ಶಿವಮೊಗ್ಗ : ಚುನಾವಣೆ ಅಂದರೆ ಅಲ್ಲಿ ಬಿಜೆಪಿ ಪಕ್ಷ ಗೆಲುವುದು ನಿಶ್ಚಿತ. ಈ ಹಿಂದೆ ಲೋಕಸಭೆ ಚುನಾವಣೆ ಬಳಿಕ ನಡೆದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇವೆ. ಈಗ ನಡೆಯಲಿರುವ ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲೂ ನಮ್ಮ ಪಕ್ಷ ಗೆಲ್ಲಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಮಾತಾನಾಡಿದ ಅವರು, ಮುಂದಿನ ಸಿಎಂ ನಾನೇ ಎಂದು ಹೇಳುತ್ತಿದ್ದ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಸ್ಪರ್ಧಿಸಿ ಸೋತು, ಸಿಎಂ ಸ್ಥಾನವನ್ನು ಕಳೆದುಕೊಂಡರು. ಅವರಿಗೆ ಮಾನ, ಮಾರ್ಯಾದೆನೇ ಇಲ್ಲ. ಸೋತಿದ್ದೇವೆ ಎಂಬ ಜ್ಞಾನವಿಲ್ಲದೇ ಏನೇನೋ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಕೋವಿಡ್ ಬಗ್ಗೆ ಸಭೆ ಕರೆದು ಏನೂ ಲಾಭವಿಲ್ಲ ಎನ್ನುವ ಡಿಕೆಶಿ ರಾಷ್ಟ್ರಪತಿ ಆಳ್ವಿಕೆ ಹೇರಿಬಿಡಿ. ವಿಧಾನಸಭೆಯನ್ನೇ ವಿಸರ್ಜಿಸಿ ಅಂತ ಹೇಳುತ್ತಾರೆ. ಅವರಿಗೆ ಅರ್ಜೆಂಟಾಗಿ ಅಧಿಕಾರಕ್ಕೆ ಬರಬೇಕು. ಈ ಯೋಚನೆ ಬಿಟ್ಟರೆ ಬೇರೇನಿಲ್ಲ ಎಂದರು.
ಜನರ ಹಿತದೃಷ್ಟಿಯಿಂದ ಸಲಹೆ- ಸೂಚನೆ ನೀಡಿ, ಸಹಕಾರ ಕೊಡೋದು ಬಿಟ್ಟು ಹೀಗೆ ಹೇಳಿದ್ದಾರೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಮುಂದಿನ ಜನ್ಮದಲ್ಲೂ ಅಧಿಕಾರಕ್ಕೇರುವ ಅದೃಷ್ಟ ಬರಲ್ಲ ಎಮದು ವ್ಯಂಗ್ಯ ವಾಡಿದರು.
ಲಸಿಕೆ ಬೇರೆ ರಾಷ್ಟ್ರಕ್ಕೆ ರಫ್ತು ಬಗ್ಗೆ ಸಹ ಸಿದ್ದರಾಮಯ್ಯ, ಡಿಕೆಶಿ ಮಾತನಾಡಿದ್ದಾರೆ. ಭಾರತೀಯ ಸಂಸ್ಕೃತಿ ಹಂಚಿಕೊಂಡು ತಿನ್ನುವುದು. ಇದು ಇಟಲಿ ಸಂಸ್ಕೃತಿಯಲ್ಲ. ಇಟಲಿ ಸಂಸ್ಕೃತಿಯಂತೆಯೇ ಆ ಇಬ್ಬರು ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಸೋನಿಯಾ ಗಾಂಧಿ ಸಂತೃಪ್ತಿ ಪಡಿಸಲು ಸಿದ್ದರಾಮಯ್ಯ, ಡಿಕೆಶಿ ಮಾತನಾಡುತ್ತಿದ್ದಾರೆ. ನಮ್ಮ ರಾಷ್ಟ್ರದಲ್ಲಿ ಲಸಿಕೆ ಬಳಸಿಕೊಂಡೇ ಬೇರೆ ರಾಷ್ಟ್ರಕ್ಕೇ ಕಳುಹಿಸಲಾಗುತ್ತಿದೆ. ಈ ಭಾರತೀಯ ಸಂಸ್ಕೃತಿಗೆ ಒಗ್ಗುವಂತ ಅಭ್ಯಾಸವೇ ಕಾಂಗ್ರೆಸ್ಸಿಗರಿಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.