Advertisement
ಕೆ.ಎಸ್.ಆರ್.ಟಿ.ಸಿ. ಯು ನವರಾತ್ರಿ ಹಿನ್ನೆಲೆಯಲ್ಲಿ “ಮಂಗಳೂರು ದಸರಾ ದರ್ಶನ’ ಬಸ್ ಟೂರ್ ಆರಂಭಿಸಿ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸದ್ಯದಲ್ಲೇ “ಪ್ರವಾಸಿ ಬಸ್’ ಆರಂಭಿಸುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದೆ.
Related Articles
Advertisement
ನಗರದಿಂದ ಆರು ವರ್ಷಗಳ ಹಿಂದೆ ಕೆಎಸ್‌ಟಿಡಿಸಿ (ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ) ಯಿಂದ ಸಿಟಿ ಟೂರ್ ಬಸ್ ಇತ್ತು. ಈ ಬಸ್ ಲಾಲ್‌ಬಾಗ್‌ನಿಂದ ಹೊರಟು ಕುದ್ರೋಳಿ ದೇವಸ್ಥಾನ, ಕದ್ರಿ ದೇವಸ್ಥಾನ, ಮಂಗಳಾದೇವಿ ದೇವಸ್ಥಾನ, ಸಂತ ಅಲೋಶಿಯಸ್ ಚಾಪೆಲ್, ಪಿಲಿಕುಳ ನಿಸರ್ಗಧಾಮ-ಜೈವಿಕ ಉದ್ಯಾನವನ, ತಣ್ಣೀರುಬಾವಿ ಟ್ರೀಪಾರ್ಕ್, ಕಡಲತೀರದಿಂದ ಪುನಃ ಲಾಲ್‌ಬಾಗ್‌ಗೆ ತೆರಳುತ್ತಿತು. ಆರಂಭದಲ್ಲಿ ಪ್ರವಾಸಿಗರಿಂದ ಉತ್ತಮ ಸ್ಪಂದನೆ ಇತ್ತು. ಮಳೆಗಾಲ ಕೊನೆಗೊಳ್ಳುವುದರಲ್ಲಿ ಬಸ್‌ನ ಕೆಲವೊಂದು ಬಿಡಿ ಭಾಗಗಳು ಹದಗೆಟ್ಟಿತ್ತು. ಕೆಲವು ದಿನಗಳ ಬಳಿಕ ಈ ಬಸ್ ಅನ್ನು ಬೆಂಗಳೂರಿಗೆ ಸಾಗಿಸಲಾಗಿತ್ತು. ಅದಾದ ಬಳಿಕ ಟೂರ್ ಬಸ್ ಮಂಗಳೂರಿಗೆ ಮತ್ತೆ ಬರಲಿಲ್ಲ.
10 ದಿನ, 12.19 ಲಕ್ಷ ರೂ. ಆದಾಯ
ಕೆಎಸ್ಸಾರ್ಟಿಸಿಯು ಸೆ. 26ರಿಂದ 10 ದಿನಗಳ ಕಾಲ ನಗರದ ಪ್ರಮುಖ ದೇವಿ ದೇವಾಲಯಗಳಿಗೆ “ಮಂಗಳೂರು ದಸರಾ ದರ್ಶನ’ ಬಸ್ ಸೇವೆಗೆ ಪ್ರವಾಸಿಗರಿಂದ ಅಭೂತಪೂರ್ವ ಯಶಸ್ಸು ಬಂದಿದೆ. ಹತ್ತು ದಿನಗಳಲ್ಲಿ 1,038 ಮಂದಿ ಪ್ರಯಾಣಿಸಿದ್ದಾರೆ. ಮೊದಲ ದಿನ ಮೂರು ಬಸ್ ಸಂಚರಿಸಿದರೆ ಅ.2ರಂದು ಒಂದೇ ದಿನ 22 ಬಸ್ ಕಾರ್ಯಾಚರಿಸಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಮಂದಿ ಮಾತ್ರವಲ್ಲದೆ ಬೆಂಗಳೂರು, ಮೈಸೂರು, ಶಿವಮೊಗ್ಗ ಸಹಿತ ವಿವಿಧ ಜಿಲ್ಲೆಗಳ ಯುವಕರು, ಮಹಿಳೆಯರು, ಹಿರಿಯ ನಾಗಿರಕರು ಕೂಡ ಪ್ರವಾಸಿ ತಾಣ ವೀಕ್ಷಣೆಗೆ ಆಸಕ್ತಿ ತೋರಿದ್ದರು.
ದೀಪಾವಳಿಗೆ ಮತ್ತೆ “ಟೂರ್ ಬಸ್’
ನವರಾತ್ರಿ ಹಿನ್ನೆಲೆಯಲ್ಲಿ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಿಂದ ಆರಂಭಗೊಂಡ “ಮಂಗಳೂರು ದಸರಾ ದರ್ಶನ’ ಬಸ್ ಟೂರ್ ಯಶಸ್ಸಿನ ಹಿನ್ನೆಲೆಯಲ್ಲಿ ಮುಂಬರುವ ದೀಪಾವಳಿಗೂ ಇದೇ ರೀತಿ ಟೂರ್ ಪ್ಯಾಕೇಜ್ ಆರಂಭಿಸಲು ಕೆಎಸ್ಸಾರ್ಟಿಸಿ ಚಿಂತನೆ ನಡೆಸುತ್ತಿದೆ. ಮಂಗಳೂರು ಮತ್ತು ತುಸು ಹೊರ ಭಾಗದ ಪ್ರಮುಖ ಪ್ರವಾಸಿ ತಾಣಗಳ ಭೇಟಿಗೆ ಬಸ್ ಸೇವೆ ಆರಂಭಕ್ಕೆ ಯೋಜನೆ ರೂಪಿಸುತ್ತಿದೆ.
ಕೆ.ಎಸ್.ಆರ್.ಟಿ.ಸಿ.ಯಿಂದ ಕೆಲ ದಿನಗಳ ಹಿಂದೆ ಆರಂಭಿಸಿದ “ಮಂಗಳೂರು ದಸರಾ ದರ್ಶನ’ ಬಸ್ ಟೂರ್‌ಗೆ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ದೀಪಾವಳಿ ವೇಳೆಯೂ ಇದೇ ರೀತಿ ಪ್ಯಾಕೇಜ್ ಟೂರ್ ಆರಂಭಿಸುವ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ. ಮಂಗಳೂರಿನಲ್ಲಿ ಈ ಹಿಂದೆ ಇದ್ದಂತೆ ಪ್ರವಾಸಿ ಬಸ್ ಆರಂಭಿಸುವ ನಿಟ್ಟಿನಲ್ಲಿಯೂ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗುತ್ತದೆ. –ರಾಜೇಶ್ ಶೆಟ್ಟಿ, ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