Advertisement

ಗೃಹಬಂಧನದಲ್ಲಿ ಕೆಎಸ್ಸಾರ್ಟಿಸಿ ಚಾಲನ ಸಿಬಂದಿ

12:50 AM Mar 29, 2020 | Sriram |

ಬೆಂಗಳೂರು: ಅರಿವಿಲ್ಲದೆ ಆರೆಂಟು ಗಂಟೆಗಳ ಕಾಲ ಕೋವಿಡ್‌ 19 ವೈರಸ್‌ ಸೋಂಕಿತರೊಂದಿಗೆ ಪ್ರಯಾಣ ಬೆಳೆಸಿದ ಸುಮಾರು 22 ಚಾಲನ ಸಿಬಂದಿ ಗೃಹ ಬಂಧನಕ್ಕೆ ಗುರಿಯಾಗಿದ್ದಾರೆ. ಬೆನ್ನಲ್ಲೇ ಅವರೊಂದಿಗೆ ಆಕಸ್ಮಿಕವಾಗಿ ಸಂಪರ್ಕ ಹೊಂದಿದ್ದ ನೂರಾರು ಮಂದಿ ಈಗ ಬೆಂಕಿ ಮೇಲೆ ನಿಂತಂತೆ ಚಡಪಡಿಸುತ್ತಿದ್ದಾರೆ.

Advertisement

ಕೆಎಸ್‌ಆರ್‌ಟಿಸಿ 18 ಮತ್ತು ಬಿಎಂಟಿಸಿಯ 4 ಚಾಲನ ಸಿಬಂದಿ ದಾರಿಯುದ್ದಕ್ಕೂ ನಿಲ್ದಾಣ ಮತ್ತು ವಿಭಾಗೀಯ ನಿಯಂತ್ರಕರು, ಸಹೋದ್ಯೋಗಿ ಚಾಲಕ ಮತ್ತ ನಿರ್ವಾಹಕರ ಕೈಕುಲುಕಿದ್ದಾರೆ. ದಾರಿ ಮಧ್ಯೆ ಬಸ್‌ ನಿಲ್ಲಿಸಿ, ಚಹಾ-ಕಾಫಿ ಹೀರಿದ್ದಾರೆ. ಹೀಗೆ ಆಕಸ್ಮಿಕವಾಗಿ ಸಂಪರ್ಕಕ್ಕೆ ಬಂದವರು ನೂರಾರು ಮಂದಿ ಇದ್ದಾರೆ. ಅವರೆಲ್ಲರ ಭವಿಷ್ಯವನ್ನು “ಗೃಹ ಬಂಧನ’ದಲ್ಲಿರುವ ಈ 22 ಚಾಲನ ಸಿಬಂದಿಯ ಆರೋಗ್ಯ ನಿರ್ಧರಿಸಲಿದೆ.

ಇಲ್ಲಿ ಸಾಮಾನ್ಯವಾಗಿ ಚಾಲಕನಿಗಿಂತ ನಿರ್ವಾಹಕರು ಪ್ರಯಾಣಿಕರೊಂದಿಗೆ ಹೆಚ್ಚು ಸಂಪರ್ಕದಲ್ಲಿ ಇರುತ್ತಾರೆ. ನಿಯಂತ್ರಕರ ಬಳಿ ಎಂಟ್ರಿ ಮಾಡಿಸಿಕೊಳ್ಳಲು ಮತ್ತಿತರ ಕಾರಣಗಳಿಗೆ ಹೋಗುವವರೂ ಇದೇ ಸಿಬಂದಿ. ಈ ಹಿನ್ನೆಲೆಯಲ್ಲಿ ಸೋಂಕಿನ ಸಾಧ್ಯತೆ ನಿರ್ವಾಹಕರಿಂದ ಹೆಚ್ಚಿರುತ್ತದೆ. ಆದರೆ ಸೋಂಕಿತ ವ್ಯಕ್ತಿ ಪ್ರಯಾಣ ಮಾಡಿದ ವಾರದ ಅನಂತರ ಇದು ಗೊತ್ತಾಗಿದೆ. ಹಾಗೊಂದು ವೇಳೆ ಸೋಂಕು ಲಕ್ಷಣಗಳು ಕಂಡುಬಂದರೆ ಉಳಿದವರ ಪತ್ತೆ ಸವಾಲಾಗಲಿದೆ. ಆದ್ದರಿಂದ ಸ್ವಯಂ ಜಾಗೃತಿ ಹೆಚ್ಚು ಸೂಕ್ತ ಎಂದು ಅಧಿಕಾರಿಗಳು ತಿಳಿಸುತ್ತಾರೆ.

