Advertisement

ಉಪ್ಪಿನಂಗಡಿ ಪಟ್ಟಣದಲ್ಲಿ ಕೆಎಸ್‌ಆರ್‌ಟಿಸಿಗಿಲ್ಲ ಸ್ವಂತ ನಿಲ್ದಾಣ!

04:18 PM Dec 09, 2017 | Team Udayavani |

ಉಪ್ಪಿನಂಗಡಿ: ಪುತ್ತೂರು ತಾಲೂಕಿನಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಉಪ್ಪಿನಂಗಡಿ ಪಟ್ಟಣದಲ್ಲಿ ಕೆಎಸ್‌ಆರ್‌ಟಿಸಿಗೆ ಸ್ವಂತ ಬಸ್‌ ನಿಲ್ದಾಣವೇ ಇಲ್ಲ..!

Advertisement

ಇದರ ಪರಿಣಾಮ, ದಿನ ನಿತ್ಯವೂ ಟ್ರಾಫಿಕ್‌ ಜಾಮ್‌ನಿಂದ ಪ್ರಯಾಣಿಕರು, ಬಸ್‌ ಚಾಲಕರು ಹೈರಾಣಾಗಿ ಹೋಗಿದ್ದಾರೆ. ಜನಪ್ರತಿನಿಧಿಗಳ ಹೊಸ ನಿಲ್ದಾಣದ ಆಶ್ವಾಸನೆ ಕಡತದೊಳಗೆ ಬಂಧಿಯಾಗಿದೆ. ಉದ್ದೇಶಿತ ಬಸ್‌ ನಿಲ್ದಾಣ ಸ್ಥಾಪನೆ ಆಗುವ ಭರವಸೆ ಕಮರುತ್ತಿದೆ. ದಿನೇ-ದಿನೇ ನಗರದಲ್ಲಿ ವಾಹನ, ಜನ ದಟ್ಟಣೆಯ ಸಮಸ್ಯೆ, ಸವಾಲು ಹೆಚ್ಚಾಗುತ್ತಿದೆ.

ಉಪ್ಪಿನಂಗಡಿ ಪಟ್ಟಣ
ಬ್ರಿಟಿಷರ ಕಾಲದಲ್ಲಿ ತಾಲೂಕು ಕೇಂದ್ರವಾಗಿದ್ದ ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಊರು. ಸಂಗಮ ಕ್ಷೇತ್ರವಾಗಿರುವ ಇಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನವಿದೆ. ಅನೇಕ ಶಿಕ್ಷಣ ಸಂಸ್ಥೆಗಳಿದ್ದು, ವಾಣಿಜ್ಯ ಚಟುವಟಿಕೆ ನಡೆಯುವ ಸ್ಥಳ. ಸಾವಿರಾರು ಜನರು ಇಲ್ಲಿಗೆ ಆಗಮಿಸುತ್ತಾರೆ. ಸಾರಿಗೆ ಹಾಗೂ ಖಾಸಗಿ ಸೇರಿ 150ಕ್ಕೂ ಹೆಚ್ಚು ಬಸ್‌ ಇಲ್ಲಿಂದ ಸಂಚರಿಸುತ್ತವೆ. ಅದಾಗ್ಯೂ ಇಲ್ಲಿ ಸುವ್ಯವಸ್ಥಿತ ಬಸ್‌ ನಿಲ್ದಾಣದ ನಿರ್ಮಾಣ ಆಗಿಲ್ಲ.

ಖಾಸಗಿ-ಸರಕಾರಿ ಜಟಾಪಟಿ
ಸ್ವಾತಂತ್ರ್ಯ ದೊರೆತ ಕಾಲದಲ್ಲಿ ಎರಡು ಖಾಸಗಿ ಬಸ್‌ ನಿಲುಗಡೆಯಾಗುತ್ತಿದ್ದವು. ವಾಹನಗಳ ಓಡಾಟದ ಪ್ರಮಾಣ ಹೆಚ್ಚಳ ವಾದ ಹಿನ್ನೆಲೆಯಲ್ಲಿ ಪಂಚಾಯತ್‌ ಅಧೀನದ ಬಸ್‌ ನಿಲ್ದಾಣಕ್ಕೆ ಸ್ಥಳಾಂತರ ಗೊಂಡಿತ್ತು. ಎರಡು ಎಕರೆ ಪ್ರದೇಶದಲ್ಲಿ ವಾಣಿಜ್ಯ ಸಂಕೀರ್ಣ, ಹೊಟೇಲ್‌ಗೆ ಬರುವ ಪ್ರಯಾಣಿಕರ ವಾಹನ ನಿಲುಗಡೆ, ಎಪಿಎಂಸಿ ಮಾರುಕಟ್ಟೆಗಳು ಇವೆ. ಉಳಿದ ಒಂದು ಎಕರೆ ಪ್ರದೇಶದಲ್ಲಿ ಖಾಸಗಿ ಮತ್ತು ಸರಕಾರಿ ಬಸ್‌ ಗಳು ನಿಲುಗಡೆ ಆಗುತ್ತಿವೆ. ಪ್ರಯಾಣಿಕರನ್ನು ಒಯ್ಯುವ ಪೈಪೋಟಿಯಲ್ಲಿ ಖಾಸಗಿ ಮತ್ತು ಸರಕಾರಿ ಬಸ್‌ ಚಾಲಕ, ನಿರ್ವಾಹಕರ ಮಧ್ಯೆ ಜಟಾಪಟಿ ಆಗುತ್ತಿರುತ್ತವೆ.

