ಮಂಡ್ಯ ಜಿಲ್ಲೆಯ ವಿಶ್ವ ವಿಖ್ಯಾತ ಕೃಷ್ಣರಾಜಸಾಗರ ಅಣೆಕಟ್ಟು ಬಿರುಕು ಬಿಟ್ಟಿದ್ದು, ಸುರಕ್ಷತೆ ಇಲ್ಲ ಎಂಬ ವಿಚಾರ ಈಗ ರಾಜಕೀಯ ವಾಕ್ಸ ಮರಕ್ಕೆ ವೇದಿಕೆಯಾಗಿದೆ. ಪ್ರಸ್ತುತ ಬೆಳವಣಿಗೆ ಕಾವೇರಿ ಕೊಳ್ಳದ ರೈತರ ಆತಂಕಕ್ಕೆ ಕಾರಣವಾಗಿದ್ದು, ಇದನ್ನು ಗಂಭೀರವಾಗಿ ತೆಗೆದುಕೊಳ್ಳುವ ಬದಲು ರಾಜಕೀಯ ಕೆಸರೆರಚಾಟ ಮಾಡುತ್ತಿರುವುದು ದುರಂತವೇ ಸರಿ.
ಕೆಆರ್‌ಎಸ್ ಜಲಾಶಯದ ನೀರನ್ನು ನಂಬಿ ಮಂಡ್ಯ ಜಿಲ್ಲೆ ರೈತರು ಎರಡು ಬೆಳೆ ಬೆಳೆಯುತ್ತಿದ್ದಾರೆ. ಮೈಸೂರು, ಮಂಡ್ಯ, ರಾಮನಗರ ಹಾಗೂ ಬೆಂಗಳೂರು ನಗರಗಳಿಗೆ ಕುಡಿಯುವ ನೀರಿನ ಮೂಲವಾಗಿದೆ. ಕೆಆರ್‌ಎಸ್ ದೇಶ ಹಾಗೂ ರಾಜ್ಯದ ಆಸ್ತಿ. ಇದನ್ನೇ ನಂಬಿಕೊಂಡು ಕೋಟ್ಯಂತರ ಜನರು ಜೀವನ ನಡೆಸುತ್ತಿದ್ದಾರೆ. ಅಣೆಕಟ್ಟಿನಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂಬ ಒಂದೇ ಒಂದು ಹೇಳಿಕೆ ರೈತರು ಜೀವ ಕೈಯಲ್ಲಿ ಹಿಡಿದು ವ್ಯವಸಾಯ ಮಾಡಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಿದೆ. ಸಂಕಷ್ಟದ ಈ ದಿನಗಳಲ್ಲಿ ಜಲಾಶಯದ ಹಿತಕಾಯಬೇಕಾದ ನಾಯಕರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ದಿನಕ್ಕೊಂದು ಹೇಳಿಕೆ ನೀಡುತ್ತಾ ರಾಜಕೀಯ ರಾಡಿ ಮಾಡುತ್ತಿರುವುದು ಬೇಸರದ ಸಂಗತಿ. ರಾಜಕಾರಣ ಎತ್ತ ಸಾಗಿದೆ ಎಂಬುದಕ್ಕೆ ಕೈ ಗನ್ನಡಿ ಆಗಿದೆ.
2018ರ ಸೆಪ್ಟಂಬರ್ 25ರಂದು ಕೆಆರ್‌ಎಸ್ ಸುತ್ತಮುತ್ತ ಕೇಳಿ ಬಂದ ಭಾರೀ ಸ್ಫೋಟದಿಂದ ಆತಂಕ ಉಂಟಾಗಿತ್ತು. ಇದನ್ನು ಪರಿಶೀಲಿಸಿದಾಗ ಕೆಆರ್‌ಎಸ್ ಸಮೀಪವಿರುವ ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ ದಾಖಲಾಗಿತ್ತು. ಇದು ಗಣಿ ಸ್ಫೋಟದಿಂದಲೇ ಬಂದಿರಬಹುದು. ಈ ಪ್ರದೇಶದಲ್ಲಿ ಗಣಿಗಾರಿಕೆಯಿಂದ ಕೆಆರ್‌ಎಸ್ ಜಲಾಶಯಕ್ಕೆ ಅಪಾಯ ಸಂಭವಿಸಬಹುದು ಎಂದು ತಜ್ಞರು ಎಚ್ಚರಿಸಿದ್ದರು.
