ಕವಿ ಕೆ ಎಸ್ ನಿಸಾರ್ ಅಹಮದ್ ಬಹುಮುಖೀ. ಕವಿತೆ ಬರೆದಿದ್ದಾರೆ, ಲೇಖನಗಳ ಸಂಕಲನ ಹೊರಬಂದಿದೆ. ವಿಮರ್ಶೆ ಬರೆದದ್ದೂ ಉಂಟು. ಅನುವಾದಿಸಿದ್ದೂ ರುಚಿಸಿದೆ. ಗದ್ಯದಲ್ಲೂ ಸುರಳೀತ. ಭಾಷಣಕ್ಕೆ ನಿಂತರೆ ಸರಾಗ. ಮೇಲಾಗಿ ಸ್ನೇಹಜೀವಿ. ಹೊಸಬರ ಪುಸ್ತಕಗಳನ್ನು ಓದುವ, ಪ್ರೋತ್ಸಾಹಿಸುವ ಉತ್ಸಾಹ. ರಾಜ್‌ಕುಮಾರ್ ಅಭಿಮಾನಿ, ಕನ್ನಡ ಪ್ರೇಮಿ, ಅಧ್ಯಯನಶೀಲ ಪ್ರತಿಭೆ.
ಅವರು “ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ’ ಪ್ರೇಮಿಗಳು ಮಮ್ಮಲ ಮರುಗಿ ವಿರಹೋತ್ಕಂಟಿತರಾಗಿ ಉರಿದು ಹೋದರು. ನಾಡದೇವಿಯೇ ಕಂಡೆ ನಿನ್ನ ಮಡಿಲಲ್ಲಿ ಎಂಥ ದೃಶ್ಯ ಅಂತ ಕನ್ನಡದ ಪರಿಸ್ಥಿತಿಯನ್ನು ತೆರೆದಿಟ್ಟಾಗ ಹೋರಾಟಗಾರರು ಕಿಚ್ಚಾದರು. ಅಂಥ ಅಕುಟಿಲ ಬೆಣ್ಣೆಯಂಥ ನಗು ಕಾಯಲಿ ಜಗದವರ, ಸಂತತ ನಗಿಸಲಿ ನಗದವರ ಅಂತ ಕೃಷ್ಣನ ಬಾಲಲೀಲೆಯನ್ನು ಕೊಂಡಾಡಿದಾಗ ನಿಸಾರ ಅಹಮದರನ್ನು ತಲೆಯೆತ್ತಿ ನೋಡಿದರು. ಜೋಗದ ಸಿರಿಬೆಳಕನ್ನೂ ತುಂಗೆಯ ತೆನೆ ಬಳುಕನ್ನೂ ಒಂದೇ ಎಸಳಲ್ಲಿ ಕಂಡವರು. ನೆರುಡಾನ ಪದ್ಯಗಳನ್ನು ಕನ್ನಡಕ್ಕೆ ತಂದವರು. ರಾಮನ್ ಸತ್ತ ಸುದ್ದಿಯನ್ನು ಜಗತ್ತಿಗೆ ಹಬ್ಬಿಸಿದವರು.
ಅವರಿಗೀಗ 81. ಎಂಬತ್ತೂಂದು ಎಂದು ನಂಬುವುದು ಕಷ್ಟವೆಂಬಂತೆ ಅವರಿದ್ದಾರೆ. ಭಾಷಣ ಮಾಡುತ್ತಾರೆ. ನೆನಪು ಕೈ ಕೊಡದ ಪ್ರತ್ಯಭಿಜ್ಞಾನಿ ಅವರು. ನೆನಪನ್ನೇ ಜೀವಿಸಬಲ್ಲವರು. ಮೊದಲ ಪದ್ಯ ಬರೆದ ಕ್ಷಣವನ್ನೂ ಅವರು ಜ್ಞಾಪಕಚಿತ್ರಶಾಲೆಯಿಂದ ಹೊರತೆಗೆಯಬಲ್ಲರು. ಗಾಂಧೀಬಜಾರಿನಲ್ಲಿ ಅಲೆದಾಡುತ್ತಲೇ ಮನಸು ಗಾಂಧೀಬಜಾರು ಅಂತ ಪದ್ಯ ಬರೆದರು. ಸಂಜೆ ಐದರ ಮಳೆಯನ್ನು ಕವಿತೆಯಾಗಿಸಿದರು. ನಿತ್ಯೋತ್ಸವ ಕವಿತೆಗಳು ಕ್ಯಾಸೆಟ್ ಆಗಿ ಬಂದಾಗ ಕನ್ನಡದಲ್ಲಾದ ರೋಮಾಂಚಕ್ಕೆ ಸಾಕ್ಷಿಯಾದರು.