ಸದ್ಯಕ್ಕೆ ನಿರಾಳ
ಇನ್ನು ಈಗಾಗಲೇ 22 ಕುಟುಂಬಗಳ ಪೈಕಿ ಬಹುತೇಕರು ಎಂಟು-ಹತ್ತು ದಿನ ಕ್ವಾರಂಟೈನ್‌ನಲ್ಲಿ ಕಳೆದಿದ್ದು, ನಿಗಮ ಹಾಗೂ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಲಗಳ ಪ್ರಕಾರ ಯಾವುದೇ ಅನಾರೋಗ್ಯದ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಹಾಗಾಗಿ ಸದ್ಯಕ್ಕೆ ಉಳಿದವರೂ ನಿರಾಳ.

ಅಂದಹಾಗೆ ಬೆಂಗಳೂರಿನಿಂದ ಮಡಿಕೇರಿ, ಉಪ್ಪಿನಂಗಡಿ, ಶಿರಾ, ದಾವಣಗೆರೆ, ಗೋವಾ- ಬೆಟಗೇರಿ (ಗದಗ ಜಿಲ್ಲೆ), ಮೈಸೂರು- ನಂಜನಗೂಡು ಮಧ್ಯೆ ಸಂಚರಿಸುವ ನಾಲ್ಕು ಬಸ್‌ಗಳು, ಬಿಎಂಟಿಸಿಯ ಎರಡು ಬಸ್‌ಗಳ 22 ಚಾಲನ ಸಿಬಂದಿ ಮೇಲೆ ನಿಗಾ ಇಡಲಾಗಿದೆ.
ಪ್ರಾಥಮಿಕ ತಪಾಸಣೆಯಲ್ಲೇ ಈ ಚಾಲನ ಸಿಬಂದಿಗೆ ಯಾವುದೇ ಸಮಸ್ಯೆ ಇಲ್ಲದಿರು
ವುದು ದೃಢಪಟ್ಟಿದೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಕ್ವಾರಂಟೈನ್‌ ಮಾಡಲಾಗಿದೆ. ಇನ್ನೊಂದು ವಾರದಲ್ಲಿ ಎಲ್ಲರೂ ಉಳಿದವರಂತೆ ಓಡಾಡಲಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

Advertisement

ಮುನ್ನೆಚ್ಚರಿಕೆ ಕ್ರಮ
ಎಲ್ಲ ಚಾಲನ ಸಿಬಂದಿ ಆರೋಗ್ಯವಾಗಿದ್ದಾರೆ. ಹಾಗಾಗಿ ಉಳಿದವರು ಆತಂಕಪಡುವ ಅಗತ್ಯವಿಲ್ಲ. ಆದಾಗ್ಯೂ ಅವರು ಭೇಟಿಯಾದ ನಿಯಂತ್ರಕರಿಗೆ ಈಗಾಗಲೇ ಸ್ವಯಂಪ್ರೇರಿತವಾಗಿ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ ಮತ್ತು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
– ಶಿವಯೋಗಿ ಕಳಸದ, ವ್ಯವಸ್ಥಾಪಕ ನಿರ್ದೇಶಕರು, ಕೆಎಸ್‌ಆರ್‌ಟಿಸಿ.

Advertisement

Udayavani is now on Telegram. Click here to join our channel and stay updated with the latest news.

Next