Advertisement
ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರ ನಡುವೆ ನಿರ್ಮಿಸಲಾಗುವ ಮೆಟ್ರೋ ಮಾರ್ಗವನ್ನು ಮುಂದಿನ ದಿನಗಳಲ್ಲಿ ಹೆಬ್ಟಾಳದವರೆಗೆ ವಿಸ್ತರಿಸಲು ಸರ್ಕಾರ ಉದ್ದೇಶಿಸಿದೆ. ಈ ಸಂಬಂಧದ ಸಮಗ್ರ ಯೋಜನಾ ವರದಿ (ಡಿಪಿಆರ್)ಯನ್ನು ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಎಂಆರ್‌ಸಿಗೆ ಸೂಚನೆ ನೀಡಿದ್ದಾರೆ.
Related Articles
Advertisement
ವರ್ತುಲ ರಸ್ತೆಗೆ ಸಂಪರ್ಕಒಂದು ವೇಳೆ ಕೆ.ಆರ್. ಪುರ-ಹೆಬ್ಟಾಳ ನಡುವೆ ಮೆಟ್ರೋ ಸಂಪರ್ಕ ಸಾಧ್ಯವಾದರೆ, ನಗರದ ಬಹುತೇಕ ಹೊರವರ್ತುಲ ರಸ್ತೆಗಳಿಗೆ ಮೆಟ್ರೋ ಸಂಪರ್ಕ ಕಲ್ಪಿಸಿದಂತಾಗಲಿದೆ. ಆಗ, ಹೊರಗಡೆಯಿಂದ ಬೆಂಗಳೂರಿಗೆ ಬರುವವರು ವರ್ತುಲ ರಸ್ತೆಗಳಲ್ಲೇ ಇಳಿದು, ಮೆಟ್ರೋದಲ್ಲಿ ನಗರ ಪ್ರವೇಶಿಸಬಹುದು. ಉದಾಹರಣೆಗೆ ಮೈಸೂರು ರಸ್ತೆಯಿಂದ ನಗರಕ್ಕೆ ಬರಬೇಕಾದ ಜನ, ನಾಯಂಡಹಳ್ಳಿ ಬಳಿ ಇರುವ ಮೆಟ್ರೋ ನಿಲ್ದಾಣದಲ್ಲಿ ವಾಹನ ನಿಲುಗಡೆ ಮಾಡಿ ಅಥವಾ ಬಸ್‌ನಲ್ಲಿ ಇಳಿದು ರೈಲಿನಲ್ಲಿ ಬರುತ್ತಿದ್ದಾರೆ. ಈಗಾಗಲೇ 4,200 ಕೋಟಿ ರೂ. ವೆಚ್ಚದಲ್ಲಿ 18 ಕಿ.ಮೀ. ಉದ್ದದ ಮೆಟ್ರೋ ಮಾರ್ಗವನ್ನು ಸಿಲ್ಕ್ಬೋರ್ಡ್- ಕೆ.ಆರ್. ಪುರ ನಡುವೆ ನಿರ್ಮಿಸಲು ನಿರ್ಧರಿಸಲಾಗಿದೆ. ಇಲ್ಲಿಂದ ಮಾನ್ಯತಾ ಟೆಕ್‌ಪಾರ್ಕ್, ನಾಗವಾರ ಮೂಲಕ ಹೆಬ್ಟಾಳಕ್ಕೆ ವಿಸ್ತರಿಸಲು ಉದ್ದೇಶಿಸಲಾಗಿದೆ. ಇದರ ಉದ್ದ ಸುಮಾರು 5-7 ಕಿ.ಮೀ. ಆಗಲಿದೆ. ಈ ಮಧ್ಯೆ ನಾಗವಾರದಿಂದ ಥಣಿಸಂದ್ರ ಮೂಲಕ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸಲಾಗುತ್ತಿದೆ. ಹಾಗಾಗಿ, ಅಲ್ಲೊಂದು ಇಂಟರ್‌ಚೇಂಜ್ ನಿರ್ಮಿಸುವ ಬಗ್ಗೆಯೂ ಆಲೋಚನೆ ಇದೆ. ಆದರೆ, ಇದು ಇನ್ನೂ ಚಿಂತನೆ ಹಂತದಲ್ಲಿದೆ ಅಷ್ಟೇ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲೆಲ್ಲಿದೆ ವರ್ತುಲ ರಸ್ತೆ?
