Advertisement

KSRTC: ನೌಕರರ ವೈದ್ಯ ತಪಾಸಣೆಗೆ ಒಡಂಬಡಿಕೆ

09:33 PM Nov 02, 2023 | Pranav MS |

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ವು ತನ್ನ ಸಿಬ್ಬಂದಿಗೆ ಸುಮಾರು ಹತ್ತು ಮಾದರಿಯ ಹೃದಯ ಸಂಬಂಧಿ ವೈದ್ಯಕೀಯ ತಪಾಸಣೆಗಳನ್ನು ಮಾಡಿಸಲು ಮುಂದಿನ ಐದು ವರ್ಷಗಳ ಅವಧಿಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.

Advertisement

ನಿಗಮದಲ್ಲಿ ಒಟ್ಟು ಅಂದಾಜು 34 ಸಾವಿರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಆ ಪೈಕಿ 24,686 ಚಾಲಕ ಮತ್ತು ನಿರ್ವಾಹಕರಾಗಿದ್ದಾರೆ. ನಿಗಮದ ನೌಕರರ ಕಾರ್ಯಸ್ವರೂಪ, ಜೀವನಶೈಲಿ ಮತ್ತು ಇತರೆ ಕಾರಣಗಳಿಂದಾಗಿ ನೌಕರರಲ್ಲಿ ಹೃದಯಾಘಾತ/ಹೃದಯ ಸಂಬಂಧಿ ಕಾಯಿಲೆಗಳು ತೀರಾ ಸಾಮಾನ್ಯವಾಗಿವೆ. ಈ ಹಿನ್ನೆಲೆಯಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಹಯೋಗದೊಂದಿಗೆ ಹೃದಯ ಸಂಬಂಧಿ ಹತ್ತು ಇತರೆ ವೈದ್ಯಕೀಯ ತಪಾಸಣೆಗಳನ್ನು ನೌಕರರಿಗೆ ಮಾಡಿಸಲು ತೀರ್ಮಾನಿಸಿದೆ. ಮುಂದಿನ ಐದು ವರ್ಷಗಳ ಅವಧಿಯ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಗುರುವಾರ ಈ ಒಪ್ಪಂದಕ್ಕೆ ಎರಡೂ ಸಂಸ್ಥೆಗಳು ಪರಸ್ಪರ ಸಹಿ ಹಾಕಿದವು. ಇದಕ್ಕೆ ಸಚಿವ ರಾಮಲಿಂಗಾರೆಡ್ಡಿ ಸಾಕ್ಷಿಯಾದರು.

ಈ ವೇಳೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಒಡಂಬಡಿಕೆಯಿಂದ ಹೃದಯ ಸಂಬಂಧಿ ತಪಾಸಣೆಗಳನ್ನು/ ಪರೀಕ್ಷೆಗಳನ್ನು ನಿರಂತರವಾಗಿ ಮಾಡಿಸಲಾಗುತ್ತದೆ. ಸಂಭವನೀಯ ಹೃದಯಾಘಾತ ತಪ್ಪಿಸಲು ಮತ್ತು ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಜೀವಗಳ ರಕ್ಷಣೆ ಆಗುತ್ತದೆ ಎಂದು ತಿಳಿಸಿದರು.

ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್‌ ಮಂಜುನಾಥ್‌ ಮಾತನಾಡಿ, ಇನ್ಮುಂದೆ ಸಿಬ್ಬಂದಿಯ ಹೃದಯ ಸಂಬಂಧಿ ಕಾಯಿಲೆಗಳನ್ನು ಗುರುತಿಸಿ ಅಗತ್ಯ ಚಿಕಿತ್ಸೆ ಕೊಡುವ ಜವಾಬ್ದಾರಿ ನಮ್ಮ ಸಂಸ್ಥೆಯ ಮೇಲಿದೆ. ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಪ್ರತ್ಯೇಕ ತಪಾಸಣೆ ಹಾಗೂ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಮಾಡಲಾಗುವುದು. ಹಾಗೆಯೇ ನಮ್ಮ ಸಂಸ್ಥೆಯ ಮೈಸೂರಿನ ಕೇಂದ್ರದಲ್ಲಿಯೂ ಅಲ್ಲಿಗೆ ಸಮೀಪವಿರುವ ವಿಭಾಗಗಳ ಸಿಬ್ಬಂದಿ ತಪಾಸಣೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಅನುºಕುಮಾರ್‌ ಮಾತನಾಡಿ, 40 ವರ್ಷ ಮೇಲ್ಪಟ್ಟ 21 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗೆ ಈ ಯೋಜನೆಯು ಉಪಯೋಗವಾಗಲಿದೆ. ತಪಾಸಣೆಗೆ ಒಳಗಾಗುವ ಪ್ರತಿ ನೌಕರರ ಪರವಾಗಿ ನಿಗಮವು 1,200 ರೂ.ಗಳನ್ನು ಅಂದರೆ ವಾರ್ಷಿಕ 2.55 ಕೋಟಿ ರೂ.ಗಳನ್ನು ಜಯದೇವ ಆಸ್ಪತ್ರೆಗೆ ಪಾವತಿ ಮಾಡುತ್ತದೆ. ಈ ಯೋಜನೆಯು ಅಂದಾಜು ಶೇ. 62 ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

Advertisement

ಇದೇ ಸಂದರ್ಭದಲ್ಲಿ ನಿಗಮದಲ್ಲಿ ಸೇವೆಯಲ್ಲಿ ಇರುವಾಗ ಅಪಘಾತದಲ್ಲಿ ಮೃತಪಟ್ಟ ಇಬ್ಬರು ಸಿಬ್ಬಂದಿ ಅವಲಂಬಿತರಿಗೆ ಅಪಘಾತ ವಿಮಾ ಪರಿಹಾರ ಯೋಜನೆ ಅಡಿ ಒಂದು ಕೋಟಿ ಪರಿಹಾರ ಮೊತ್ತವನ್ನು ವಿತರಿಸಲಾಯಿತು. ಈ ವಿಶೇಷ ವಿಮಾ ಯೋಜನೆ ಬಗ್ಗೆ ಡಾ.ಸಿ.ಎನ್‌ ಮಂಜುನಾಥ್‌ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next