ಇದೀಗ ಅವರ ಮಿತ್ರರು, ಹಿತೈಷಿಗಳು, ಸರೀಕರು ಮತ್ತು ಸಹವಾಸಿಗಳು ನಿಸಾರರ ಕುರಿತು ಬರೆದ ಪುಸ್ತಕವೊಂದನ್ನು ಸಪ್ನಾದ ಕನ್ನಡ ವಿಭಾಗದ ಮುಖ್ಯಸ್ಥರಾದ ದೊಡ್ಡೇಗೌಡರು ಸಂಪಾದನೆ ಮಾಡಿದ್ದಾರೆ. ಸಿ ಎನ್ ರಾಮಚಂದ್ರನ್, ದೇ. ಜವರೇಗೌಡ, ಜಿ ಎನ್ ರಂಗನಾಥ ರಾವ್, ಎಸ್ ಆರ್ ವಿಜಯಶಂಕರ್, ನಾ. ದಾಮೋದರ ಶೆಟ್ಟಿ, ಕೆ. ಮರುಳಸಿದ್ಧಪ್ಪ, ಚಂದ್ರಶೇಖರ ತಾಳ, ಎಚ್ ಎಲ್ ಪುಷ್ಪಾ, ಡುಂಡಿರಾಜ್, ಎಚ್ಚೆಸ್ವಿ, ಬಿಆರ್ ಲಕ್ಷ್ಮಣರಾವ್, ಟಿಪಿ ಅಶೋಕ ಮುಂತಾದವರು ನಿಸಾರ್ ಅಹಮದ್ ಕುರಿತು ಬರೆದ ಲೇಖನಗಳು, ಆಪ್ತನುಡಿಗಳು, ಸ್ನೇಹವಚನಗಳು, ಅನುಭವ ಕಥನಗಳು ಈ ಪುಸ್ತಕದಲ್ಲಿವೆ. ಇದು 553 ಪುಟಗಳ ಅಕ್ಷರ ಬಾಗಿನ.
ಜನವರಿ, 14, ಸಂಕ್ರಾಂತಿಯ ಶುಭದಿನದಂದು ಬೆಳಗ್ಗೆ 10.30ಕ್ಕೆ ಈ ಪುಸ್ತಕ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಬಿಡುಗಡೆ ಆಗಲಿದೆ. ಜಿ ವೆಂಕಟಸುಬ್ಬಯ್ಯ, ಸಿ ಎನ್ ರಾಮಚಂದ್ರನ್, ಎಸ್ ಜಿ ಸಿದ್ದರಾಮಯ್ಯ, ಮನು ಬಳಿಗಾರ್, ನಿತಿನ್ ಶಾ ಮುಂತಾದವರ ಸಮ್ಮುಖದಲ್ಲಿ ನಿಸಾರ್ ಅಹಮದ್ ಕೂಡ ಇರುತ್ತಾರೆ.
ಅಲ್ಲಿ ನೀವು ನಿಸಾರ್ ಅಹಮದ್ ಅವರನ್ನು ನೋಡಬಹುದು, ಮಾತಾಡಬಹುದು, ಸೆಲ್ಪಿ-ಹಸ್ತಾಕ್ಷರ ಪಡೆಯಬಹುದು, ಅವರ ಮಾತುಗಳನ್ನು ಕೇಳಬಹುದು, ಪುಸ್ತಕವನ್ನು ವಿಶೇಷ ರಿಯಾಯಿತಿಯಲ್ಲಿ ಪಡೆಯಬಹುದು.
ದೊಡ್ಡೇಗೌಡರ ನಾಲ್ಕನೇ ಮಹಾಗ್ರಂಥ
ದೊಡ್ಡೇಗೌಡರು ಸಪ್ನ ಪುಸ್ತಕ ಮಳಿಗೆಯ ಕನ್ನಡ ವಿಭಾಗದ ಮುಖ್ಯಸ್ಥರು. ಕನ್ನಡ ವಿಭಾಗದಲ್ಲಿ ಅಸಂಖ್ಯ ಪ್ರತಿಭಾವಂತರ ಪುಸ್ತಕಗಳನ್ನು ಪ್ರಕಟಿಸಿದವರು. ಇವತ್ತಿಗೂ ದೊಡ್ಡೇಗೌಡರಿಗೆ ಅವರ ಅಗಾಧ ಪುಸ್ತಕ ಮಳಿಗೆಯ ಯಾವ ಕಪಾಟಿನಲ್ಲಿ ಯಾವ ಪುಸ್ತಕ ಇದೆ ಅನ್ನುವುದು ಕರಾರುವಾಕ್ಕಾಗಿ ಗೊತ್ತು. ನೀವು ಯಾವುದೇ ಪುಸ್ತಕ ಕೇಳಿದರೂ ಅವರು ಥಟ್ಟನೆ ಅದನ್ನು ತೋರಿಸುತ್ತಾರೆ.
ಮೂಲತಃ ಚಿಕ್ಕಮಗಳೂರಿನವರಾದ ದೊಡ್ಡೇಗೌಡರು ಬೆಳೆದದ್ದು ತುಮಕೂರಿನಲ್ಲಿ, ಓದಿದ್ದು ಕುಣಿಗಲ್‌ನಲ್ಲಿ. ಕನ್ನಡ ಎಂ ಎ ಮಾಡಿದ ಆರ್ ಡಿ ಜಿ- ಆರ್. ದೊಡ್ಡೇಗೌಡರು ಸಪ್ನಾ ಜೊತೆ ಕಾಲು ಶತಮಾನದ ನಂಟುಳ್ಳವರು. ದೇಜಗೌ, ಪೂರ್ಣಚಂದ್ರ ತೇಜಸ್ವಿ, ಕನ್ನಡಕ್ಕಾಗಿ ಕೈ ಎತ್ತು ಮುಂತಾದ ಮಹಾಗ್ರಂಥಗಳ ನಂತರ ಇದೀಗ ನಿಸಾರ್ ಕುರಿತ ಪುಸ್ತಕ ಹೊರಬರುತ್ತಿದೆ. ಮಕ್ಕಳಿಗಾಗಿ ಬರೆದ ಕತೆ, ಇತರ ಬರಹಗಳನ್ನು ಹೊರತು ಪಡಿಸಿದರೆ, ಮಹಾಗ್ರಂಥಗಳ ಮಾಲಿಕೆಯಲ್ಲಿ ಇದು ದೊಡ್ಡೇಗೌಡರ ನಾಲ್ಕನೇ ಪುಸ್ತಕ.