Advertisement
ಇವುಗಳನ್ನು “ಬಸ್ ಆ್ಯಂಬುಲನ್ಸ್’ಗಳಾಗಿ ಪರಿವರ್ತಿಸಲು ಸಾಧ್ಯವಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಅಪಘಾತಕ್ಕೀಡಾದ ಗಾಯಾಳುವಿಗೆ “ಗೋಲ್ಡನ್ ಅವರ್’ನಲ್ಲಿ ಚಿಕಿತ್ಸೆ ನೀಡುವ ಆ್ಯಂಬ್ಯುಲನ್ಸ್ ರೂಪದಲ್ಲಿ ಸೇವೆ ಒದಗಿಸಲು ಸಾರಿಗೆ ಸಂಸ್ಥೆ ಚಿಂತನೆ ನಡೆಸಿದೆ.
Related Articles
Advertisement
ಆದರೆ, ಇದೇ ಬಸ್‌ಗಳನ್ನು ಆ್ಯಂಬುಲನ್ಸ್‌ಗಳನ್ನಾಗಿ ಪರಿವರ್ತಿಸಲು ಕೆಎಸ್‌ಆರ್‌ಟಿಸಿಯಲ್ಲಿರುವ “ರನ್ನರ್ ಸ್ಕ್ರಾéಪ್’ ಬಸ್‌ಗಳನ್ನು ಬಳಸಿಕೊಳ್ಳಲು ಚಿಂತನೆ ನಡೆದಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಉಮಾಶಂಕರ್ “ಉದಯವಾಣಿ’ಗೆ ತಿಳಿಸಿದ್ದಾರೆ.
ರನ್ನರ್ ಸ್ಕ್ರಾಪ್ ಬಸ್ಸೇ ಯಾಕೆ?: ಸಾಮಾನ್ಯವಾಗಿ ಒಂದು ಬಸ್‌ನ ಬೆಲೆ 22ರಿಂದ 23 ಲಕ್ಷ ರೂ. ಆಗುತ್ತದೆ. ಈ ಬಸ್‌ಗಳು ವರ್ಷಕ್ಕೆ ಒಂದು ಲಕ್ಷ ಕಿ.ಮೀ. ಕ್ರಮಿಸುತ್ತವೆ. ಇಂತಹ ಬಸ್‌ಗಳನ್ನು ಜಿಲ್ಲೆಗೊಂದು ನೀಡುವುದಾದರೆ, ಸಾಕಷ್ಟು ನಷ್ಟವಾಗುತ್ತದೆ.
ಅಷ್ಟಕ್ಕೂ ಆ್ಯಂಬುಲನ್ಸ್‌ಗಳು ಲಕ್ಷ ಕಿ.ಮೀ.ಗಟ್ಟಲೆ ಸಂಚರಿಸುವ ಅವಶ್ಯಕತೆ ಬರುವುದಿಲ್ಲ. ಆದ್ದರಿಂದ ನಿಗದಿತ ರನ್ನರ್ ಸ್ಕ್ರಾಪ್ ಬಸ್‌ಗಳನ್ನು ಬಳಸುವ ಆಲೋಚನೆ ಮಾಡಲಾಗಿದೆ. “ಗೋಲ್ಡನ್ ಅವರ್’ ಟ್ರಸ್ಟ್ ನಗರದಲ್ಲೇ ನಾಲ್ಕು ಬಸ್‌ಗಳಿಗೆ ಬೇಡಿಕೆ ಇಟ್ಟಿದೆ ಎಂದೂ ಅವರು ಹೇಳಿದರು.
ಬಸ್‌ಗಳನ್ನು ಆ್ಯಂಬುಲನ್ಸ್‌ಗಳನ್ನಾಗಿ ಮಾರ್ಪಡಿಸಲು ಅವಕಾಶ ಇದೆ. ಈ ಮಾರ್ಪಾಡಿಗೆ ಸುಮಾರು 3ರಿಂದ 4 ಲಕ್ಷ ರೂ. ಖರ್ಚಾಗಬಹುದು. ಆದರೆ, ಹವಾನಿಯಂತ್ರಿತ ಸೇವೆ ಕಲ್ಪಿಸುವುದು ಕಷ್ಟಸಾಧ್ಯ. ಹೀಗೆ ಬಸ್ ಆ್ಯಂಬುಲನ್ಸ್‌ನಲ್ಲಿ ಸಾಕಷ್ಟು ಸ್ಥಳಾವಕಾಶ ಇರುವುದರಿಂದ ಒಮ್ಮೆಲೆ 20 ಗಾಯಾಳುಗಳನ್ನು ಪ್ರಾಥಮಿಕ ಚಿಕಿತ್ಸೆ ನೀಡಿ, ಆಸ್ಪತ್ರೆಗಳಿಗೆ ಸಾಗಿಸಬಹುದು.
ಎಂಟು ಹಾಸಿಗೆಗಳ ವ್ಯವಸ್ಥೆ ಇದರಲ್ಲಿರುತ್ತದೆ. ಆದರೆ, ಸ್ಟೇಜ್ ಕ್ಯಾರೇಜ್ ಪರವಾನಗಿ ಇರುವ ಈ ಬಸ್‌ಗಳನ್ನು ಹೀಗೆ ಪರಿವರ್ತನೆ ಮಾಡಿ, ಆಂಬ್ಯುಲನ್ಸ್ ರೂಪದಲ್ಲಿ ಬಳಸಲು ಸಾರಿಗೆ ಇಲಾಖೆ ಅನುಮತಿ ಪಡೆಯಬೇಕಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ.
