ವಿಜಯಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಖುರ್ಚಿ ಮೇಲೆ ಎಲ್ಲರೂ ಕಣ್ಣಿಟ್ಟಿದ್ದಾರೆ. ಆದರೂ, ಅವರ ಖುರ್ಚಿ ಅಲುಗಾಡುತ್ತಿಲ್ಲ ಎನ್ನುತ್ತಾ ಎಲ್ಲರೂ ಮೇಲ್ನೋಟಕ್ಕೆ ಬೆಂಬಲ ಕೊಡುತ್ತಿದ್ದಾರೆ. ಎಂ.ಬಿ.ಪಾಟೀಲ್ ಸೇರಿದಂತೆ ಎಲ್ಲರಿಗೂ ಮುಖ್ಯಮಂತ್ರಿ ಆಗಬೇಕು ಹಂಬಲ ಇದೆ. ಅಷ್ಟಕ್ಕೂ ಸಿದ್ದರಾಮಯ್ಯ ಪರಿಸ್ಥಿತಿ ಏನಾಗುತ್ತೋ ಗೊತ್ತಿಲ್ಲ. ರಾಜೀನಾಮೆ ಕೊಡುತ್ತಾರೋ, ಇಲ್ಲ ಜೈಲಿಗೆ ಹೋಗುತ್ತಾರೋ ಗೊತ್ತಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ರವಿವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕುರ್ಚಿ ಗಟ್ಟಿಯಿಲ್ಲ ಎನ್ನುವ ಎಂ.ಬಿ.ಪಾಟೀಲ್ ಅವರ ಖುರ್ಚಿ ಏನಾಗುತ್ತಿದೆ?, ಅವರ ಕಣ್ಣು ಸಿಎಂ ಖುರ್ಚಿ ಮೇಲಿದೆ. ಅವರು ತೋರಿಕೆಗಾಗಿ ಮೇಲೆ ಸಿಎಂಗೆ ಬೆಂಬಲ ಎನ್ನುತ್ತಾರೆ. ಒಳಗೆ ಅವರಿಗೂ ಸಿಎಂ ಆಗುವ ಹಂಬಲವಿದೆ. ಅವರು ಸಿಎಂ ಆಗಲು ನನ್ನ ತಕರಾರು ಇಲ್ಲ. ಅವರು ಕಾಂಗ್ರೆಸ್ ಪಕ್ಷಕ್ಕೆ ದುಡಿದಿದ್ದಾರೆ. ಕೇವಲ ಎಂ.ಬಿ.ಪಾಟೀಲರಲ್ಲ, ಬಹುತೇಕ ರಾಜಕಾರಣಿಗಳಿಗೂ ಇದೇ ರೀತಿ ಹಂಬಲವಿದೆ ಎಂದರು.
ಇದೇ ವೇಳೆ, ಸಿಎಂ ಸಿದ್ದರಾಮಯ್ಯನವರು ಈ ಹಿಂದಿನ ನಮ್ಮ ಸರ್ಕಾರದ ಯೋಜನೆಗಳನ್ನು ರದ್ದು ಮಾಡಿದ್ದಾರೆ. ಆಗ ನಮ್ಮ ಸರ್ಕಾರ ಅನುದಾನ ಕೊಟ್ಟಿತ್ತು. ಈಗ ಅವೆಲ್ಲ ಅರ್ಧಂಬರ್ಧ ಕೆಲಸ ಆಗಿದ್ದು, ಅಂತಹ ಕಾಮಗಾರಿಗಳನ್ನು ರದ್ದು ಮಾಡಿದ್ದಾರೆ. ಇದು ಹಿಂದುಳಿದ, ದಲಿತರಿಗೆ ಮಾಡಿದಂತಹ ಮೋಸ. ಸಿದ್ದರಾಮಯ್ಯನವರೇ ನೀವು ಹಿಂದುಳಿದ, ದಲಿತರ ಚಾಂಪಿಯನ್ ಅನಿಸಿಕೊಂಡವರು. ಇದೀಗ ಅನ್ಯಾಯದ ಆಪಾದನೆ ಹೊತ್ತುಕೊಳ್ಳಬೇಕಾಗುತ್ತದೆ. ಹೀಗಾಗಿ ನೀವು ರದ್ದು ಮಾಡಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅನುದಾನ ಕೊಡಿ ಎಂದು ಈಶ್ವರಪ್ಪ ಒತ್ತಾಯಿಸಿದರು.
ಮಾಜಿ ಸಿಎಂ ಯಡಿಯೂರಪ್ಪನವರ ಡಿನೊಟಿಫಿಕೇಷನ್ ಪ್ರಕರಣದಲ್ಲಿ ಲೋಕಾಯುಕ್ತ ವಿಚಾರಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಡಿನೋಟಿಫಿಕೇಷನ್ ಕೇಸ್ ಏನಾಯ್ತು ಎಂಬುದು ಗೊತ್ತಿಲ್ಲ. ಆದರೆ, ರಾಜ್ಯದಲ್ಲಿ ಇಂದು ಸೈದ್ಧಾಂತಿಕವಾಗಿ ಚರ್ಚೆಗಳು ನಡೆಯುತ್ತಿಲ್ಲ. ಎಲ್ಲರಲ್ಲೂ ವೈಯಕ್ತಿಕವಾಗಿ ದಾಳಿ ನಡೆಯುತ್ತಿದೆ. ರಾಜಕಾರಣ ಹೇಗೆ ನಡೆಯುತ್ತಿದೆ ಎಂದರೆ, ಅದನ್ನು ನೋಡಿ ಜನರಿಗೂ ಬೇಜಾರಾಗುತ್ತಿದೆ ಎಂದು ಹೇಳಿದರು.
ಅಲ್ಲದೇ, ಬಿಜೆಪಿ ಶಾಸಕ ಮುನಿರತ್ನ ಪ್ರಕರಣದ ವಿಚಾರವಾಗಿ ಮಾತನಾಡಲು ನಮಗೆ ಅಸಹ್ಯವಾಗುತ್ತಿದೆ. ಅದೇ ದರ್ಶನ, ಅದೇ ಪ್ರಜ್ವಲ್, ಅದೇ ಮುನಿರತ್ನ ವಿಚಾರ ಮಾಧ್ಯಮಗಳು ಸ್ವಲ್ಪ ಬಿಡಬೇಕು. ಈ ತರಹ ಪ್ರಕರಣಗಳು ಅಸಹ್ಯ. ನಾನು ಇವುಗಳ ಬಗ್ಗೆ ಮಾತನಾಡಲ್ಲ ಎಂದ ಈಶ್ವರಪ್ಪ ಪ್ರತಿಕ್ರಿಯೆ ಕೊಡಲು ನಿರಾಕರಿಸಿದರು.