ಬೆಂಗಳೂರು: ಕೆಎಸ್‌ಆರ್‌ಟಿಸಿ ಪ್ರಯಾಣ ದರ ಶೇ. 10ರಷ್ಟು ಇಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ನಷ್ಟದಲ್ಲಿವೆ. ಆದರೂ ಪ್ರಯಾಣಿಕರ ಹಿತದೃಷ್ಟಿಯಿಂದ ಪ್ರಯಾಣ ದರ ಇಳಿಸಲು ಕೋರ ಲಾಗುವುದು ಎಂದು ಹೇಳಿದರು.
ಪ್ರಯಾಣ ದರ ಶೇ. 10 ಇಳಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರವಿವಾರ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಬಜೆಟ್ ಕುರಿತು ಸಾರಿಗೆ ಇಲಾಖೆ ವಿಚಾರವಾಗಿ ರವಿವಾರ ಮುಖ್ಯಮಂತ್ರಿ ಸಭೆ ಕರೆದಿದ್ದಾರೆ. ಈ ಬಗ್ಗೆ ನಾನು ಇಲಾಖೆ ಅಧಿಕಾರಿಗಳ ಜತೆ ಪೂರ್ವಭಾವಿ ಸಭೆ ನಡೆಸಿದ್ದೇನೆ. ಇಲಾಖೆಯ ನಾಲ್ಕು ನಿಗಮಗಳು ನಷ್ಟದಲ್ಲಿವೆ. ಆದರೆ, ಲಾಭ ಮಾಡುವ ಉದ್ದೇಶ ನಮ್ಮದಲ್ಲ. ಹೀಗಾಗಿ, ಶೇ. 10 ಪ್ರಯಾಣ ದರ ಇಳಿಕೆಗೆ ಮನವಿ ಮಾಡ ಲಾಗುವುದು ಎಂದರು.
ಈ ಬಾರಿಯ ಬಜೆಟ್‌ನಲ್ಲಿ ಹಲವಾರು ಯೋಜನೆ ಪ್ರಕಟಿಸಲು ತೀರ್ಮಾನಿಸಲಾಗಿದ್ದು, ಸಾರಿಗೆ ಇಲಾಖೆಗೆ 1000 ಕೋಟಿ ರೂ. ಬಜೆಟ್‌ನಲ್ಲಿ ಮೀಸಲಿಡಲು ಬೇಡಿಕೆ ಇಡ ಲಾಗುವುದು ಎಂದು ಹೇಳಿದರು.
ಮಹಿಳೆಯರ ಸಬಲೀಕರಣಕ್ಕೆ ನಮ್ಮ ಇಲಾಖೆ ಕ್ರಮ ಕೈಗೊಂಡಿದ್ದು, ಮಹಿಳೆಯರಿಗೆ ಉಚಿತವಾಗಿ ಚಾಲನೆ ತರಬೇತಿ ನೀಡಿ ಸಾರಿಗೆ ನಿಗಮಗಳಲ್ಲೇ ಉದ್ಯೋಗ ಕಲ್ಪಿಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆಯೂ ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು ಎಂದರು.
ರಿಯಾಯಿತಿ ಬಸ್ ಪಾಸ್ ಬಾಕಿ ಹಣ 341 ಕೋಟಿ ರೂ. ಸರಕಾರದ ಬಳಿಯೇ ಇದೆ. ಇದನ್ನು ಕೊಡುವಂತೆ ಒತ್ತಾಯ ಮಾಡುತ್ತೇವೆ ಎಂದರು.