ಶಿವಮೊಗ್ಗ : ದುಬೈಯಿಂದ ಶಿವಮೊಗ್ಗ ಆಗಮಿಸಿದ್ದ ವ್ಯಕ್ತಿಗೆ ಕೋವಿಡ್ ನೆಗಟಿವ್ ವರದಿ ಬಂದಿದ್ದು, ಜಿಲ್ಲೆಯಲ್ಲಿ ದಕ್ಷಿಣ ಆಫ್ರಿಕಾ ಮೂಲಕ ರೂಪಾಂತರಿತ ವೈರಸ್ ಪತ್ತೆಯಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸ್ಪಷ್ಟನೆ ನೀಡಿದರು.
ಶುಕ್ರವಾರ ಮೆಗ್ಗಾನ್ ಆಸ್ಪತ್ರೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ದುಬೈಯಿಂದ ಆಗಮಿಸಿದ್ದ ವ್ಯಕ್ತಿಯ ಕೋವಿಡ್ ವರದಿ ನೆಗಟಿವ್ ಬಂದಿದ್ದು, ಪ್ರಾಥಮಿಕ ಸಂಪರ್ಕ ಹೊಂದಿರುವ ಎಲ್ಲರಿಗೂ ಸಹ ನೆಗಟಿವ್ ಬಂದಿದೆ. ಈ ವ್ಯಕ್ತಿಯೊಂದಿಗೆ ಎರಡನೇ ಹಂತದ ಸಂಪರ್ಕ ಹೊಂದಿದ್ದ 39 ಮಂದಿಯ ತಪಾಸಣೆ ನಡೆಸಲಾಗಿದ್ದು, ಎಲ್ಲರ ವರದಿ ನೆಗೆಟಿವ್ ಇದೆ.
ಈ ಹಿನ್ನೆಲೆಯಲ್ಲಿ ಯಾರೂ ಅನಗತ್ಯವಾಗಿ ಭಯಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಜಿಲ್ಲೆಯಲ್ಲಿ 60ವರ್ಷ ಮೇಲ್ಪಟ್ಟವರಿಗೆ ಲಸಿಕೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಹಾಕಲಾಗುತ್ತಿದೆ. ಮೆಗ್ಗಾನ್ ಆಸ್ಪತ್ರೆ, ಆಯುರ್ವೇದಿಕ್ ಕಾಲೇಜು ಆಸ್ಪತ್ರೆ, 41 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 7 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ನೀಡಲಾಗುತ್ತಿದೆ.
ಇದಲ್ಲದೆ ಶಿವಮೊಗ್ಗ ನಗರದ 8 ಖಾಸಗಿ ಆಸ್ಪತ್ರೆಗಳಲ್ಲಿ ರೂ.250 ದರ ನಿಗದಿಪಡಿಸಿ ಲಸಿಕೆ ನೀಡಲಾಗುತ್ತಿದೆ. ಸ್ಥಳದಲ್ಲಿಯೇ ನೋಂದಣಿ ಮಾಡಲು ಅವಕಾಶವಿದ್ದು, ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ನೆರೆಯ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ನಮ್ಮ ರಾಜ್ಯದಲ್ಲಿ ಸಹ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸರ್ಕಾರ 1 ರಿಂದ 5ನೇ ತರಗತಿ ಮಕ್ಕಳಿಗೆ ಶಾಲೆ ಆರಂಭಿಸಲು ಅನುಮತಿ ನೀಡಿಲ್ಲ. 6ನೇ ತರಗತಿಯಿಂದ ಮೇಲಿನವರಿಗೆ ಮಾತ್ರ ಶಾಲೆ ನಡೆಸಲು ಅನುಮತಿ ನೀಡಿದೆ ಎಂದು ಅವರು ಹೇಳಿದರು. ಮೇಯರ್ ಸುನಿತಾ ಅಣ್ಣಪ್ಪ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.