Advertisement
ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಆಗಮಿಸಿದ ರೈತ ಸಂಘದ ಕಾರ್ಯಕರ್ತರು ಕೆಆರ್‌ಎಸ್ ಪ್ರವೇಶ ದ್ವಾರದ ಬಳಿ ಕುಳಿತು ಪ್ರತಿಭಟನೆ ನಡೆಸಿದರು. ಬೆಳೆಗಳ ರಕ್ಷಣೆಗೆ ನೀರು ಹರಿಸುವಂತೆ ಬೇಡಿಕೆ ಮುಂದಿಟ್ಟು ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿರುವ ರೈತರ ಮನವಿಗೆ ಸ್ಪಂದಿಸದ ಮುಖ್ಯಮಂತ್ರಿ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಹಸಿರು ಶಾಲು ಬೀಸಿ ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಪೊಲೀಸ್ ಬಂದೋಬಸ್ತ್: ಕೆಆರ್‌ಎಸ್ ಮುತ್ತಿಗೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಅಣೆಕಟ್ಟೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಿತ್ತು. 6 ಡಿವೈಎಸ್ಪಿ, 1ಸಿಪಿಐ, 12 ಪಿಎಸ್‌ಐ, 5 ಜಿಲ್ಲಾ ಸಶಸ್ತ್ರ ಮೀಸಲು ಪಡೆ, 2 ಕೆಎಸ್‌ಆರ್‌ಪಿ ತುಕಡಿಗಳಲ್ಲದೆ 200 ಮಂದಿ ಪೊಲೀಸರನ್ನು ಭದ್ರತೆಗೆ ನೇಮಕ ಮಾಡಿತ್ತು.
ಕೆಆರ್‌ಎಸ್ ಪ್ರವೇಶ ದ್ವಾರದ ಉದ್ದಕ್ಕೂ ಬ್ಯಾರಿಕೇಡ್‌ಗಳನ್ನು ಹಾಕಿ ಅದನ್ನು ಬೇಧಿಸಿ ಮುಂದೆ ಸಾಗದಂತೆ ಭದ್ರತೆ ಒದಗಿಸಿದ್ದರು. ಬೈಕ್‌ಗಳಲ್ಲಿ ಧಾವಿಸಿ ಬಂದ ರೈತ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಕೆಆರ್‌ಎಸ್ ಪ್ರವೇಶ ದ್ವಾರದಲ್ಲೇ ತಡೆದು ನಿಲ್ಲಿಸಿದರು.
ಸ್ಥಳದಲ್ಲೇ ಪ್ರತಿಭಟನೆ, ಆಕ್ರೋಶ: ಒಣಗುತ್ತಿರುವ ಬೆಳೆಗಳಿಗೆ ನೀರು ಹರಿಸದೆ ರೈತರನ್ನು ದ್ವೇಷ ಮಾಡುತ್ತಿರುವ ರಾಜ್ಯಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತ ಸಂಘದ ಕಾರ್ಯಕರ್ತರು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ರೈತರ ಸಂಕಷ್ಟಕ್ಕೆ ಸ್ಪಂದಿಸದ ರೈತ ವಿರೊಧಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನೀರು ಬಿಡಲಾಗುವುದಿಲ್ಲ: ಪ್ರತಿಭಟನಾ ನಿರತ ರೈತರನ್ನು ಪೊಲೀಸ್ ಅಧಿಕಾರಿಗಳು ಸಮಾಧಾನಪಡಿಸಲು ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಸ್ಥಳಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳನ್ನು ಕರೆಸಿ ಸಮಜಾಯಿಷಿ ನೀಡಬೇಕು ಎಂದು ಬಿಗಿಪಟ್ಟು ಹಿಡಿದರು. ಅಧಿಕಾರಿಗಳು ಸ್ಪಷ್ಟ ನಿರ್ಧಾರ ಪ್ರಕಟಿಸುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ನೀರು ಬಿಡಲು ಸಾಧ್ಯವಿಲ್ಲ: ಪ್ರತಿಭಟನಾಕಾರರ ಒತ್ತಾಯಕ್ಕೆ ಮಣಿದ ಕೃಷ್ಣರಾಜಸಾಗರ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಮಕೃಷ್ಣ ಅವರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ನೀರು ಬಿಡುವಂತೆ ಸರ್ಕಾರದಿಂದ ನಮಗೆ ಆದೇಶ ಬಂದಿಲ್ಲ. ಅಣೆಕಟ್ಟೆಯಲ್ಲಿ ಕಡಿಮೆ ನೀರು ಸಂಗ್ರಹವಾಗಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ನೀರು ಬಿಡಲು ಆಗದು. ಇರುವ ನೀರನ್ನು ಕುಡಿಯುವ ನೀರಿಗೆ ಕಾಯ್ದಿರಿಸಲಾಗಿದೆ. ಬೆಳೆದುನಿಂತಿರುವ ಬೆಳೆಗಳಿಗೆ ನೀರು ಹರಿಸುವುದು ಕಷ್ಟದ ವಿಚಾರ. ಸರ್ಕಾರದ ಮಟ್ಟದಲ್ಲಿ ತೀರ್ಮಾನ ಕೈಗೊಂಡು ನಿರ್ದೇಶನ ನೀಡಿದರಷ್ಟೇ ನೀರು ಬಿಡಲು ಸಾಧ್ಯ ಎಂದು ಎಂದು ಹೇಳಿದರು. ಪ್ರತಿಭಟನೆಯಲ್ಲಿ ಮೇಳಾಪುರ ಸ್ವಾಮಿಗೌಡ, ದೊಡ್ಡಪಾಳ್ಯ ಜಯರಾಂ, ಬಾಲಕೃಷ್ಣ, ಲತಾ ಶಂಕರ್, ಮರಳಗಾಲ ಕೃಷ್ಣೇಗೌಡ, ಪಿಎಸ್‌ಎಸ್‌ಕೆ ಮಾಜಿ ನಿರ್ದೇಶಕ ಪಾಂಡು ಸೇರಿದಂತೆ ಸಾವಿರಾರು ಸಂಖ್ಯೆಯ ರೈತರು ಇದ್ದರು.