ತುಮಕೂರು: ವಿವಿದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರ ಸಂಘಟನೆ ಮುಷ್ಕರ ಕರೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಸ್ಥಗಿತವಾಗಿದೆ.
ಊರುಗಳಿಗೆ ತೆರಳಲು ಬಂದಿದ್ದ ಪ್ರಯಾಣಿಕರು ಪರದಾಟ ನಡೆಸುತ್ತಿದ್ದಾರೆ. ಜಿಲ್ಲಾ ಕೇಂದ್ರ ತುಮಕೂರಿನಿಂದ ಬೇರೆ ಕಡೆಗೆ ಹೋಗುವ ಪ್ರಯಾಣಿಕರು ಪರದಾಡುವ ದೃಶ್ಯ ಕಂಡು ಬಂದಿತು.
ಇದನ್ನೂ ಓದಿ:ಬಂಟ್ವಾಳದಲ್ಲೂ ಸಾರಿಗೆ ಸಂಚಾರ ಬಂದ್: ಖಾಸಗಿ ಬಸ್, ಕ್ಯಾಬ್ ಗಳತ್ತ ಮುಖ ಮಾಡಿದ ಜನ
ತಿಪಟೂರು, ಕುಣಿಗಲ್, ಪಾವಗಡ, ಮಧುಗಿರಿ, ಚಿಕ್ಕನಾಯಕನಹಳ್ಳಿ ಸೇರಿದಂತೆ ಹಲವು ಭಾಗಗಳಲ್ಲಿ ಬಸ್ ಸಂಚಾರ ಬಹುತೇಕ ಕ್ಷೀಣಿಸಿದ್ದು, ಖಾಸಗಿ ವಾಹನಗಳ ದರ್ಬಾರ ಹೆಚ್ಚಿದೆ. ಖಾಸಗಿ ವಾಹನಗಳ ಮಾಲೀಕರು ಮನಬಂದಂತೆ ಪ್ರಯಾಣ ದರ ವಸೂಲಿಗೆ ಇಳಿದಿದ್ದಾರೆ. ಇದರಿಂದ ಬೇರೆ ಬೇರೆ ಪ್ರದೇಶಗಳಿಂದ ಬಂದಿರುವ ಪ್ರಯಾಣಿಕರು ತಮ್ಮ ಊರಿಗೆ ತೆರಳಲು ಪರದಾಡುವಂತಾಗಿದೆ.
ಜಿಲ್ಲೆಯಲ್ಲಿ ಮುಷ್ಕರಕ್ಕೆ ಸಾರಿಗೆ ನೌಕರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಸರ್ಕಾರದ ಯಾವುದೇ ಬೆದರಿಕೆ ನಾವು ಬಗ್ಗೆ ಬಗ್ಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ತುಮಕೂರಿನ ಜಿಲ್ಲಾಡಳಿತ ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಿದ್ದು ಖಾಸಗಿ ಬಸ್ ಗಳಲ್ಲಿ ಪ್ರಯಾಣಿಕರು ಪ್ರಯಾಣ ಆರಂಭಿಸಿದ್ದಾರೆ. ಖಾಸಗಿ ವಾಹನಗಳು ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಕ್ಕೆ ಪ್ರವೇಶಿಸಿ, ನಿಗದಿಗಿಂತ ಅಧಿಕ ಪ್ರಯಾಣ ದರ ವಿಧಿಸಿ ಪ್ರಯಾಣಿಕರನ್ನು ಕರೆದೊಯ್ಯುತ್ತಿವೆ. ಹಲವೆಡೆ ಹಣ ಕೊಟ್ಟರೂ ತಮ್ಮ ಗ್ರಾಮಗಳಿಗೆ ತೆರಳು ವಾಹನಗಳಿಲ್ಲದೇ ಪ್ರಯಾಣಿಕರು ಪರದಾಟ ನಡೆಸಿದ್ದಾರೆ.
ಇದನ್ನೂ ಓದಿ: ಕರಾವಳಿಗೆ ತಟ್ಟದ ಬಸ್ ಬಂದ್ ಬಿಸಿ: ಮಂಗಳೂರು KSRTC ಬಸ್ ನಿಲ್ದಾಣದೊಳಗೆ ಬಂದ ಖಾಸಗಿ ಬಸ್ ಗಳು
ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಪ್ರಯಾಣಿಕರ ಸಂಖ್ಯೆಯಲ್ಲಿಯೂ ವಿರಳ ಕಂಡುಬಂದಿತು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಂಸಿಕೃಷ್ಣ ಮತ್ತಿತರ ಅಧಿಕಾರಿಗಳು ಪ್ರಯಾಣಿಕರಿಗೆ ತೊಂದರೆ ಆಗದಂತೆ ಗಮನ ಹರಿಸಿದ್ದು ಸೂಕ್ತ ಭದ್ರತೆಯನ್ನು ಒದಗಿಸಿದ್ದಾರೆ.