Advertisement

ನಾನು ಪೋಸ್ಟ್‌ಮನ್‌ ಅಲ್ಲ, ಯಾವುದೇ ತಪ್ಪು ಮಾಡಿಲ್ಲ: ಸಚಿವ ಈಶ್ವರಪ್ಪ

11:55 PM Apr 02, 2021 | Team Udayavani |

ಬೆಂಗಳೂರು/ ಮೈಸೂರು/ ವಿಜಯಪುರ: “ನಾನು ನನ್ನ ಇಲಾಖೆಯ ಪೋಸ್ಟ್‌ಮನ್‌ ಅಲ್ಲ. ಯಾವುದೇ ತಪ್ಪು ಮಾಡಿಲ್ಲ. ಸಂಪುಟದಿಂದ ಕೈ ಬಿಟ್ಟರೂ ತಲೆ ಕೆಡಿಸಿಕೊಳ್ಳುವುದಿಲ್ಲ. ರಾಜೀನಾಮೆಗೆ ಆಗ್ರಹಿಸಿದರೆ ಜಗ್ಗುವುದಿಲ್ಲ.’
– ಸಿಎಂ ಬಿಎಸ್‌ವೈ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದಿರುವುದನ್ನು ಸಚಿವ ಈಶ್ವರಪ್ಪ ಹೀಗೆ ಮೈಸೂರಿನಲ್ಲಿ ಸಮರ್ಥಿಸಿಕೊಂಡಿದ್ದಾರೆ.

Advertisement

ಸಚಿವರು ಇರುವುದು ಪೋಸ್ಟ್‌ಮನ್‌ ಕೆಲಸ ಮಾಡಲು ಅಲ್ಲ. ಎಲ್ಲ ಸಚಿವರಿಗೂ ಅವರದ್ದೇ ಆದ ಜವಾಬ್ದಾರಿ ಇರುತ್ತದೆ. ನಮ್ಮ ಇಲಾಖೆಗೆ ಬಂದ ಅನುದಾನ ನಮಗೆ ಗೊತ್ತಿಲ್ಲದೆ ಬಿಡುಗಡೆ ಆಗುವುದು ನಿಯಮಕ್ಕೆ ವಿರುದ್ಧ. ಈ ಪದ್ಧತಿ ಮುಂದುವರಿಯಬಾರದು ಎಂಬ ಕಾರಣಕ್ಕೆ ಈ ತೀರ್ಮಾನಕ್ಕೆ ಬಂದೆ. ಇದು ಯಡಿಯೂರಪ್ಪ – ಈಶ್ವರಪ್ಪ ನಡುವಣ ಪ್ರಕರಣ ಅಲ್ಲ. ನಿಯಮ ಉಲ್ಲಂಘನೆಯಾಗಬಾರದು ಎಂಬುದು ನನ್ನ ಉದ್ದೇಶ. ಸಮಸ್ಯೆ ಬಗೆಹರಿಸಿಕೊಂಡು ಸರಕಾರ ಮುನ್ನಡೆಸುತ್ತೇವೆ. ಸಿಎಂ ಬಿಎಸ್‌ವೈ ಮೇಲೆ ನನಗೆ ನೂರಕ್ಕೆ ನೂರು ವಿಶ್ವಾಸವಿದೆ. ನಾನು ಬಂಡಾಯಗಾರ ಅಲ್ಲ. ಬಿಜೆಪಿಗೆ ನಿಷ್ಠನಾಗಿ ಕೆಲಸ ಮಾಡುವಾತ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

ಈ ನಡುವೆ ಈಶ್ವರಪ್ಪ ಅವರ ನಡೆಯನ್ನು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸ್ವಾಗತಿಸಿದ್ದಾರೆ. ಮೇ 2ರೊಳಗೆ ಸಿಎಂ ಬದಲಾವಣೆಯಾಗದಿದ್ದರೆ ಇನ್ನಷ್ಟು ರಾಜಕೀಯ ಬೆಳವಣಿಗೆಗಳು ನಡೆಯುತ್ತವೆ ಎಂದು ಭವಿಷ್ಯ ನುಡಿದಿದ್ದಾರೆ.

