ಉಡುಪಿ: ಆರನೇ ವೇತನ ಆಯೋಗದ ಶಿಫಾರಸು ಅನ್ವಯಕ್ಕೆ ಒತ್ತಾಯಿಸಿ ರಾಜ್ಯ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದರೆ, ಉಡುಪಿಯ ಡಿಪೋದಲ್ಲಿ ಮೆಕ್ಯಾನಿಕ್ ಶ್ರೀಕಾಂತ್ ರೆಡ್ಡಿ ಕಣ್ಣೀರು ಸುರಿಸುತ್ತಾ ತಮ್ಮ ಅಳಲು ತೋಡಿಕೊಂಡರು.
ಆರನೇ ವೇತನ ಆಯೋಗದ ಸೌಲಭ್ಯ ಒದಗಿಸಬೇಕು ಎಂದು ಇದರ ನೌಕರರು ಪ್ರತಿಭಟಿಸುತ್ತಿದ್ದರೆ ನಮ್ಮ ಮ್ಯಾನೇಜರ್ ನನ್ನನ್ನು ಕೂಡಿ ಹಾಕಿ ಕೆಲಸ ಮಾಡುವಂತೆ ಬೆದರಿಸಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ:ಉಡುಪಿ: ಕರ್ತವ್ಯಕ್ಕೆ ಹಾಜರಾಗದ ಕೆಎಸ್ಆರ್ ಟಿಸಿ ನೌಕರರು, ದೂರದೂರಿನ ಪ್ರಯಾಣಿಕರ ಪರದಾಟ
ನನ್ನನ್ನು ಇಲ್ಲಿ ಕೂಡಿ ಹಾಕಿ ಕೆಲಸ ಮಾಡಿಸಲಾಗುತ್ತಿದೆ. ಮುಷ್ಕರ ದಿನವೂ ನಾನು ಯಾಕೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ಯಾರೂ ಪ್ರಶ್ನಿಸುತ್ತಿಲ್ಲ ಯಾಕೆ? ಮ್ಯಾನೇಜರ್ ನನ್ನನ್ನು ಬೆಳಗ್ಗೆ ಲಾಕ್ ಮಾಡಿ ಹೊರಗೆ ಹೋಗದಂತೆ ತಡೆದಿದ್ದಾರೆ. ಈ ಪ್ರಕರಣ ಇತ್ಯರ್ಥ ಆಗುವವರೆಗೂ ಕರ್ತವ್ಯ ಮಾಡಬೇಕು ಎಂದು ಭಯ ಹುಟ್ಟಿಸಿದ್ದಾರೆ. ನಾನೊಬ್ಬ ಬಡವ. ಕೆಎಸ್ಸಾರ್ಟಿಸಿ ಸಂಸ್ಥೆಯನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದೇನೆ. ನನಗೆ ಭಯ ಹುಟ್ಟಿಸಿದ್ದರಿಂದ ನಾನು ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧಿಕಾರಿಗಳ ಬಳಿ ಹಣವಿದೆ. ನಮ್ಮ ಬಳಿ ಹಣವಿಲ್ಲ. ಅದಕ್ಕಾಗಿ ಸಂಬಳ ಏರಿಕೆ ಮಾಡಬೇಕು ಎಂದು ಕೇಳುತ್ತಿದ್ದೇವೆ ಎಂದು ಭಾವುಕರಾಗಿ ಹೇಳಿದರು.
ಹಣವಿದ್ದರೆ ರಾಜಕಾರಣಿಯಾಗುತ್ತಿದ್ದೆ: ರಾಜಕಾರಣಿಗಳಿಗೆ ನಮ್ಮಂತವರ ಕಷ್ಟ ಅರ್ಥವಾಗುವುದಿಲ್ಲ, ನಾವು ಮತ ಹಾಕಿರುವುದರಿಂದ ಇವರೆಲ್ಲ ರಾಜಕಾರಣ ಮಾಡುತ್ತಿದ್ದಾರೆ. ನನ್ನ ಹತ್ತಿರ ಹಣವಿದ್ದರೆ ನಾನೇ ರಾಜಕಾರಣ ಮಾಡುತ್ತಿದ್ದೆ. ಅರ್ಚಕರಿಗೆ ಆರನೇ ವೇತನ ಆಯೋಗದ ವೇತನ ಕೊಡುತ್ತಾರೆ ನಾವೇನು ಸತ್ತಿದ್ದೀವಾ? ನಿಮ್ಮ ಸ್ವಂತಕ್ಕೆ ನೀವು ರಾಜಕಾರಣ ಮಾಡುವುದಲ್ಲ, ಜನರ ಸೇವೆ ಮಾಡಿ. ಜಾತಿ ಜಾತಿ ಎಂದು ಬಡಿದಾಡಿಕೊಳ್ಳುವ ಮೂಲಕ ಶಾಸಕರು, ಸಚಿವರು ಕೀಳುಮಟ್ಟಕ್ಕೆ ಇಳಿಯಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.