ಹಾಸನ: ಕೆಎಸ್‌ಆರ್‌ಟಿಸಿ ಐರಾವತ ಬಸ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಪರಿಣಾಮ 8ಜನ ಸಾವನ್ನಪ್ಪಿ 10ಕ್ಕೂ ಅಧಿಕ ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಶಾಂತಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 75ರ ಕೃಷಿ ಕಾಲೇಜ್ ಬಳಿ ಶನಿವಾರ ನಸುಕಿನ ಜಾವ ನಡೆದಿದೆ.
ಚಾಲಕ ಲಕ್ಷ್ಮಣ್ , ವೈದ್ಯಕೀಯ ವಿದ್ಯಾರ್ಥಿನಿ ಡಯಾನ, ಗಂಗಾಧರ, ಶಿವಪ್ಪ ಛಲವಾದಿ ಸೇರಿದಂತೆ ಇಬ್ಬರು ಮಹಿಳೆಯರು ಮತ್ತು 4 ಪುರುಷರು ಮೃತಪಟ್ಟ ದುರ್ವೈವಿಗಳು ಎಂದು ತಿಳಿದು ಬಂದಿದೆ.
ಮೃತರ ಪೈಕಿ ಮೂವರು ಬೆಳ್ತಂಗಡಿ ತಾಲೂಕಿನ ನೆರಿಯಾ ಗ್ರಾಮದ ಗಂಡಿಬಾಗಿಲು ದೇವಗಿರಿ ಪುತ್ತೋಟ್ ಪೊರವಿಲ್ ನಿವಾಸಿಗಳಾದ ಬಿಜೋ(25), ಶ್ರೀಮತಿ ಸೋನಿಯಾ (27) ಡಯಾನ (20) ಎನ್ನುವವರಾಗಿದ್ದಾರೆ. ಇವರ ಜೊತೆಗಿದ್ದ ಸೋನಿಯಾರವರ ಗಂಡ ವಿನು ಎಂಬವರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಂಡಿಬಾಗಿಲಿನ ದೇವಗಿರಿಯ ಚರ್ಚ್ ನಲ್ಲಿ ಇಂದು ಹಾಗೂ ನಾಳೆ ನಡೆಯುತ್ತಿರುವ ವಾರ್ಷಿಕ ಹಬ್ಬ ಹಬ್ಬದಲ್ಲಿ ಪಾಲ್ಗೊಳ್ಳಲು ಒಂದೇ ಕುಟುಂಬಕ್ಕೆ ಸೇರಿದ ಇವರು ಬೆಂಗಳೂರಿನಿಂದ ಊರಿಗೆ ಬರುತ್ತಿದ್ದರು.
ಇನ್ನೋರ್ವ ಮೃತ ದುರ್ದೈವಿ ಶ್ರೀ ರಾಕೇಶ್ ಪ್ರಭು ಉಜಿರೆಯ ಶ್ರೀ ಧ.ಮ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಶಿಕ್ಷಣ ಮುಗಿಸಿ ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದರು. ಅವರು ಕನ್ಯಾಡಿ ಯ ಶ್ರೀ ರಾಮಕ್ಷೇತ್ರ ದ ಬಳಿಯ ನಿವಾಸಿ ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯಾಗಿದ್ದ ದಿವಂಗತ ಶ್ರೀ ರಾಮದಾಸ್ ಪ್ರಭುರವರ ಏಕೈಕ ಪುತ್ರ.
ಬಸ್ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
3 ಲಕ್ಷ ಪರಿಹಾರ
ಭೀಕರ ಅಪಘಾತಕ್ಕೆ ಸಾರಿಗೆ ಸಚಿವ ಎಚ್.ಎಂ ರೇವಣ್ಣ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಮೃತಪಟ್ಟ ಕುಟುಂಬಕ್ಕೆ ತಲಾ 3 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ಗಾಯಳುಗಳ ಸಂರ್ಪೂಣ ವೈದ್ಯಕೀಯ ವೆಚ್ಚವನ್ನು ನಿಗಮದಿಂದ ಭರಿಸಲಾಗುವುದೆಂದು ತಿಳಿಸಿದ್ದಾರೆ.
ಈ ಸಂಬಂಧ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.