ರಾಮನಗರ: ನೂತನ ಎಕ್ಸ್‌ಪ್ರೆಸ್ ಹೈವೆ ಜಿಲ್ಲೆಯ ಜನಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಮೈಸೂರು-ಬೆಂಗಳೂರು ನಡುವೆ ಶೀಘ್ರ ಸಂಪರ್ಕ ಕಲ್ಪಿಸುವ ಎಕ್ಸ್‌ಪ್ರೆಸ್ ಹೈವೆ ಜಿಲ್ಲೆಯ ಕೆಲ ಪ್ರಮುಖ ಪ್ರದೇಶದ ಸಂಪರ್ಕ ಕಡಿದು ಹಾಕಿದೆ.
ಜಿಲ್ಲೆಯ ಪ್ರಮುಖ ಕೈಗಾರಿಕಾ ಪ್ರದೇಶವೆನಿಸಿರುವ ಬಿಡದಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲುಗಡೆ ಮಾಡದಿರುವುದು ಇದಕ್ಕೆ ತಾಜಾ ಉದಾಹರಣೆ.
ಹೌದು.., ನೂತನ ಎಕ್ಸ್‌ಪ್ರೆಸ್ ವೇ ನಿರ್ಮಾಣವಾದ ಬಳಿಕ ಬಹುತೇಕ ಕೆಎಸ್‌ಆರ್‌ಟಿಸಿ ಬಸ್ ಬಿಡದಿಗೆ ಬರುವುದನ್ನೇ ಬಿಟ್ಟು ಬಿಟ್ಟಿವೆ. ಸಾರಿಗೆ ಸಂಸ್ಥೆಯ ಸಾಕಷ್ಟು ಬಸ್ ಬಿಡದಿ ಬೈಪಾಸ್‌ನಲ್ಲೇ ಸಂಚರಿಸುತ್ತಿದ್ದು ಇದರಿಂದ ಬಿಡದಿಯಿಂದ ಬೆಂಗಳೂರು ಹಾಗೂ ಬೇರೆ ಕಡೆಗೆ ಹೋಗುವ ಪ್ರಯಾಣಿಕರು ಪರದಾಡುವಂತಾಗಿದೆ.
ಬಿಡದಿಗೆ ಬಾರದ ಬಸ್‌ಗಳು: ಎಕ್ಸ್‌ಪ್ರೆಸ್ ಹೈವೆ ನಿರ್ಮಾಣಕ್ಕೆ ಮೊದಲು ಎಲ್ಲಾ ಸಾರಿಗೆ ಸಂಸ್ಥೆಯ ಬಸ್ ಬಿಡದಿ ಮೂಲಕವೇ ಹಾಯ್ದು ಹೋಗುತ್ತಿದ್ದವರು. ಬಿಡದಿ ಪಟ್ಟಣದಲ್ಲಿ ಬಸ್ ನಿಲುಗಡೆ ಮಾಡುತ್ತಿದ್ದವು. ಇದರಿಂದಾಗಿ ಬಿಡದಿಯಿಂದ ಬೆಂಗಳೂರು ಹಾಗೂ ಮೈಸೂರಿನ ಕಡೆಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗುತ್ತಿತ್ತು. ಪ್ರಮುಖ ಕೈಗಾರಿಕಾ ಪ್ರದೇಶವಾಗಿರುವ ಬಿಡದಿಗೆ ಬೆಂಗಳೂರು, ರಾಮನಗರ, ಚನ್ನಪಟ್ಟಣ, ಮೈಸೂರು ಸೇರಿ ವಿವಿಧ ಕಡೆಯಿಂದ ಬರುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಇನ್ನು ಬಿಡದಿ ಹಾಗೂ ಸುತ್ತ ಮುತ್ತಲ ಪ್ರದೇಶದಲ್ಲಿ ಕೆಲಸ ಮಾಡುವ ಶಿಕ್ಷಕರ ಹಾಗೂ ವಿವಿಧ ಇಲಾಖೆಗಳ ನೌಕರರು ಪ್ರತಿನಿತ್ಯ ತಮ್ಮ ಸಂಚಾರಕ್ಕೆ ಸಾರಿಗೆ ಸಂಸ್ಥೆಯ ಬಸ್‌ಗಳನ್ನೇ ಆಶ್ರಯಿಸಿದ್ದಾರೆ. ಆದರೆ, ಸಾರಿಗೆ ಸಂಸ್ಥೆಯ ಬಸ್‌ಗಳು ಬಿಡದಿಯನ್ನು ಪ್ರವೇಶಿಸದೆ ಬೈಪಾಸ್‌ನಲ್ಲಿ ಸಂಚರಿಸುತ್ತಿರುವುದು ಪ್ರಯಾಣಿಕರಿಗೆ ಸಾಕಷ್ಟು ಸಮಸ್ಯೆಯಾಗಿದೆ.
