ಬೆಂಗಳೂರು: ವಸ್ತುವಿನ ಗುಣಮಟ್ಟ ಹೆಚ್ಚಿಸುವುದರ ಜತೆಗೆ ಗ್ರಾಹಕರ ಅಭಿರುಚಿಗೆ ತಕ್ಕಂತೆ ಉತ್ಪಾದನೆಯಲ್ಲಿ ತೊಡಗಿರುವುದರಿಂದ ಕೆಎಸ್‌ಡಿಎಲ್ ಲಾಭದಾಯಕವಾಗಿ ಪ್ರಗತಿ ಕಂಡಿದೆ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ 21 ನೂತನ ಉತ್ಪನ್ನಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಯುಗದಲ್ಲಿ ಖಾಸಗಿ ಸಂಸ್ಥೆಗಳ ಜತೆ ಪೈಪೋಟಿ ಮಾಡುವಂತಹ ಗುಣಮಟ್ಟವನ್ನು ನಾವು ಕಾಪಾಡಿಕೊಳ್ಳಬೇಕು. ಇದರಲ್ಲಿ ಕೆಎಸ್‌ಡಿಎಲ್ ಯಶಸ್ಸು ಗಳಿಸಿದೆ. ಸಚಿವ ಎಂ.ಬಿ.ಪಾಟೀಲ್ ಕೆಎಸ್‌ಡಿಎಲ್‌ನ ಘನತೆ ಹೆಚ್ಚಿಸಿ ಪ್ರಗತಿ ಸಾಧಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸರ್ಕಾರಿ ಸಂಸ್ಥೆ ಮತ್ತು ಸರ್ಕಾರಿ ಕಾರ್ಖಾನೆ ಎಂದರೆ ಯಾರೂ ಮೂಗು ಮುರಿಯದಂತಹ ವ್ಯವಸ್ಥೆಯನ್ನು ಕೆಎಸ್‌ಡಿಲ್ ನಿರ್ಮಿಸಿದೆ. ನಿಮ್ಮ ಉತ್ಪನ್ನಗಳು ಜನಪ್ರಿಯಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಉತ್ಪನ್ನಗಳನ್ನು ನಕಲು ಮಾಡುವವರ ಮೇಲೆ ತೀವ್ರ ನಿಗಾ ವಹಿಸುವ ಅಗತ್ಯವಿದೆ ಎಂದು ಸೂಚಿಸಿದರು.
ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್, ಕೆಎಸ್‌ಡಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಪ್ರಶಾಂತ್ , ಸಲಹೆಗಾರ ರಜನೀಕಾಂತ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇವುಗಳ ಮಾರಾಟದ ಮೂಲಕ ಸಂಸ್ಥೆಯು ಇನ್ನೂ 1,000 ಕೋಟಿ ರೂ. ಮೌಲ್ಯದ ಹೆಚ್ಚಿನ ವಹಿವಾಟನ್ನು ನಿರೀಕ್ಷಿಸುತ್ತಿದೆ. ಇದಕ್ಕೆ ಪೂರಕವಾಗಿ ಸಂಸ್ಥೆಯು ಅಖೀಲ ಭಾರತ ಮಟ್ಟದ ಮಾರುಕಟ್ಟೆಯನ್ನು ಹೊಂದಲು ಮತ್ತು ವಿದೇಶಗಳಲ್ಲೂ ಸಂಸ್ಥೆಯ ಉತ್ಪನ್ನಗಳು ಸಿಗುವಂತೆ ಮಾಡಲು ರಚನಾತ್ಮಕ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದೆ.
ಬಿಡುಗಡೆಯಾದ ಉತ್ಪನ್ನಗಳು :
– ಪ್ರೀಮಿಯಂ ಶ್ರೇಣಿಯ 10 ಬಗೆಯ ಸಾಬೂನು.
– 3 ಬಗೆಯ ಶವರ್ ಜೆಲ್.
– 6 ಬಗೆಯ ಸೋಪ್ ಕಿಟ್
– ಒಂದು ಬಗೆಯ ಹ್ಯಾಂಡ್ ವಾಶ್