ಸಿಎಂ ವಿರುದ್ಧ ದೂರು ನೀಡಿಲ್ಲ
ಮೈಸೂರಿನಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ, ಇಲಾಖೆಗೆ ನಿಗದಿಯಾದ ಅನುದಾನವನ್ನು ಕಾನೂನು ಮತ್ತು ನಿಯಮ ಮೀರಿ ವರ್ಗಾಯಿಸದಂತೆ ಕೋರಿದ್ದೇನೆಯೇ ವಿನಾ ಸಿಎಂ ವಿರುದ್ಧ ದೂರು ನೀಡಿಲ್ಲ. ಕಾನೂನು ಮತ್ತು ನಿಯಮದಂತೆ ಕಾರ್ಯನಿರ್ವಹಿಸಲು ಸಿಎಂಗೆ ಸೂಚಿಸಿ ಎಂದಷ್ಟೇ ಪಕ್ಷದ ವರಿಷ್ಠರಲ್ಲಿ ಕೋರಿದ್ದೇನೆ ಎಂದರು.

ನನ್ನ ಗಮನಕ್ಕೆ ಬಾರದೆ ಅನುದಾನ ಬಿಡುಗಡೆ ಮಾಡಲು ಸಿಎಂ ಆದೇಶಿಸಿದ್ದರು. ಇದರ ಆಧಾರದಲ್ಲಿ ಪ್ರಧಾನ ಕಾರ್ಯದರ್ಶಿ ಹಣ ಬಿಡುಗಡೆಗೊಳಿಸಲು ಆದೇಶ ನೀಡಿದ್ದರು. ಈ ಬಗ್ಗೆ ಸಿಎಂಗೆ ಪತ್ರ ಬರೆದೆ, ಉತ್ತರ ಬರಲಿಲ್ಲ. ಬಳಿಕ ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೇನೆ. ಈಗ ಪ್ರಧಾನ ಕಾರ್ಯದರ್ಶಿಗಳ ಆದೇಶಕ್ಕೆ ನಾನು ತಡೆ ನೀಡಿದ್ದೇನೆ ಎಂದು ಸಮರ್ಥಿಸಿ ಕೊಂಡರು.

Advertisement

ಈಶ್ವರಪ್ಪ ಯಾವ ವಿಚಾರವಾಗಿ ಪತ್ರ ಬರೆದಿದ್ದಾರೆ ಎಂಬುದು ಗೊತ್ತಿಲ್ಲ. ನಾನು ಅವರೊಂದಿಗೆ ಚರ್ಚೆ ಮಾಡಿಲ್ಲ. ಆದರೆ ನಾವು ಒಂದು ಸರಕಾರವಾಗಿ ಒಗ್ಗಟ್ಟಿನಿಂದ, ಒಮ್ಮತದಿಂದ ಕೆಲಸ ಮಾಡಬೇಕು. ಸಿಎಂ ನಿರ್ದೇಶನ ಪಾಲಿಸಬೇಕು. ಅವರ ಪರಮಾಧಿಕಾರ ಪ್ರಶ್ನಿಸುವುದು ಸಾಧುವೂ ಅಲ್ಲ, ಸೌಜನ್ಯವೂ ಅಲ್ಲ.
-ಗೋವಿಂದ ಕಾರಜೋಳ, ಡಿಸಿಎಂ

ಸಿಎಂ ಬಿಎಸ್‌ವೈ ವಿರುದ್ಧ ಸಚಿವ
ಈಶ್ವರಪ್ಪ ಪತ್ರ ಬರೆದಿರುವುದು ಮತ್ತು ಅದನ್ನು ರಾಜ್ಯಪಾಲರಿಗೆ ಕಳುಹಿಸಿರುವುದು ಒಳ್ಳೆಯ ಬೆಳವಣಿಗೆಯಲ್ಲ. ನಾವೆಲ್ಲರೂ ಸಿಎಂ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಈಶ್ವರಪ್ಪ ಪತ್ರ ಬರೆದಿರುವುದು ಬೇಸರದ ಸಂಗತಿ. ಸಮಸ್ಯೆಗಳನ್ನು ನಾಲ್ಕು ಗೋಡೆಗಳ ಮಧ್ಯೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು.
-ಜಗದೀಶ್‌ ಶೆಟ್ಟರ್‌, ಕೈಗಾರಿಕಾ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next