16 ಜಿಲ್ಲೆಗಳು ಸೇರಿ ವಿವಿಧೆಡೆ ಸೇವೆ: ಕೆಎಸ್‌ಆರ್‌ಟಿಸಿ ವ್ಯಾಪ್ತಿಯ 16 ಜಿಲ್ಲೆಗಳು ಸೇರಿದಂತೆ ರಾಜ್ಯದ ವಿವಿಧೆಡೆ ಬಸ್ ಆ್ಯಂಬುಲೆನ್ಸ್ ಪರಿಚಯಿಸಲು ಚಿಂತನೆ ನಡೆದಿದೆ ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ತಿಳಿಸಿದರು. ಶಾಂತಿನಗರದ ಕೆಎಸ್‌ಆರ್‌ಟಿಸಿ ನಾಲ್ಕನೇ ಘಟಕದಲ್ಲಿ ಶುಕ್ರವಾರ ನೂತನ ಆ್ಯಂಬುಲನ್ಸ್ಗೆ ಚಾಲನೆ ನೀಡಿ ಮಾತನಾಡಿದ ಅವರು,
ಒಂದು ಬಸ್ ಆ್ಯಂಬುಲನ್ಸ್ ನಿರ್ವಹಣೆ ಸಂಬಂಧ ಗೋಲ್ಡನ್ ಅವರ್ ಟ್ರಸ್ಟ್ನೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಒಡಂಬಡಿಕೆಯ ಮುಂದುವರಿದ ಭಾಗವಾಗಿ ಇನ್ನಷ್ಟು ಈ ಮಾದರಿಯ ಆ್ಯಂಬುಲನ್ಸ್ಗಳ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಸಾಧಕ-ಬಾಧಕಗಳ ಕುರಿತು ಪರಿಶೀಲನೆ ನಡೆಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ 5ರಿಂದ 7 ವರ್ಷಗಳು ಅಪಘಾತರಹಿತ ಬಸ್ ಚಾಲನೆ ಮಾಡಿದ 86 ಚಾಲಕರಿಗೆ ಬೆಳ್ಳಿ ಪದಕ ನೀಡಿ ಗೌರವಿಸಲಾಯಿತು. 2013-16ನೇ ಸಾಲಿನ ಪುರಸ್ಕೃತರು ಇವರಾಗಿದ್ದಾರೆ. ಗಂಡಭೇರುಂಡ ಚಿಹ್ನೆಯುಳ್ಳ 32 ಗ್ರಾಂ ಬೆಳ್ಳಿ ಪದಕ, 2 ಸಾವಿರ ನಗದು, 50 ರೂ. ಮಾಸಿಕ ಪ್ರೋತ್ಸಾಹಧನ ಇದು ಒಳಗೊಂಡಿದೆ.
ಸಾವಿನ ಪ್ರಕರಣಗಳಿಗೆ ಕಡಿವಾಣ: ಗೋಲ್ಡನ್ ಅವರ್ ಟ್ರಸ್ಟ್ ಸಹಯೋಗದಲ್ಲಿ ನೂತನ ಬಸ್ ಆ್ಯಂಬುಲನ್ಸ್ ನಿರ್ವಹಣೆಗೆ ಸಂಬಂಧಿಸಿದಂತೆ ಪರಸ್ಪರ ಒಡಂಬಡಿಕೆಗೆ ಸಹಿ ಹಾಕಲಾಯಿತು. ಇದರಲ್ಲಿ ಗೋಲ್ಡನ್ ಅವರ್ ಕಿಟ್, ವ್ಹೀಲ್ ಚೇರ್, ಕೈಕಾಲುಗಳು ಸಿಲುಕಿಕೊಂಡರೆ ಕಬ್ಬಿಣದ ವಸ್ತು ಕತ್ತರಿಸಿ ಸಹಾಯ ಮಾಡಲು ಕಟ್ಟರ್, ಕೃತಕ ಆಮ್ಲಜನಕ ಸೇರಿದಂತೆ ಅತ್ಯಾಧುನಿಕ ಚಿಕಿತ್ಸಾ ಉಪಕರಣಗಳು, ನುರಿತ ಶುಶ್ರೂಷಕಿಯರನ್ನು ಕಲ್ಪಿಸಲಾಗಿದೆ.
ಅಷ್ಟೇ ಅಲ್ಲ, ಆನ್‌ಲೈನ್ ಮೂಲಕ ಸಲಹೆಗಳನ್ನು ಪಡೆದು ಚಿಕಿತ್ಸೆ ನೀಡುವ ವ್ಯವಸ್ಥೆಯೂ ಇದರಲ್ಲಿದೆ. ಮುಂದಿನ ದಿನಗಳಲ್ಲಿ ಎಲ್ಲ ಬಸ್‌ಗಳಿಗೂ ಗೋಲ್ಡನ್ ಅವರ್ ಕಿಟ್ ಅಳವಡಿಸಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ. ಜತೆಗೆ 40 ಜನ ಸಿಬ್ಬಂದಿಗೆ ಗೋಲ್ಡನ್ ಅವರ್ ಟ್ರಸ್ಟ್‌ನಿಂದ ಪ್ರಥಮ ಚಿಕಿತ್ಸೆ ತರಬೇತಿ ನೀಡಲಾಗಿದೆ. ಹಂತ-ಹಂತವಾಗಿ ಚಾಲಕ-ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ, ಆಡಳಿತ ಸಿಬ್ಬಂದಿಗೂ ಈ ತರಬೇತಿ ನೀಡಲಾಗುವುದು ಎಂದು ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.