Advertisement
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದಲ್ಲಿ ಗಂಭೀರ ಆರೋಪ ಹೊತ್ತ ರಮೇಶ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಸಿಎಂ ಬೊಮ್ಮಾಯಿ ನೇತೃತ್ವದ ಸರಕಾರದಲ್ಲಿ ಭ್ರಷ್ಟಾಚಾರ ಹಾಗೂ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ಪ್ರಕಟಿಸಿದ್ದಾರೆ. ಈ ಇಬ್ಬರೂ ಪ್ರಭಾವಿಗಳ ರಾಜೀನಾಮೆಗೆ ಬೆಳಗಾವಿಯ ರಾಜಕಾರಣವೇ ಕಾರಣ ಎಂಬುದು ಸತ್ಯ. ಎರಡೂ ಪ್ರಕರಣಗಳಲ್ಲಿ ರಾಜಕೀಯ ಪ್ರತಿಷ್ಠೆಯೇ ಪರಿಣಾಮ ಬೀರಿದೆ.
Related Articles
Advertisement
ಕಾಂಗ್ರೆಸ್ ಮತ್ತು ಜೆಡಿಎಸ್ ಸರಕಾರ ಪತನಕ್ಕೆ ಕಾರಣವಾದ ರಮೇಶ ಜಾರಕಿಹೊಳಿ ತಮ್ಮ ಮುಂದಾಳತ್ವದಲ್ಲಿ ಬಿಜೆಪಿ ಸರಕಾರ ರಚಿಸಲು ಪ್ರಮುಖ ಕಾರಣರಾದರು. ರಮೇಶ್ ನೇತೃತ್ವದ ಶಾಸಕರ ಬಲದಿಂದಯಡಿಯೂರಪ್ಪ ಮುಖ್ಯಮಂತ್ರಿಯಾದರು. ಅಷ್ಟೇ ಅಲ್ಲ ಮೊದಲೇ ಮಾತು ಕೊಟ್ಟಂತೆ ಜಾರಕಿಹೊಳಿ ಅವರಿಗೆ ನೀರಾವರಿ ಖಾತೆಯೂ ಸಿಕ್ಕಿತು. ನೀರಾವರಿ ಸಚಿವರಾಗಿದ್ದೇ ತಡ ಜಿಲ್ಲೆಯ ರಾಜಕಾರಣದಲ್ಲಿ ವಿಚಿತ್ರ ತಿರುವುಗಳು ಕಂಡುಬಂದವು. ಸೇಡಿನ ರಾಜಕಾರಣ ಹೆಚ್ಚು ಮಹತ್ವ ಪಡೆದುಕೊಂಡಿತು. ಜಿದ್ದಾಜಿದ್ದಿನ ರಾಜಕಾರಣ ಸರಕಾರದ ಜತೆಗೆ ರಮೇಶ ಜಾರಕಿಹೊಳಿ ಅವರಿಗೂ ಮುಳುವಾಯಿತು. ರಹಸ್ಯ ಕಾರ್ಯಾಚರಣೆಯ ತಂತ್ರ ಜಾರಕಿಹೊಳಿ ಸಚಿವ ಸ್ಥಾನವನ್ನೇ ಕಸಿದುಕೊಂಡಿತು.
ಗಂಭೀರವಾಗಿ ಪರಿಗಣಿಸಿರಲಿಲ್ಲ : ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರ ಇದ್ದಾಗ ಒಂದು ಸಣ್ಣ ಪಿಎಲ್‌ಡಿ ಬ್ಯಾಂಕ್ ರಾಜಕಾರಣ ಸರಕಾರದ ಬುಡಕ್ಕೆ ಬೆಂಕಿ ಹಚ್ಚಿತ್ತು. ಆಗ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ನೇರ ಹಸ್ತಕ್ಷೇಪದಿಂದ ಮುನಿಸಿಕೊಂಡಿದ್ದ ರಮೇಶ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಲ್ಲದೆ ಮೈತ್ರಿ ಸರಕಾರ ಉರುಳಿಸುವ ಪ್ರತಿಜ್ಞೆ ಮಾಡಿದ್ದರು. ಆಗ ಯಾರೂ ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ರಮೇಶ ಜಾರಕಿಹೊಳಿ ಸುಮ್ಮನಿರದೆ ಕಾಂಗ್ರೆಸ್ ಶಾಸಕರನ್ನು ತಮ್ಮ ಕಡೆ ಸೆಳೆಯುವಲ್ಲಿ ಯಶಸ್ವಿಯಾದರು. ಒಂದು ತಿಂಗಳಿಗೂ ಹೆಚ್ಚು ಕಾಲ ರಾಜ್ಯದ ಹೊರಗಡೆ ಇದ್ದು ಮೈತ್ರಿ ಸರಕಾರ ಕೆಡವಿದರು. ಇದೆಲ್ಲಈಗ ಇತಿಹಾಸ. ಆದರೆ ಆಗ ಸರಕಾರ ಉರುಳಿಸಿದ ಕುಖ್ಯಾತಿ ಗಡಿ ಜಿಲ್ಲೆ ಬೆಳಗಾವಿಗೆ ಅಂಟಿಕೊಂಡಿತು.
-ಕೇಶವ ಅದಿ