ಮಂಡ್ಯ: ಜಿಲ್ಲೆಯ ಜೀವನಾಡಿಯಾಗಿರುವ ಕೆಆರ್‌ಎಸ್ ಜಲಾಶಯ ಎಲ್ಲಿಯೂ ಬಿರುಕು ಬಿಟ್ಟಿಲ್ಲ. ಸುರಕ್ಷಿತವಾಗಿದೆ ಎಂದು ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರ ವಿಜಯಕುಮಾರಸ್ ಸ್ಪಷ್ಟನೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ಯಾಂ ಬಿರುಕು ಬಿಟ್ಟಿಲ್ಲ. ರೈತರು ಆತಂಕ ಪಡಬೇಕಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಮಾಹಿತಿ ಜತೆಗೆ ವರದಿ ನೀಡಲಾಗಿದೆ. ಸಂಸದೆ ಸುಮಲತಾ ಅಂಬರೀಷ್ ಅವರಿಗೂ ಮಾಹಿತಿ ನೀಡಿದ್ದೇವೆ ಎಂದರು.
ವಿವಾದ ಶುರುವಾದ ಬಳಿಕ ಪರಿಶೀಲನೆ ಮಾಡಿ ವರದಿ ನೀಡಲಾಗಿದೆ. ಕೆಆರ್‌ಎಸ್‌ನ ಅಧಿಕಾರಿಗಳು ಪ್ರತಿ ದಿನ ಪರಿಶೀಲನೆ ಮಾಡುತ್ತಿದ್ದಾರೆ. ಎಲ್ಲಿಯೂ ಕ್ರ‍್ಯಾಕ್ ಬಿಟ್ಟಿಲ್ಲ ಸುರಕ್ಷಿತವಾಗಿದೆ. ಎಲ್ಲಾ ಗೇಟ್‌ಗಳನ್ನು ಬದಲಾವಣೆ ಮಾಡಲಾಗಿದೆ. ಮೊದಲು ಕಲ್ಲು ಹೊರಗೆ ಬರುತ್ತಿದ್ದವು. ಗೇಟ್ ಅಳವಡಿಸಿದ ಬಳಿಕ ಸರಿ ಮಾಡಲಾಗಿದೆ. ರೈತರು ಯಾವ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ :ಚಾಮರಾಜನಗರ: ಶಾಸಕ ಬಸವರಾಜು ಪಾಟೀಲ್ ಯತ್ನಾಳ್ ವಿರುದ್ಧ ಘೋಷಣೆ
ರಾಜ್ಯದ ಎಲ್ಲ ಜಲಾಶಯಗಳಿಗೂ ತಜ್ಞರ ಸಮಿತಿ ಇರುತ್ತದೆ. ಅದರಂತೆ 2014ರ ಮೇ 22ರಂದು ಕೆಆರ್‌ಎಸ್ ಜಲಾಶಯಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅದರಂತೆ ಕೆಲವು ವರದಿಗಳನ್ನು ನೀಡಿದ್ದರು. ವರದಿಯಂತೆ ಜಲಾಶಯದಲ್ಲಿ ಎಲ್ಲ ರೀತಿಯ ಪರಿಶೀಲನೆ ನಡೆಸಿ 15 ಮೀಟರ್‌ಗಳ ಅಂತರದಲ್ಲಿ ಕ್ಯಾಮೆರಾ ಅಳವಡಿಸಿ ಅದರಲ್ಲಿನ ಮಾಹಿತಿ ಕಲೆ ಹಾಕಿ ಇಡೀ ಡ್ಯಾಂ ಅನ್ನು ಯೂಸರ್ ವ್ಯಾಲ್ಯೂ ಶೇ.5ರಷ್ಟು ಸುರಕ್ಷಿತವಾಗಿ ಎಂಬುದನ್ನು ಖಚಿತಪಡಿಸಿಕೊಂಡು ಸುರಕ್ಷಿತವಾಗಿಡಲಾಗಿದೆ. ಎಲ್ಲ ರೀತಿಯ ಪರಿಶೀಲನೆಯಲ್ಲೂ ಉತ್ತಮವಾಗಿದೆ ಎಂದು ವರದಿ ಬಂದಿದೆ. ಎಲ್ಲಿಯೂ ಬಿರುಕು ಬಿಟ್ಟಿಲ್ಲ ಎಂದು ತಿಳಿಸಿದರು.