ಹುಬ್ಬಳ್ಳಿ: ಪೊಲೀಸ್ ಪೇದೆ (KSRP/IRB )ಹುದ್ದೆಗಳ ನೇಮಕಕ್ಕೆ ನಡೆದ ಲಿಖಿತ ಪರೀಕ್ಷೆಯನ್ನು ನಕಲಿ ಅಭ್ಯರ್ಥಿಯೊಬ್ಬ ಬರೆದು ಸಿಕ್ಕಿ ಬಿದ್ದಿದ್ದಾನೆ, ಅಸಲಿಗೆ ಪರೀಕ್ಷೆ ಬರೆದ ವ್ಯಕ್ತಿ ಕರ್ತವ್ಯದಲ್ಲಿರುವ ಪೊಲೀಸ್ ಪೇದೆ ಎನ್ನಲಾಗಿದೆ.
ಪರೀಕ್ಷೆಗೆ ಹಾಜರಾದ ನಕಲಿ ಅಭ್ಯರ್ಥಿಯನ್ನು ಇಲ್ಲಿನ ಗೋಕುಲ ರಸ್ತೆ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಗೋಕುಲ ರಸ್ತೆಯಲ್ಲಿರುವ ಕೆ.ಎಲ್.ಇ ಸಂಸ್ಥೆಯ ತಾಂತ್ರಿಕ ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರದಲ್ಲಿ ನಕಲಿ ಅಭ್ಯರ್ಥಿಯನ್ನು ಪತ್ತೆ ಹಚ್ಚಲಾಗಿದೆ. ರಾಯಭಾಗ ಮೂಲದ ಮಣಿಕಂಠ ಎಂಬ ಹೆಸರಿನ ಅಭ್ಯರ್ಥಿಯ ಪರವಾಗಿ ಅಡಿವೆಪ್ಪ ಯರಗುದ್ರಿ ಎಂಬಾತ ಪರೀಕ್ಷೆ ಬರೆಯುತ್ತಿದ್ದ. ಅಡಿವೆಪ್ಪ ಯರಗುದ್ರಿ ಅಂಕಲಗಿ ಠಾಣೆ ಪೊಲೀಸ್ ಪೇದೆಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ :ಫ್ಯಾಕ್ಟರಿ ಕಾರ್ಮಿಕರಿಗಿನ್ನು 12 ಗಂಟೆ ಕೆಲಸ! ಕೆಲಸದ ಅವಧಿ ಹೆಚ್ಚಿಸಲು ಕೇಂದ್ರ ಚಿಂತನೆ
ನಕಲಿ ಅಭ್ಯರ್ಥಿ ಪರೀಕ್ಷೆ ಬರೆಯುವ ಕುರಿತು ಪೊಲೀಸರಿಗೆ ಮಾಹಿತಿ ದೊರೆತಿದ್ದು, ಇದರ ಆಧಾರದ ಮೇಲೆ ಸುಮಾರು ಮೂರು ತಂಡಗಳಲ್ಲಿ ಪೊಲೀಸ್ ಅಧಿಕಾರಿಗಳು ನಕಲಿ ಅಭ್ಯರ್ಥಿ ಪತ್ತೆ ಕಾರ್ಯಾಚರಣೆ ನಡೆಸಿದ್ದರು. ಸುಮಾರು ಒಂದು ಗಂಟೆಯ ನಂತರ ಪತ್ತೆಯಾಗಿದ್ದಾನೆ. ಆರೋಪಿಯನ್ನು ಗೋಕುಲ ರಸ್ತೆ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಡಿಸಿಪಿ ಕೆ.ರಾಮರಾಜನ್ ನೇತೃತ್ವದಲ್ಲಿ ನಕಲಿ ಅಭ್ಯರ್ಥಿ ಪತ್ತೆ ಕಾರ್ಯ ನಡೆದಿತ್ತು. ಪೊಲೀಸರ ವಶದಲ್ಲಿರುವ ಪೇದೆ ಅಡಿವೆಪ್ಪ ಯರಗುದ್ರಿ ಗೋಕಾಕ ತಾಲೂಕಿನ ಹಡಗಿನಾಳ ಗ್ರಾಮದವನಾಗಿದ್ದು, ಇತ್ತೀಚಗಷ್ಟೇ ಪೊಲೀಸ್ ಪೇದೆಯಾಗಿ ನೇಮಕಗೊಂಡಿದ್ದ ಎನ್ನಲಾಗಿದೆ.