ಕನ್ನಡದಲ್ಲಿ ಈಗಾಗಲೇ ಸಂಗೀತ ನಿರ್ದೇಶಕರು ತೆರೆ ಮೇಲೆ ಕಾಣಿಸಿಕೊಂಡಾಗಿದೆ. ಅಷ್ಟೇ ಅಲ್ಲ, ಕೆಲವರು ಹೀರೋ ಆಗಿರುವ ಉದಾಹರಣೆಗಳೂ ಇವೆ. ಆ ಸಾಲಿಗೆ ಈಗ ಕೃಪಾಕರ್ ಹೊಸ ಸೇರ್ಪಡೆ ಎನ್ನಬಹುದು. ಕೃಪಾಕರ್‌ಗೆ ಸಿನಿಮಾ ರಂಗ ಹೊಸದೇನಲ್ಲ. ಸುಮಾರು ಎರಡು ದಶಕಕ್ಕೂ ಹೆಚ್ಚು ಕಾಲ ಗಾಂಧಿನಗರದ ಆಳವನ್ನು ಅರಿತಿದ್ದಾರೆ. ಈವರೆಗೂ 45 ಚಿತ್ರಗಳಿಗೆ ಸಂಗೀತ ನೀಡಿದ್ದಾರೆ.
ಕೆಲ ಕಾರಣಗಳಿಂದ ಅವರು ಕಳೆದ ಆರು ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದರು. ನಿರ್ದೇಶಕ ದಿನೇಶ್ ಬಾಬು ಅವರು ತಮ್ಮ “ಪ್ರಿಯಾಂಕ’ ಚಿತ್ರಕ್ಕೆ ಸಂಗೀತ ಕೊಡಿಸುವ ಮೂಲಕ ಕೃಪಾಕರ್ ಅವರನ್ನು ಕರೆತಂದರು. ತಮ್ಮ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರುವ ಕೃಪಾಕರ್, ಹೊಸ ಚಿತ್ರಕ್ಕೆ ಹೀರೋ ಆಗಿದ್ದಾರೆ. ಕೃಪಾಕರ್ ನಾಯಕನಾಗಿ ನಟಿಸುತ್ತಿರುವ ಚಿತ್ರಕ್ಕೆ ಏನೆಂದು ಹೆಸರಿಡಿದು ಕರೆಯಬೇಕೋ ಗೊತ್ತಿಲ್ಲ.
ಏಕೆಂದರೆ, ಚಿತ್ರಕ್ಕೆ ಟೈಟಲ್ ಇಲ್ಲ. “ಥಮ್ಸಪ್ ಸಿಂಬಲ್’ ಶೀರ್ಷಿಕೆ ಅನ್ನುತ್ತಾರೆ ಕೃಪಾಕರ್. ಅದನ್ನು ವಿಕ್ಟರಿ, ಗೆಲುವು, ಸಕ್ಸಸ್ ಹೀಗೆ ಏನುಬೇಕಾದರೂ ಕರೀಬಹುದು. ಈಗಾಗಲೇ “ವಿಕ್ಟರಿ’ ಹೆಸರುಳ್ಳ ಚಿತ್ರ ಬಂದಿದೆ. ಆದರೂ, ಕೃಪಾಕರ್ ಪ್ರಕಾರ, ಥಮ್ಸಪ್ ಸಿಂಬಲ್ ಅನ್ನು “ಗುಡ್‌ಲಕ್’, “ಆಲ್ ದಿ ಬೆಸ್ಟ್’ ಅಂತ ಕರೆಯಬಹುದಂತೆ. ಅದೇನೆ ಇರಲಿ, ಇತ್ತೀಚೆಗೆ ನಡೆದ ಚಿತ್ರದ ಮುಹೂರ್ತಕ್ಕೆ ಕಾಂಗ್ರೆಸ್ ಅಧ್ಯಕ್ಷ ಜಿ.ಪರಮೇಶ್ವರ್ ಬಂದು ಚಿತ್ರಕ್ಕೆ ಕ್ಲಾಪ್ ಮಾಡಿ “ಗುಡ್‌ಲಕ್’ ಹೇಳಿದರು.
