Advertisement

ದಸರಾ ಉದ್ಘಾಟನೆಗೆ ಕೆ.ಎಸ್‌.ನಿಸಾರ್‌ ಅಹಮದ್‌?

11:41 AM Aug 13, 2017 | |

ಮೈಸೂರು: ಈ ಬಾರಿಯ ದಸರಾ ಮಹೋತ್ಸವ ಉದ್ಘಾಟನೆ ಭಾಗ್ಯ ನಿತ್ಯೋತ್ಸವ ಕವಿ ಡಾ.ಕೆ.ಎಸ್‌. ನಿಸಾರ್‌ ಅಹಮದ್‌ರಿಗೆ ದೊರೆಯುವ ಸಾಧ್ಯತೆ ಇದೆ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2013ರಲ್ಲಿ ದಸರಾ ಉದ್ಘಾಟನೆಗೆ ಜಾnನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರನ್ನು ಆಯ್ಕೆ ಮಾಡಲಾಗಿತ್ತು.

Advertisement

2014ರಲ್ಲಿ ನಾಟಕಕಾರ ಗಿರೀಶ್‌ ಕಾರ್ನಾಡ್‌ ಅವರಿಂದ ದಸರಾ ಉದ್ಘಾಟನೆ ಮಾಡಿಸಲಾಗಿತ್ತು. 2015ರಲ್ಲಿ ಭೀಕರ ಬರ ಪರಿಸ್ಥಿತಿ ಹಾಗೂ ರೈತರ ಸರಣಿ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ರೈತ ಸಮುದಾಯಕ್ಕೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್‌ರ ಒತ್ತಾಸೆಯಂತೆ ಎಚ್‌.ಡಿ.ಕೋಟೆ ತಾಲೂಕು ಮಲಾರ ಗ್ರಾಮದ ಪ್ರಗತಿಪರ ಕೃಷಿಕ ಪುಟ್ಟಯ್ಯರಿಂದ ದಸರಾ ಮಹೋತ್ಸವವನ್ನು ಉದ್ಘಾಟಿಸಲಾಗಿತ್ತು. 2016ರಲ್ಲಿ ಸಾಹಿತಿ ಚನ್ನವೀರಕಣವಿ ಅವರಿಂದ ದಸರಾ ಮಹೋತ್ಸವಕ್ಕೆ ಚಾಲನೆ ಕೊಡಿಸಲಾಗಿತ್ತು.

2017ನೇ ವರ್ಷದ ದಸರಾ ಮಹೋತ್ಸವ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯ ಕಡೆಯ ದಸರಾ ಆಗಿರುವುದರಿಂದ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಿ 15 ಕೋಟಿ ರೂ ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ. ಅದರಂತೆಯೇ ಸಿದ್ಧತೆಗಳೂ ಭರ್ಜರಿಯಾಗಿಯೇ ನಡೆಯುತ್ತಿವೆ.

ಆದರೆ, ದಸರಾ ಉದ್ಘಾಟಕರ ಆಯ್ಕೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾರೀ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ದಸರಾ ಉನ್ನತಮಟ್ಟದ ಸಭೆ, ದಸರಾ ಉದ್ಘಾಟಕರ ಆಯ್ಕೆಯ ಜವಾಬ್ದಾರಿಯನ್ನು ಸಿದ್ದರಾಮಯ್ಯರ ವಿವೇಚನೆಗೆ ಬಿಟ್ಟಿದೆ. ಜತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದಲೂ ದಸರಾ ಉದ್ಘಾಟನೆಗೆ ಕರೆಯಬಹುದಾದ 10 ಜನ ಸಾಹಿತಿಗಳ ಪಟ್ಟಿ ನೀಡಲಾಗಿದೆ. ಆದರೆ, ಈ ಪಟ್ಟಿಯಲ್ಲಿರುವವರನ್ನೇ ಆಯ್ಕೆ ಮಾಡಬೇಕು ಅಂತೇನಿಲ್ಲಾ, ಮುಖ್ಯಮಂತ್ರಿಯವರು ತಮ್ಮದೇ ಆದ ಹೆಸರನ್ನು ಸೂಚಿಸುವ ಸಾಧ್ಯತೆ ಇದೆ.

ಇತ್ತೀಚೆಗೆ ಮೈಸೂರಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ದಸರಾ ಉದ್ಘಾಟಕರ ಹೆಸರನ್ನು ಅಂತಿಮಗೊಳಿಸಿದ್ದು, ಆ.12ರ ಗಜಪಯಣದ ದಿನ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಪ್ರಕಟ ಮಾಡಲಿದ್ದಾರೆ ಎಂದು ತಿಳಿಸಿದ್ದರು. ಆದರೆ, ಗಜಪಯಣದ ವೇಳೆ ಉದ್ಘಾಟಕರ ಹೆಸರು ಪ್ರಕಟ ಮಾಡದ ಸಚಿವ ಮಹದೇವಪ್ಪ, ದಸರಾ ಉದ್ಘಾಟಕರ ಹೆಸರನ್ನು ಮುಖ್ಯಮಂತ್ರಿಯವರು ಅಂತಿಮ ಗೊಳಿಸುತ್ತಾರೆ.

Advertisement

ಉದ್ಘಾಟಕರ ಸಂಭಾವ್ಯ ಪಟ್ಟಿ ತಯಾರಾಗಿದ್ದು, ಆ ಪಟ್ಟಿಯಲ್ಲಿರುವ ಒಬ್ಬರನ್ನು ಮುಖ್ಯಮಂತ್ರಿಗಳು ಸೂಚಿಸಿದ ನಂತರ ಅ.17ರಂದು ಆನೆಗಳನ್ನು ಅರಮನೆಗೆ ಸ್ವಾಗತ ಮಾಡುವ ಸಂದರ್ಭದಲ್ಲಿ ಅಧಿಕೃತವಾಗಿ ಘೋಷಣೆ ಮಾಡುವುದಾಗಿ ತಿಳಿಸಿದರು. ಸಂಭಾವ್ಯರ ಪಟ್ಟಿಯಲ್ಲಿ ನಿತ್ಯೋತ್ಸವ ಕವಿ ಡಾ.ಕೆ.ಎಸ್‌.ನಿಸಾರ್‌ ಅಹಮದ್‌ ಅವರ ಹೆಸರಿದ್ದು, ಈ ವರ್ಷ ಅವರನ್ನೇ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next