್‌ಟಿಸಿ’ ಹೆಸರಿಗೆ ಸಂಬಂಧಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿರುದ್ಧ ಚೆನ್ನೈಯಲ್ಲಿರುವ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿ (ಐಪಿಎಬಿ)ಯಲ್ಲಿ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ 2013ರಲ್ಲಿ ತಕರಾರು ಅರ್ಜಿ ಸಲ್ಲಿಸಿತ್ತು. ಆದರೆ 2021ರಲ್ಲಿ ಐಪಿಎಬಿಯನ್ನು ಕೇಂದ್ರ ಸರಕಾರ ರದ್ದುಗೊಳಿಸಿದ ಅನಂತರ ಈ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು.
“1937ರಿಂದಲೇ ತಿರುವಾಂಕೂರು ರಾಜ್ಯ ಸಾರಿಗೆ ಇತ್ತು. 1965ರಲ್ಲಿ ಕೇರಳ ರಾಜ್ಯ ಉದಯವಾದ ಮೇಲೆ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ ಆರಂಭವಾಯಿತು. ಕೆಎಸ್‌ಆರ್‌ಟಿಸಿಗೆ ಲಾಂಛನ ಕೂಡ ಇದೆ. ಆದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಕೂಡ ಸಂಕ್ಷಿಪ್ತವಾಗಿ ಕೆಎಸ್‌ಆರ್‌ಟಿಸಿ ಎಂದೇ ಬಳಸುತ್ತಿದೆ’ ಎಂದು ಕೇರಳ ವಾದ ಮಂಡಿಸಿತ್ತು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಲಾಂಛನದಲ್ಲಿ ಗಂಡಭೇರುಂಡ ಗುರುತು ಇದೆ. “ಕೆಎಸ್‌ಆರ್‌ಟಿಸಿ’ ಹಾಗೂ ಗಂಡಭೇರುಂಡ ಲಾಂಛನ ಬಳಕೆಗೆ ಟ್ರೇಡ್ ಮಾರ್ಕ್ ಮತ್ತು ಕಾಪಿರೈಟ್ ಕೂಡ ಪಡೆಯಲಾಗಿದೆ. ಕೇರಳದ ಲಾಂಛನದಲ್ಲಿ ಆನೆಗಳ ಗುರುತು ಇದ್ದು, ಪ್ರತ್ಯೇಕ ಟ್ರೇಡ್ ಮಾರ್ಕ್ ಆಗಿದೆ ಎಂದು ಕರ್ನಾಟಕ ವಾದ ಮಂಡಿಸಿತ್ತು. ಅಂತಿಮವಾಗಿ ಕರ್ನಾಟಕದ ವಾದವನ್ನು ಮದ್ರಾಸ್ ಹೈಕೋರ್ಟ್ ಎತ್ತಿಹಿಡಿದಿದೆ. ಹೀಗಾಗಿ ಇನ್ನು
ಮುಂದೆ ಕೆಎಸ್‌ಆರ್‌ಟಿಸಿ ಹೆಸರು ಬಳಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಯಾವುದೇ ಕಾನೂನು ಅಡಚಣೆ ಇರುವುದಿಲ್ಲ.