ಶ್ರೀರಂಗಪಟ್ಟಣ: ಕಳೆದ 6 ವರ್ಷಗಳಲ್ಲಿ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ ಮತ್ತೆ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣವೂ ಸಾಕಷ್ಟು ಪ್ರಮಾಣದಲ್ಲಿ ಕ್ಷೀಣಿಸಿದೆ. ಮಳೆಯ ಪರಿಸ್ಥಿತಿ ಗಮನಿಸಿದರೆ ಈ ಬಾರಿ ಕೃಷ್ಣರಾಜಸಾಗರ ಜಲಾಶಯ ನೂರು ಅಡಿ ತಲುಪುವುದೂ ಅನುಮಾನವಾಗಿದೆ.
ಕೆಆರ್‌ಎಸ್‌ನ ಗರಿಷ್ಠ ಮಟ್ಟ 124.80 ಅಡಿ ಇದ್ದು, ಶುಕ್ರವಾರ ಜಲಾಶಯದಲ್ಲಿ 78.45 ಅಡಿ ನೀರು ಸಂಗ್ರಹವಾಗಿತ್ತು. ಅಣೆಕಟ್ಟೆಗೆ 1215 ಕ್ಯೂಸೆಕ್ ನೀರು ಹರಿದು ಬರುತ್ತಿದ್ದರೆ, 2125 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದಲ್ಲಿ ಈಗ 10.1 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಅಣೆಕಟ್ಟೆಯಲ್ಲಿ 95.80 ಅಡಿ ನೀರು ಸಂಗ್ರಹವಾಗಿತ್ತು. ಜಲಾಶಯಕ್ಕೆ 19,761 ಕ್ಯೂಸೆಕ್ ನೀರು ಹರಿದು ಬರುತ್ತಿದ್ದರೆ, 10087 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿತ್ತು. ಅಂದು ಜಲಾಶಯದಲ್ಲಿ 19.6 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು.
2012ರಲ್ಲಿ ತೀವ್ರ ಮಳೆ ಅಭಾವದಿಂದ ಕೆಆರ್‌ಎಸ್‌ನಲ್ಲಿ ಕೇವಲ 77.20 ಅಡಿ ನೀರು ಮಾತ್ರ ಸಂಗ್ರಹವಾಗಿತ್ತು. ಅಂದು ಜಲಾಶಯಕ್ಕೆ 1718 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. 2835 ಕ್ಯೂಸೆಕ್ ನೀರನ್ನು ಹೊರಗೆ ಹರಿಸಲಾಗುತ್ತಿತ್ತು. ಆರು ವರ್ಷಗಳ ಹಿಂದಿನ ಕರಾಳ ಪರಿಸ್ಥಿತಿ ಮತ್ತೂಮ್ಮೆ ಎದುರಾಗಿರುವುದು ಜಿಲ್ಲೆಯ ರೈತರನ್ನು ದಿಕ್ಕೆಡಿಸುವಂತೆ ಮಾಡಿದೆ.
ಕಳೆದ ಹತ್ತು ವರ್ಷಗಳಲ್ಲಿ 2009, 2010, 2012, 2014, 2016 ಹಾಗೂ 2017 ಸೇರಿದಂತೆ ಆರು ವರ್ಷಗಳಲ್ಲಿ ಜಲಾಶಯದ ನೀರಿನ ಮಟ್ಟ ಜುಲೈ 14ರ ವೇಳೆಗೆ 100ರ ಗಡಿಯನ್ನೂ ಮುಟ್ಟಿರಲಿಲ್ಲ. ಉಳಿದ ವರ್ಷಗಳಲ್ಲಿ ಜಲಾಶಯದಲ್ಲಿ ನೀರಿನ ಸಂಗ್ರಹ ಈ ವೇಳೆಗೆ 100 ಅಡಿ ದಾಟಿತ್ತು. ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟ 100ರಿಂದ 110 ಅಡಿಯವರೆಗೆ ದಾಖಲಾದರೂ ಕೃಷಿ ಮತ್ತು ಕುಡಿಯುವ ನೀರಿಗೆ ಕಷ್ಟಪಟ್ಟು ಹೊಂದಾಣಿಕೆ ಮಾಡಿದ ಉದಾಹರಣೆಗಳಿವೆ. ಆದರೆ, ಈ ಬಾರಿ ಮುಂಗಾರು ಆರಂಭವಾಗಿ ಎರಡು ತಿಂಗಳಾದರೂ ಮಳೆಯಿಲ್ಲದೆ ಜಲಾಶಯ ಬರಿದಾಗಿದೆ. ನೀರಿಲ್ಲದೆ ಕಳಾಹೀನ ಸ್ಥಿತಿಯಲ್ಲಿದೆ. ಕಣಿವೆ ರೈತರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ.
ಕಾವೇರಿ ಕಣಿವೆ ಪ್ರದೇಶದಲ್ಲಿ ಹರಿಯುವ ಕಾವೇರಿ, ಲೋಕಪಾವನಿ, ಶಿಂಷಾ ಹಾಗೂ ಹೇಮಾವತಿ ನದಿಗಳು ಸಂಪೂರ್ಣ ಸೊರಗಿವೆ. ಸಾಮಾನ್ಯವಾಗಿ ಜುಲೈ ತಿಂಗಳಲ್ಲಿ ಭರ್ತಿಯಾಗುತ್ತಿದ್ದ ಕಬಿನಿ, ಹಾರಂಗಿ, ಕೃಷ್ಣರಾಜಸಾಗರ ಜಲಾಶಯಗಳಲ್ಲಿ ನೀರಿನ ಪ್ರಮಾಣ ಗಂಭೀರ ಹಂತಕ್ಕೆ ಕುಸಿದಿದೆ. ಮಳೆಯೂ ಬಾರದೆ ಜಲಾಶಯಗಳೂ ಭರ್ತಿಯಾಗದೆ ಕೃಷಿ ಚಟುವಟಿಕೆಗೆ ಕಣಿವೆ ಪ್ರದೇಶದಲ್ಲಿ ತೀವ್ರ ಹಿನ್ನಡೆ ಉಂಟಾಗಿದೆ.
ಇದೇ ವೇಳೆ, ಕೆಆರ್‌ಎಸ್‌ಗೆ ಸಾಕಷ್ಟು ನೀರು ಹರಿದು ಬರದಿದ್ದರೂ ಜುಲೈ 1ರಿಂದಲೇ ತಮಿಳುನಾಡಿಗೆ ಸುಮಾರು 2000 ಕ್ಯೂಸೆಕ್‌ಗೂ ಹೆಚ್ಚು ನೀರನ್ನು ಹರಿಸಲಾಗುತ್ತಿದೆ.
– ಗಂಜಾಂ ಮಂಜು