ಅಂದು ಅಭಿಜಿತ್, ಪುಟ್ಟಣ್ಣ, ಪ್ರಿಯಾಂಕ ಇತರರು ಆಗಮಿಸಿ ತಂಡಕ್ಕೆ “ಆಲ್ ದಿ ಬೆಸ್ಟ್’ ಎಂದಿದ್ದಾರೆ. ಮಿಥುನ್ ಈ ಚಿತ್ರದ ನಿರ್ದೇಶಕರು. ಅವರು ತಮ್ಮ ಚಿತ್ರಕ್ಕೆ ಸಂಗೀತ ಕೊಡಿ ಅಂತ ಕೃಪಾಕರ್ ಬಳಿ ಬಂದವರು. ಆಗ ಅವರ ಚಿತ್ರಕ್ಕೆ ಹೀರೋ ಆಯ್ಕೆಯಾಗಿರಲಿಲ್ಲ. ಸಂಗೀತ ನಿರ್ದೇಶಕ ಕೃಪಾಕರ್ ಅವರನ್ನು ನೋಡಿ, ನೀವೇ ಹೀರೋ ಆಗಿ ಅಂದರಂತೆ. ಅದಕ್ಕೆ ಕೃಪಾಕರ್ ಕೂಡ ತಮ್ಮೊಳಗಿದ್ದ ಆಸೆಯನ್ನು ಈಡೇರಿಸಿಕೊಂಡಿದ್ದಾರೆ.
ಇದೊಂದು ಜರ್ನಿ ಸ್ಟೋರಿ. ಪಾಸಿಟಿವ್ ಆಗಿ ನಡೆಯುವಂತಹ ಘಟನೆಗಳ ಸುತ್ತ ಸಾಗುವ ಕಥೆ. ಆ ಕಥೆಯಲ್ಲಿ ಕೃಪಾಕರ್ ಅವರು ಟ್ರಾವೆಲ್ ಫೋಟೋಗ್ರಾಫರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ನಿರ್ದೇಶಕ ಮಿಥುನ್ ಅವರಿಗೆ ಇದು ಮೊದಲ ಚಿತ್ರ. “ಮುದ್ದಾದ ಲವ್‌ಸ್ಟೋರಿ ಹೆಣೆದಿದ್ದು, ಇಲ್ಲಿ ಕಾಮಿಡಿ ಡ್ರಾಮ ಜೊತೆಗೆ ರೊಮ್ಯಾಂಟಿಕ್ ಅಂಶಗಳೂ ಇವೆ. ಒಂದಷ್ಟು ತಿರುವುಗಳ ನಡುವೆ ನಡೆಯೋ ಕಥೆಯಲ್ಲಿ ಸಾಕಷ್ಟು ಥ್ರಿಲ್ ಇದೆ.
ಮಾರ್ಚ್ 12ರಿಂದ ಚಿತ್ರೀಕರಣ ಶುರುವಾಗಲಿದೆ. ಬೆಂಗಳೂರು, ಸಕಲೇಶಪುರ, ಮಂಗಳೂರು, ಗೋಕರ್ಣ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ’ ಎಂದು ವಿವರ ಕೊಟ್ಟರು ಮಿಥುನ್. ಚಿತ್ರಕ್ಕೆ ಡಾಲಿಶಾ ಶಾಲು ನಾಯಕಿ. ಇವರಿಗೆ ಕನ್ನಡದ ಮೊದಲ ಚಿತ್ರವಿದು. ಈ ಹಿಂದೆ ತೆಲುಗಿನಲ್ಲೊಂದು ಚಿತ್ರ ಮಾಡಿದ್ದಾರೆ. ಅದೀಗ ಬಿಡುಗಡೆಗೆ ರೆಡಿಯಾಗಿದೆ. ಈ ಚಿತ್ರದಲ್ಲಿ ಒಂದೊಳ್ಳೆಯ ಪಾತ್ರ ಸಿಕ್ಕಿದೆ.
ಅವಕಾಶ ಕೊಟ್ಟವರಿಗೊಂದು ಥ್ಯಾಂಕ್ಸ್ ಅಂತ ಹೇಳಿ ಸುಮ್ಮನಾದರು ಶಾಲು. ಗಣಪ ವಿಷನ್ಸ್ ಬ್ಯಾನರ್‌ನಡಿ ಕೃಪಾಕರ್, ಮಿಥುನ್, ವಿಜಿ ಮತ್ತೆ ಅವರ ಇನ್ನೊಬ್ಬ ಗೆಳೆಯರು ಸೇರಿ ಈ ಚಿತ್ರ ನಿರ್ಮಾಣ ಮಾಡತ್ತಿದ್ದಾರೆ. ಚಿತ್ರದಲ್ಲಿ ಬಿರಾದಾರ್, ಮೋಹನ್ ಜುನೇಜಾ, ಶ್ರೀ ಹರಿ, ಪಂಕಜ ಇತರರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಉದಯನ್ ಅವರ ಛಾಯಾಗ್ರಹಣವಿದೆ.
* ವಿಜಯ್ ಭರಮಸಾಗರ