ಮಹಾನಗರ: ನಗರದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲು ಕೆಎಸ್ಸಾರ್ಟಿಸಿ ಮುಂದಾಗಿದ್ದು, ಹಳೆಯ ಪರವಾನಿಗೆಯ ಮೂಲಕವೇ ಬಸ್ ಕಾರ್ಯಾ ಚರಣೆಗೆ ಮುಂದಾಗಿದೆ. ಇನ್ನೇನು ಸದ್ಯದಲ್ಲೇ ಬಸ್ ಸಂಚಾರ ಆರಂಭಗೊಳ್ಳಲಿದೆ.
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ಬಸ್ ಕಾರ್ಯಾಚರಣೆಗೆ ಈಗಾ ಗಲೇ ಕೆಎಸ್ಸಾರ್ಟಿಸಿಗೆ ಪರವಾನಿಗೆ ಇದೆ. ಆದರೆ ಈ ಮಾರ್ಗದಲ್ಲಿ ಸದ್ಯ ಯಾವುದೇ ಬಸ್ ಸಂಚರಿಸುತ್ತಿಲ್ಲ. ಇದೀಗ ಅದೇ ಹಳೆಯ ಪರವಾನಿಗೆಯಲ್ಲಿ ಎ.ಸಿ. ಬಸ್ ಕಾರ್ಯಾಚರಿಸಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳ ಜತೆಗೂ ಚರ್ಚೆ ನಡೆಸಲಾಗಿದ್ದು, ಕೆಲವೇ ದಿನ ಗಳಲ್ಲಿ ಈ ರೂಟ್‌ನಲ್ಲಿ ಬಸ್ ಕಾರ್ಯಾಚರಣೆಗೊಳ್ಳುವ ನಿರೀಕ್ಷೆ ಇದೆ.
ವಿಮಾನ ನಿಲ್ದಾಣಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲು ಕೆಎಸ್ಸಾರ್ಟಿಸಿಗೆ ಕೆಲವು ವಾರಗಳ ಹಿಂದೆಯೇ ನಾಲ್ಕು ಹವಾನಿಯಂತ್ರಿತ ಬಸ್‌ಗಳು ಬಂದಿದ್ದು, ಆರ್‌ಟಿಒ ಹೊಸ ಪರವಾನಿಗೆ ನೀಡಿರಲಿಲ್ಲ. ಈ ಮಾರ್ಗ ದಲ್ಲಿ ತಾತ್ಕಾಲಿಕ ಪರವಾನಿಗೆ ನೀಡುವಂತೆ ಕೆಎಸ್ಸಾರ್ಟಿಸಿಯಿಂದ ಸಾರಿಗೆ ಇಲಾಖೆಗೆ ಮನವಿ ಮಾಡಲಾಗಿತ್ತು. ಆದರೆ ಈ ಹಿಂದೆ ಮಂಗಳೂರು ಆರ್‌ಟಿಒ ವ್ಯಾಪ್ತಿಯಲ್ಲಿ ಆದಂತಹ ಅಧಿಸೂಚನೆಯ ಅನ್ವಯ ನಿಯಮಗಳನ್ನು ಪರಿಶೀಲಿಸಿದ ಬಳಿಕವೇ ಸೂಕ್ತ ರೂಟ್ ನಲ್ಲಿ ಪರವಾನಿಗೆ ನೀಡಲು ಸಾರಿಗೆ ಇಲಾಖೆ ನಿರ್ಧರಿಸಿತ್ತು. ಬಸ್ ಸಂಚಾರ ವಿಳಂಬದ ಹಿನ್ನೆಲೆಯಲ್ಲಿ “ಬಸ್ ಬಂದರೂ ಪರವಾನಿಗೆ ಸಿಕ್ಕಿಲ್ಲ’ ಎಂಬ ಶೀರ್ಷಿಕೆಯಡಿ “ಉದಯವಾಣಿ ಸುದಿನ’ ವಿಶೇಷ ವರದಿ ಪ್ರಕಟಿಸಿತ್ತು. ಇದೀಗ ಬಸ್ ಕಾರ್ಯಾಚರಣೆಗೆ ವಿಳಂಬ ಮಾಡದೆ ಹಳೆಯ ಪರ್ಮಿಟ್‌ನಲ್ಲಿ ಬಸ್ ಆರಂಭಕ್ಕೆ ಕೆಎಸ್ಸಾರ್ಟಿಸಿ ಮುಂದಾಗಿದೆ.
ವೇಳಾಪಟ್ಟಿ ಶೀಘ್ರ: ಬಸ್ ಕಾರ್ಯಾಚರಣೆ ಅಂತಿಮಗೊಂಡ ಬಳಿಕ ಬಸ್‌ಗಳ ವೇಳಾ ಪಟ್ಟಿ, ಪ್ರಯಾಣದರವನ್ನೂ ಪ್ರಕಟಿಸುವ ನಿರೀಕ್ಷೆ ಇದೆ.
ಮಣಿಪಾಲದಿಂದ ವಿಮಾನ ನಿಲಾಣಕ್ಕೆ ಬಸ್
ಮಣಿಪಾಲ – ಉಡುಪಿ ಮಾರ್ಗವಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಸ್ ಕಾರ್ಯಾಚರಣೆಗೆ ಕೆಎಸ್ಸಾರ್ಟಿಸಿ ಇಂಗಿತ ವ್ಯಕ್ತಪಡಿ ಸಿದೆ. ಈ ರೂಟ್‌ನಲ್ಲಿಯೂ ಈ ಹಿಂದೆಯೇ ಪರವಾನಿಗೆ ಇತ್ತು. ಆದರೆ ಬಸ್ ಕಾರ್ಯಾಚರಣೆ ನಡೆಸುತ್ತಿರಲಿಲ್ಲ. ಈ ಬಸ್ ನಗರಕ್ಕೆ ಆಗಮಿಸದೆ ಏರ್‌ಪೋರ್ಟ್‌ನಿಂದ ನೇರವಾಗಿ ಮಣಿಪಾಲಕ್ಕೆ ಸಂಚರಿಸಲಿದೆ. ಬಸ್ ಸಂಚಾರಕ್ಕೆ ಅನುಮತಿ ಕೋರಿ ಕೆಎಸ್ಸಾರ್ಟಿಸಿ ಆರ್‌ಟಿಒ ಜತೆ ಈಗಾಗಲೇ ಚರ್ಚೆ ನಡೆಸಿದೆ.