ನಗರದಲ್ಲಿ ಒಟ್ಟಾರೆ ಸುಮಾರು 50 ಕಿ.ಮೀ. ವರ್ತುಲ ರಸ್ತೆ ಇದೆ. ಇದು ಭಾಗಶಃ ನಗರವನ್ನು ಸುತ್ತುವರಿದಿದೆ. ಕೆ.ಆರ್. ಪುರ-ಹೆಣ್ಣೂರು-ಹೆಬ್ಟಾಳ-ಬಿಎಚ್‌ಇಎಲ್-ಜಾಲಹಳ್ಳಿ-ಗೊರಗುಂಟೆ ಪಾಳ್ಯ ಹಾಗೂ ಕೆಂಗೇರಿ-ಸಾರಕ್ಕಿ-ಕದಿರೇನಹಳ್ಳಿ ಕ್ರಾಸ್-ಬನಶಂಕರಿ-ಜೆ.ಪಿ. ನಗರ-ಸೆಂಟ್ರಲ್ ಸಿಲ್ಕ್ ಬೋರ್ಡ್-ಕೆ.ಆರ್. ಪುರ ನಡುವೆ ವರ್ತುಲ ರಸ್ತೆ ಇದೆ. ಈ ಪೈಕಿ ಈಗಾಗಲೇ ಮೈಸೂರು ರಸ್ತೆ (ಕೆಂಗೇರಿ ಮಾರ್ಗ), ಗೊರಗುಂಟೆ ಪಾಳ್ಯ, ಜೆ.ಪಿ. ನಗರದಲ್ಲಿ ಮೆಟ್ರೋ ಸಂಪರ್ಕ ಕಲ್ಪಿಸಲಾಗಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್, ಕೆ.ಆರ್.ಪುರ ನಡುವೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಈಗ ಹೆಬ್ಟಾಳಕ್ಕೆ ಅದನ್ನು ವಿಸ್ತರಿಸಲು ಉದ್ದೇಶಿಸಲಾಗಿದೆ. ಆಗಸ್ಟ್ ಅಂತ್ಯದೊಳಗೆ ಟೆಂಡರ್?
ಸಿಲ್ಕ್ ಬೋರ್ಡ್- ಕೆ.ಆರ್. ಪುರ ನಡುವೆ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಿಂಗಳಾಂತ್ಯದ ಒಳಗೆ ಟೆಂಡರ್ ಕರೆಯುವಂತೆ ಮುಖ್ಯಮಂತ್ರಿಗಳು ಬಿಎಂಆರ್‌ಸಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಸೆಪ್ಟೆಂಬರ್ ಅಂತ್ಯದೊಳಗೆ ಉದ್ದೇಶಿತ ಯೋಜನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಟೆಂಡರ್ ಕರೆಯಲು ಬಿಎಂಆರ್‌ಸಿ ಸಿದ್ಧತೆ ನಡೆಸಿದೆ. ಆದರೆ, ಟೆಂಡರ್ ಪ್ರಕ್ರಿಯೆಗಳನ್ನು ಚುರುಕುಗೊಳಿಸಿ ಆಗಸ್ಟ್ ಅಂತ್ಯದೊಳಗೇ ಟೆಂಡರ್ ಕರೆಯಲು ಮುಖ್ಯಮಂತ್ರಿ ನಿರ್ದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೆಟ್ರೋ ನಿಲ್ದಾಣ ದತ್ತು
“ನಮ್ಮ ಮೆಟ್ರೋ’ ನಿಲ್ದಾಣಗಳ ನಿರ್ಮಾಣ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಇನ್ಫೋಸಿಸ್, ಎಂಬಸ್ಸಿ ಗ್ರೂಪ್, ಬಯೋಕಾನ್ ಕಂಪೆನಿಗಳು ನಿಲ್ದಾಣಗಳನ್ನು ದತ್ತು ಪಡೆಯಲು ಮುಂದೆಬಂದಿವೆ. ಇದಲ್ಲದೆ, ಇನ್ನೂ ಹಲವು ಕಂಪೆನಿಗಳು ಈ ನಿಟ್ಟಿನಲ್ಲಿ ಆಸಕ್ತಿ ತೋರಿವೆ. ಈಗಾಗಲೇ ಕೆಲವು ಸಂಸ್ಥೆಗಳು ಒಡಂಬಡಿಕೆ ಮಾಡಿಕೊಂಡಿವೆ. ಇನ್ನು ಕೆಲವು ಮಾತುಕತೆ ಹಂತದಲ್ಲಿವೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. * ವಿಜಯಕುಮಾರ್ ಚಂದರಗಿ