ಸಾರ್ವಜನಿಕರ ದಶಕದ ಬೇಡಿಕೆಯ ಫಲವಾಗಿ ಈಗಿರುವ ಬಸ್‌ ನಿಲ್ದಾಣದ ಮುಂಭಾಗದ ಅರಣ್ಯ ವಸತಿಗೃಹದ ನಿವೇಶನವನ್ನು ಕೆಎಸ್‌ಆರ್‌ಟಿಸಿ ಹೊಸ ಬಸ್‌ ನಿಲ್ದಾಣ ನಿರ್ಮಿಸಲು ವರ್ಗಾಯಿಸುವ ಕುರಿತು ಈ ಹಿಂದಿನ ಎಸಿ ಡಾ| ಕೆ.ವಿ. ರಾಜೇಂದ್ರ ಪ್ರಯತ್ನ ನಡೆಸಿದ್ದರು. ಪ್ರಕ್ರಿಯೆಗೆ ಚಾಲನೆ ನೀಡುವ ಹೊತ್ತಿಗೆ ಅವರಿಗೆ ವರ್ಗಾವಣೆ ಆಯಿತು. ಅನಂತರ ಪ್ರಯತ್ನ ಹಳ್ಳ ಹಿಡಿಯಿತು. ನಿವೇಶನ ವೀಕ್ಷಣೆಗೆ ಬಂದಿದ್ದ ಅಧಿಕಾರಿಗಳು ಸ್ಥಳ ಪರಿಶೀಲಿಸುವ ಬದಲು ತೀರ್ಥಕ್ಷೇತ್ರಗಳ ದರ್ಶನಗೈದು ಮರಳಿರುವ ನಿದರ್ಶನಗಳಿವೆ. ಹಾಗಾಗಿ ಮೂರುವರೆ ವರ್ಷಗಳಿಂದ ಹೊಸ ನಿಲ್ದಾಣದ ಕನಸು ನನಸಾಗುವ ಲಕ್ಷಣಗಳು ಕಾಣಿಸುತ್ತಿಲ್ಲ.

Advertisement

100ಕ್ಕೂ ಅಧಿಕ ಬಸ್‌ಗಳು
ಇಲ್ಲಿ ದಿನಂಪ್ರತಿ 150ಕ್ಕೂ ಅಧಿಕ ಬಸ್‌ಗಳು ನಿಲ್ಲುತ್ತವೆ. ಕೆಎಸ್‌ಆರ್‌ಟಿಸಿ 100, ಖಾಸಗಿ 50 ಬಸ್‌ಗಳಿವೆ. ಕೆಎಸ್‌ಆರ್‌ಟಿಸಿ ಬಸ್‌ಗಳ ಪೈಕಿ ಪುತ್ತೂರು-ಉಪ್ಪಿನಂಗಡಿ 50 ಟ್ರಿಪ್‌, ಬೆಂಗಳೂರು-20, ಮಂಗಳೂರು-25, ಧರ್ಮಸ್ಥಳ-15, ಸುಬ್ರಹ್ಮಣ್ಯ-18 ಹಾಗೂ ತಾಲೂಕಿನ ವಿವಿಧ ಭಾಗಗಳಿಗೆ ಬಸ್‌ಗಳು ಸಂಚರಿಸುತ್ತವೆ. ಒಂದು ಬಸ್‌ ನಿಲುಗಡೆಗೆ ಸಾರಿಗೆ ಸಂಸ್ಥೆ 2 ರೂ., ಖಾಸಗಿಯವರು 10 ರೂ. ಪಾವತಿಸುತ್ತಿದ್ದಾರೆ. 

ಸಚಿವರ ಬಳಿ ಪ್ರಸಾವ
ಉಪ್ಪಿನಂಗಡಿಯ ಕಾಂಗ್ರೆಸ್‌ ಮುಖಂಡ ನಜೀರ್‌ ಮಠ ಅವರು ಗುರುವಾರ ಸಂಜೆ ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮದ ಸಂದರ್ಭದಲ್ಲಿ ಸಚಿವ ರಮಾನಾಥ ರೈ ಅವರ ಬಳಿ ವಿಷಯ ಪ್ರಸ್ತಾಪಿಸಿ, ಮೂರುವರೆ ವರ್ಷದಿಂದ ನಮ್ಮ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡಿದ್ದರು. ಇದೇ ಸಂದರ್ಭ ಸಚಿವರು, ಅರಣ್ಯ ಇಲಾಖಾಧಿಕಾರಿಗೆ ಸೂಚನೆ ನೀಡಿ, ಅರಣ್ಯ ವಸತಿಗೃಹದ ನಿವೇಶನ ವರ್ಗಾಯಿಸುವ ಕುರಿತು ತತ್‌ಕ್ಷಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು. 

ಜಾಗ ಸಿಕ್ಕಿಲ್ಲ
ಹೊಸ ಬಸ್‌ ನಿಲ್ದಾಣಕ್ಕೆ ಸಂಬಂಧಿಸಿ ಅರಣ್ಯ ಇಲಾಖೆಗೆ ಸೇರಿದ ಜಾಗ ಪರಿಶೀಲಿಸಿದ್ದೇವೆ. ಆದರೆ ಸ್ಥಳ ನಮಗೆ ವರ್ಗಾವಣೆ ಆಗದೆ ಬಸ್‌ ನಿಲ್ದಾಣ ನಿರ್ಮಾಣ ಆಗಿಲ್ಲ. ಜಾಗ ಸಿಕ್ಕ ಕೂಡಲೇ ಬಸ್‌ ನಿಲ್ದಾಣ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು. 
ನಾಗರಾಜ ಶಿರಾಲಿ
ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ, ಪುತ್ತೂರು ವಿಭಾಗ

ಎಂ.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next