ಬೈಪಾಸ್‌ನಲ್ಲಿ ಸಂಚರಿಸುತ್ತಿರುವುದು ಏಕೆ?: ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಐರಾವತ, ರಾಜಹಂಸ ಸೇರಿ ತಡೆರಹಿತ ಬಸ್‌ಗಳು ಬಿಡದಿ ಪಟ್ಟಣವನ್ನು ಪ್ರವೇಶಿಸದೆ ನೇರವಾಗಿ ಬೈಪಾಸ್‌ನಲ್ಲಿ ಹೋಗು ವುದು ಸಮಂಜಸ. ಆದರೆ, ಮಾಮೂಲಿ ಬಸ್‌ಗಳು ಬೈಪಾಸ್‌ನಲ್ಲಿ ಸಂಚರಿಸುವುದು ಯಾವ ನ್ಯಾಯ. ಇದರಿಂದಾಗಿ ನಿತ್ಯ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ ಎಂದು ಪ್ರಶ್ನಿಸುತ್ತಿರುವ ಬಿಡದಿ ನಿವಾಸಿಗಳು ಸಾರಿಗೆ ಸಂಸ್ಥೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ಬಿಡದಿ ಪಟ್ಟಣಕ್ಕೆ ಹೋಗಲು ಶೆಟಲ್ ಬಸ್‌ಗಳೇ ಗತಿ: ಬಿಡದಿ ಪಟ್ಟಣಕ್ಕೆ ಹೋಗಬೇಕು ಎಂದಾದಲ್ಲಿ ಶೆಟಲ್ ಬಸ್‌ಗಳನ್ನೇ ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನಲ್ಲಿ ಬಸ್ ಹತ್ತುವಾಗಲೇ ಬಿಡದಿ ಎಂದರೆ ಬಸ್ ಹತ್ತಿಸಿಕೊಳ್ಳುತ್ತಿಲ್ಲ. ಬಿಡದಿಗೆ ಬರಬೇಕು ಎಂದರೆ ಬಿಎಂಟಿಸಿ ಬಸ್‌ಗಳನ್ನೇ ಅವಲಂಬಿಸಬೇಕಾಗಿದೆ. ಶೆಟಲ್ ಬಸ್‌ಗಳಲ್ಲಿ ಪ್ರಯಾಣಿಸಲು ಸಮಯ ಸಾಕಷ್ಟು ತೆಗೆದುಕೊಳ್ಳುವ ಕಾರಣ ಸರ್ಕಾರಿ ನೌಕರರಿಗೆ ಸಮಸ್ಯೆಯಾಗುತ್ತಿದೆ.
ಬೈಪಾಸ್ ನಿರ್ಮಾಣ ಬಳಿಕ ಸಾರಿಗೆ ಸಂಸ್ಥೆಯ ಬಸ್ ಬಿಡದಿ ಪಟ್ಟಣ ಪ್ರವೇಶಿಸ ದೆ ನೇರವಾಗಿ ಬೈಪಾಸ್‌ನಲ್ಲಿ ಹೋಗುತ್ತಿವೆ. ಇದರಿಂದಾಗಿ ಬಿಡದಿಗೆ ಬರುವವರಿಗೆ, ಬಿಡದಿಯಿಂದ ಬೆಂಗಳೂರು, ಮೈಸೂರು ಕಡೆಗೆ ಹೋಗುವವರಿಗೆ ಸಮಸ್ಯೆಯಾಗುತ್ತಿದೆ. ಸಾರಿಗೆ ಸಂಸ್ಥೆ ಅಧಿಕಾರಿಗಳು ಕೂಡಲೇ ಇತ್ತ ಗಮನಹರಿಸಿ ಸಮಸ್ಯೆ ಪರಿಹರಿಸಬೇಕು.
-ಕುಮಾರ್, ಬಿಡದಿ ನಿವಾಸಿ