ಬೆಂಗಳೂರು: ಸಂಪುಟ ವಿಸ್ತರಣೆ ಸಾಧ್ಯತೆ ಕ್ಷೀಣಿಸಿರುವ ಹಿನ್ನೆಲೆಯಲ್ಲಿ ಶಸ್ತ್ರತ್ಯಾಗಕ್ಕೆ ಮುಂದಾಗಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ “ನನಗೆ ಮಂತ್ರಿ ಸ್ಥಾನ ಬೇಡ ‘ ಎಂದು ಘೋಷಿಸಿದ್ದು ಅವರ ನಿರ್ಧಾರ ಕುತೂಹಲ ಮೂಡಿಸಿದೆ.
ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಯಾರಿಗೂ ಕನಸು ಬಿದ್ದಿರಲಿಲ್ಲ .ಅವರು ಮಲಗಿದ್ದು ಒಂದು ಕಡೆ, ಪತ್ರ ಸಿಕ್ಕಿದ್ದು ಮತ್ತೊಂದು ಕಡೆ. ಆದರೂ ನನ್ನ ಮೇಲೆ ಆರೋಪ ಬಂತು. ತನಿಖೆ ಬಳಿಕ ಕ್ಲೀನ್ ಚಿಟ್ ಸಿಕ್ಕಿದೆ. ಕಾರ್ಯಕರ್ತರ ಅಪೇಕ್ಷೆ ಮೇರೆಗೆ ಸಂಪುಟ ವಿಸ್ತರಣೆ ಮಾಡುವಂತೆ ಸಿಎಂ ಗೆ ನಾನು ಮನವಿ ಮಾಡಿದ್ದು, ಅವರು ಭರವಸೆ ಕೊಟ್ಟಿದ್ದೂ ನಿಜ. ಆದರೆ ಈಗ ಅವರಿಗೆ ಏನೇನು ಸಮಸ್ಯೆ ಇದೆಯೋ ಗೊತ್ತಿಲ್ಲ. ಇಂದು ಅವರನ್ನು ಭೇಟಿ ಮಾಡಿ ಸಚಿವ ಸ್ಥಾನ ಬೇಡ ಎಂದು ಹೇಳಿ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ಧಾಳಿ ನಡೆಸಿದ ಅವರು, ತಾವು ತಿಹಾರ್ ಜೈಲಿಗೆ ಹೋಗಿದ್ದು ಏಕೆ ಎಂಬುದನ್ನು ಶಿವಕುಮಾರ್ ಮೊದಲು ನೆನಪು ಮಾಡಿಕೊಳ್ಳಲಿ. ಇಡಿ, ಐಟಿ, ಸಿಬಿಐ ತನಿಖೆ ಯಾಕೆ ನಡೆಯುತ್ತಿದೆ ಎಂದು ಹೇಳಲಿ. ಭ್ರಷ್ಟಾಚಾರ, ಅಕ್ರಮ ಹಣ ವಿಚಾರವಾಗಿ ಈ ತನಿಖೆ ನಡೆಯುತ್ತಿರುವುದಲ್ಲವೇ? ಅವರ ನಿವಾಸದಲ್ಲಿ ಕಂತೆ ಕಂತೆ ನೋಟು ಸಿಕ್ಕಿರಲಿಲ್ಲವೇ? ಈಗ ಬಸ್ ಯಾತ್ರೆ ವೇಳೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.
ಸಿಡಿ ಪ್ರಕರಣ ಸಿಬಿಐಗೆ ವಹಿಸುವಂತೆ ರಮೇಶ್ ಜಾರಕಿಹೊಳಿ ಮಾಡುತ್ತಿರುವ ಒತ್ತಾಯದ ಬಗ್ಗೆ ಪ್ರತಿಕ್ರಿಯಿಸಿ, ಈಗ ಒಂದು ಸಿಡಿ ಬಂದಿದೆ.ಅದೆಷ್ಟು ಸಿಡಿಗಳಿವೆಯೋ? ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಬೇಕಿದೆ. ರಮೇಶ್ ಜಾರಕಿಹೊಳಿ ಸಿಬಿಐ ತನಿಖೆ ಕೇಳುವುದರಲ್ಲಿ ತಪ್ಪೇನಿಲ್ಲ ಎಂದರು.
ಶಿವಮೊಗ್ಗ ಕ್ಷೇತ್ರದ ಟಿಕೆಟ್‌ಗಾಗಿ ಆಯನೂರು ಮಂಜುನಾಥ್ ಪ್ರಚಾರ ನಡೆಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಆಯನೂರು ಮಂಜುನಾಥ್ ನಮ್ಮ ಪಕ್ಷದ ನಾಯಕರು.
ಸಂಸದೀಯ ಪಟು. ಟಿಕೆಟ್ ಕೇಳಿದ್ದರಲ್ಲಿ ತಪ್ಪಿಲ್ಲ. ಅಂತಿಮವಾಗಿ ಪಕ್ಷ ಯಾರಿಗೆ ಟಿಕೆಟ್ ಕೊಡುತ್ತದೆಯೋ, ಅವರ ಪರವಾಗಿ ನಾವೆಲ್ಲರೂ ಕೆಲಸ ಮಾಡುತ್ತೇವೆ ಎಂದರು.