Advertisement

ಕೆಎಸ್ಸಾರ್ಟಿಸಿ ಮಂಗಳೂರು ನಿಲ್ದಾಣ: 5 ರೂ.ಗೆ ಸ್ಯಾನಿಟರಿ ನ್ಯಾಪ್‌ಕಿನ್‌ ಲಭ್ಯ

01:07 AM Feb 07, 2020 | mahesh |

ಮಂಗಳೂರು: ಕೆಎಸ್ಸಾರ್ಟಿಸಿಯು ಮಹಿಳಾ ಸ್ನೇಹಿಯಾಗುತ್ತಿದ್ದು, ನಗರದ ಬಸ್‌ ನಿಲ್ದಾಣದಲ್ಲಿ 5 ರೂ.ಗೆ ಸ್ಯಾನಿಟರಿ ನ್ಯಾಪ್‌ಕಿನ್‌ ವಿತರಣೆ ಜಾರಿಗೆ ತಂದಿದೆ. ರಾಜ್ಯದ 10 ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣಗಳಲ್ಲಿ ಇದು ಅಳವಡಿಕೆಯಾಗಿದೆ. ಮಂಗಳೂರು ಕೆಎಸ್ಸಾರ್ಟಿಸಿ ನಿಲ್ದಾಣದಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಅನುಷ್ಠಾನಗೊಂಡಿದ್ದು, ಮಹಿಳೆಯರ ಶೌಚಾಲಯದ ಒಳಗೆ ವಿತರಕ ಯಂತ್ರ ಮತ್ತು ಬಳಸಿದ ನ್ಯಾಪ್‌ಕಿನ್‌ ಸುಡುವ ಯಂತ್ರ ಅಳವಡಿಸಲಾಗಿದೆ. ಮಹಿಳೆಯರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.

Advertisement

ಈ ಯಂತ್ರದಲ್ಲಿ ಒಮ್ಮೆಗೆ 100 ಪ್ಯಾಡ್‌ಗಳನ್ನು ಇರಿಸಬಹುದಾಗಿದೆ. ಹೌಸ್‌ ಕೀಪಿಂಗ್‌ನವರಲ್ಲಿ ದಾಸ್ತಾನು ಇದ್ದು, ಯಂತ್ರದಲ್ಲಿ ಖಾಲಿಯಾದಾಗ ತುಂಬಿಸುತ್ತಾರೆ. ಕಾಯಿನ್‌ ಹಾಕಿದರೆ ನ್ಯಾಪ್‌ಕಿನ್‌ ನ್ಯಾಪ್‌ಕಿನ್‌ ಪಡೆಯಲು ಮತ್ತು ಬಳಸಿದ ನ್ಯಾಪ್‌ಕಿನ್‌ ಸುಡಲು ಸೇರಿ ಒಟ್ಟು 2 ಯಂತ್ರಗಳಿವೆ. 5 ರೂ. ನಾಣ್ಯ ಹಾಕಿ ನ್ಯಾಪ್‌ಕಿನ್‌ ಪಡೆಯಬೇಕು. ನಾಣ್ಯ ಹೇಗೆ ಹಾಕಬೇಕು, ಯಂತ್ರದ ಬಳಕೆ ಹೇಗೆ ಎಂಬ ಬಗ್ಗೆ ಅಲ್ಲೇ ಮಾಹಿತಿ ಇದೆ. ಹೆಚ್ಚಿನ ಮಾಹಿತಿಯನ್ನು ಹೌಸ್‌ಕೀಪಿಂಗ್‌ ಸಿಬಂದಿಯಿಂದ ಪಡೆಯಬಹುದು.

10 ನಿಲ್ದಾಣಗಳಲ್ಲಿ ನ್ಯಾಪ್‌ಕಿನ್‌ ಯಂತ್ರ
ಮೊದಲ ಹಂತದಲ್ಲಿ ಬೆಂಗಳೂರಿನ ಕೆಂಪೇಗೌಡ ಬಸ್‌ ನಿಲ್ದಾಣದ 2 ಡಿಪೋಗಳಲ್ಲಿ ಅಳವಡಿಸಲಾಗಿತ್ತು. ಎರಡನೇ ಹಂತದಲ್ಲಿ ಬೆಂಗಳೂರಿನ ಶಾಂತಿನಗರ ಡಿಪೋ, ಮೈಸೂರು ರಸ್ತೆಯ ಸ್ಯಾಟ್‌ಲೆçಟ್‌ ಬಸ್‌ ನಿಲ್ದಾಣ, ದಾವಣಗೆರೆ, ಮೈಸೂರು, ಮಂಗಳೂರು, ಹಾಸನ, ಚಿತ್ರದುರ್ಗ, ಶಿವಮೊಗ್ಗ ಸೇರಿದಂತೆ 10 ನಿಲ್ದಾಣಗಳಲ್ಲಿ ಅಳವಡಿಸಲಾಗಿದೆ.

ತಾಲೂಕು ಮಟ್ಟಕ್ಕೂ ವಿಸ್ತರಿಸಲು ಚಿಂತನೆ
ಈ ಕ್ರಮಕ್ಕೆ ಮಹಿಳಾ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದ ಬಸ್‌ ನಿಲ್ದಾಣದಲ್ಲೂ ಈ ಯಂತ್ರ ಅಳವಡಿಸುವ ಯೋಚನೆ ಇದೆ.
– ಶಿವಯೋಗಿ ಎಸ್‌. ಕಳಸದ್‌, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next