ಜಲಾಶಯದ ಸುತ್ತಮುತ್ತ ಗಣಿಗಾರಿಕೆಯಿಂದ ಬಿರುಕು ಕಾಣಿಸಿ ಕೊಂಡಿದೆ. ಇದನ್ನು ಗಂಭೀರವಾಗಿ ತೆಗೆದುಕೊಂಡು ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇ ಧಿಸಬೇಕು ಎಂದು ಸಂಸದೆ ಸುಮಲತಾ ಹೇಳಿಕೆ ನೀಡಿದ್ದರು. ಈ ಹೇಳಿಕೆಯೇ ಈಗ ರಾಜ ಕೀಯ ಕಿತ್ತಾಟಕ್ಕೆ ಕಾರಣವಾಗಿದೆ. ಇದಕ್ಕೂ ಮೊದಲು ಗಣಿಗಾರಿಕೆ ವಿರುದ್ಧ ಮಾತನಾಡಿದ್ದ ಸುಮಲತಾ ವಿರುದ್ಧ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಸೇರಿದಂತೆ ಜೆಡಿಎಸ್ ಮುಖಂಡರು ಕಿಡಿ ಕಾರಿದ್ದರು. ಈಗ ಇದರ ಜತೆಗೆ ಎಚ್. ಡಿ.ಕುಮಾರಸ್ವಾಮಿ ಹೇಳಿಕೆ ವಿವಾದ ಸೃಷ್ಟಿಸಿದೆ.
ಜಿಲ್ಲೆಯಲ್ಲಿ ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ. ಇದರಿಂದ ಜಲಾಶಯಕ್ಕೂ ತೊಂದರೆಯಾಗಬಹುದು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಸಂಸ್ಥೆ ವರದಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಪಾಂಡವ ಪುರದ ಬೇಬಿಬೆಟ್ಟ ಸೇರಿದಂತೆ ಶ್ರೀರಂಗಪಟ್ಟಣದ ಸುತ್ತಮುತ್ತ ನಡೆಯು ತ್ತಿರುವ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಜಿಲ್ಲೆಯ ಜನಪ್ರತಿನಿಧಿಗಳು ಪ್ರಯತ್ನಿಸಬೇಕಾಗಿದೆ.
ನೀರಿನ ಲಭ್ಯತೆ ಕ್ಷೀಣಿಸುತ್ತಿರುವುದು, ಮೇಕೆದಾಟು ಯೋಜನೆ ಹಾಗೂ ಜಿಲ್ಲೆಯ ವಿವಿಧ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಸರಕಾರ ಮುಂದಾದಾಗ ತಮಿಳುನಾಡು ಕ್ಯಾತೆ ತೆಗೆಯುತ್ತಲೇ ಬಂದಿದೆ. ನೀರು ಹಂಚಿಕೆಯಲ್ಲಿ ತಮಿಳುನಾಡು ಹಾಗೂ ಕರ್ನಾಟಕದ ನಡುವೆ ವಿವಾದ ಮುಂದುವರಿದಿದೆ. ಇಂಥ ಸಂದರ್ಭದಲ್ಲಿ ತಮಿಳುನಾಡು ರಾಜ್ಯದ ವಿರುದ್ಧ ಹೋರಾಟ ನಡೆಸಬೇಕಾದ ನಾಯಕರು ರಾಜ್ಯದಲ್ಲಿಯೇ ಕಿತ್ತಾಡಿದರೇ ಅನ್ಯರಿಗೆ ಲಾಭವಾಗುತ್ತದೆ ಎಂಬ ಎಚ್ಚರಿಕೆ ರಾಜಕೀಯ ಮುಖಂಡರಿಗೆ ಇರಬೇಕು.