ಗುಡಿಬಂಡೆ: ತಾಲೂಕಿಗೆ ಸೂಕ್ತ ಬಸ್ ಕಲ್ಪಿಸಲು ಕೆಎಸ್‌ಆರ್‌ಟಿಸಿ ಸಂಪೂರ್ಣ ವಿಫಲವಾಗಿದೆ. ನ.14ರಿಂದ ಗುಡಿಬಂಡೆ ತಾಲೂಕನ್ನು ಕೆಂಪು ಬಸ್ ರಹಿತ ಮಾಡಲು ಹೋರಾಟ ಪ್ರಾರಂಭಿಸುತ್ತಿದ್ದೇವೆ ಎಂದು ಸಾರಿಗೆ ಘಟಕ ಸ್ಥಾಪನಾ ಹೋರಾಟ ವೇದಿಕೆ ಅಧ್ಯಕ್ಷ ಜಿ.ವಿ.ಗಂಗಪ್ಪ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿ, ಸಾರ್ವಜನಿಕ ಸೇವೆಗೆಂದು ಗ್ರಾಮೀಣ ಪ್ರದೇಶದ ಬಸ್ ಸಂಪೂರ್ಣವಾಗಿ ಬಂದ್ ಮಾಡಿ, ರಾಜ್ಯದಲ್ಲಿ ಯಾವುದಾದರು ದೊಡ್ಡ ಕಾರ್ಯಕ್ರಮಗಳು ನಡೆದರೆ, ರಾಜಕೀಯ ಸಮಾವೇಶ, ಮದುವೆ ಸಮಾರಂಭ, ಜಾತ್ರಾ ವಿಶೇಷ ಹೆಸರಿನಲ್ಲಿ ವಾಹನಗಳನ್ನು ಬಾಡಿಗೆಗೆ ಕಳುಹಿಸಲಾಗುತ್ತಿರುವುದನ್ನು ನಾವು ಖಂಡಿಸುತ್ತಿದ್ದೇವೆ. ನಾವು ಗುಡಿಬಂಡೆಯನ್ನು ಕೆಂಪು ಬಸ್ ರಹಿತ ಹೋರಾಟಕ್ಕೆ ಮತ್ತೆ ಗುಡಿಬಂಡೆ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂದೆ ಪ್ರತಿಭಟನೆ ಮುಂದುವರಿಸುತ್ತೇವೆ ಎಂದರು.
ಬಸ್ ಡಿಪೋಗಾಗಿ ಸಾಕಷ್ಟು ಹೋರಾಟ: ಜೂನ್ 29ರಂದು ಗುಡಿಬಂಡೆ ಸಾರ್ವಜನಿಕರ ಸಹಕಾರದೊಂದಿಗೆ ಬಂದ್ ಮಾಡಿ, ನಂತರದ ದಿನಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಆ ವೇಳೆ ಸಾರಿಗೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ತಾಲೂಕು ಕೇಂದ್ರದಿಂದಲೇ ಬಸ್‌ಗಳು ಚಾಲನೆ ಮಾಡುವಂತೆ ಹಾಗೂ ಹೆಚ್ಚಿನ ಮಾರ್ಗಗಳನ್ನು ಕಲ್ಪಿಸಿಕೊಡುತ್ತೇವೆ ಎಂದು ಹೇಳಿ, ಪ್ರತಿಭಟನಾಕಾರರ ಮನಹೊಲಿಸಿದ್ದರು.
ಆದರೆ, ಭರವಸೆ ನೀಡಿ 6 ತಿಂಗಳು ಕಳೆದರೂ, ವಿಶೇಷ ಬಸ್ ಇರಲಿ, ಇರುವ ಬಸ್‌ಗಳನ್ನೇ ನಿಲ್ಲಿಸುತ್ತಾ ಬರುತ್ತಿದ್ದಾರೆ. ಇದರಿಂದ ಗುಡಿಬಂಡೆಯಿಂದ ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಗೌರಿಬಿದನೂರು ಸೇರಿದಂತೆ ಇತರೆ ಸ್ಥಳಗಳಿಗೆ ಹೋಗಿ ಬರುವ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು, ಪ್ರಯಾಣಿಕರು, ರೋಗಿಗಳಿಗೆ ಸಮಸ್ಯೆಯಾಗಿದೆ. ಇವರೆಲ್ಲರೂ ಖಾಸಗಿ ಸಾರಿಗೆ ಅವಲಂಬಿಸುವಂತಾಗಿದೆ. ಈಗಾಗಲೇ ಗುಡಿಬಂಡೆ ಬಸ್ ಡಿಪೋಗಾಗಿ ಸಾಕಷ್ಟು ಹೋರಾಟಗಳನ್ನು ನಡಸಿದ್ದೇವೆ ಎಂದು ಹೇಳಿದರು.
ಗುಡಿಬಂಡೆ ತಾಲೂಕಿನಲ್ಲಿ ಸಮರ್ಪಕ ಸಾರಿಗೆ ಬರಬೇಕಾದರೆ ಬಸ್ ಡಿಪೋ ನೀಡಿ, ಇಲ್ಲ ಕೆಂಪು ಬಸ್ ರಹಿತ ಮಾಡಲು ನಾವು ಸಿದ್ಧವಾಗಿದ್ದು, ಸಾರಿಗೆ ಅಧಿಕಾರಿಗಳೇ ನಾವು ಮುಂದೆ ಖಾಸಗಿ ಸಾರಿಗೆ ವ್ಯವಸ್ಥೆಗೆ ಮೊರೆ ಹೋಗಬೇಕಾದ ಪರಿಸ್ಥಿತಿಯನ್ನು ಗುಡಿಬಂಡೆ ಜನತೆಗೆ ನಿರ್ಮಾಣ ಮಾಡಿದ್ದಾರೆ ಎಂದು ದೂರಿದರು.