Advertisement

ರಾಜಕಾರಣದ ಇತಿಹಾಸಕ್ಕೆ ಸದಾ ಸಾಕ್ಷಿಯಾದ “ಕೃತ್ತಿಕಾ’

06:00 AM Aug 29, 2018 | |

ಬೆಂಗಳೂರು: ಈ ಮನೆ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ಎಲ್ಲ ಮಜಲುಗಳನ್ನು ನೋಡಿ ತನ್ನೊಡಲೊಳಗಿಟ್ಟುಕೊಂಡು ಮೌನವಾಗಿ ತನ್ನೊಡೆಯನ ಒಡತಿಯ ಜೊತೆಗೆ ಏಕಾಂಗಿಯಾಗಿ ಕಾಲ ಕಳೆಯುತ್ತಿದೆ. ರಾಜ್ಯ ಹಾಗೂ ರಾಷ್ಟ್ರದಲ್ಲಿ ಉದಯವಾದ ಅನೇಕ ರಾಜಕೀಯ ಪಕ್ಷಗಳ ಹುಟ್ಟು, ಸಾವು, ಇಬ್ಭಾಗ, ನಾಯಕರ ಮುನಿಸು, ಅಪ್ಪುಗೆ, ಒಪ್ಪಿಗೆ ಎಲ್ಲವನ್ನೂ ನೋಡುತ್ತ ಅರ್ಧ ಶತಮಾನ ಕಳೆದಿದೆ ಈ ಮನೆ. ಅದೇ “ಕೃತ್ತಿಕಾ- ನಂಬರ್‌ 229′. 

Advertisement

70ರ ದಶಕದಿಂದ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ಮೌಲ್ಯಯುತ ರಾಜಕಾರಣ ಮಾಡಿ ಜನಮಾನಸದಲ್ಲಿ ಉಳಿದುಕೊಂಡಿರುವ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಅಧಿಕೃತ ನಿವಾಸವಿದು. ಸದಾಶಿವ ನಗರದಲ್ಲಿರುವ ಹೆಗಡೆಯವರ ಈ
ಮನೆಯಲ್ಲಿ ಅವರ ಧರ್ಮಪತ್ನಿ ಶಕುಂತಲಾ ಹೆಗಡೆ ಮಾತ್ರ ಇದ್ದಾರೆ. ಇಂದು ರಾಮಕೃಷ್ಣ ಹೆಗಡೆ ಅವರ 92ನೇ ಜನ್ಮ ದಿನಾಚರಣೆ. 1967ರಲ್ಲಿ ರಾಜಿ ಮಹಮದ್‌ ಎನ್ನುವ ಆರ್ಕಿಟೆಕ್ಟ್ ಈ ಮನೆ ವಿನ್ಯಾಸ ನೀಡಿ, ಹೆಗಡೆಯವರು ಹತ್ತಾರು ಬಾರಿ ಬದಲಾ ಯಿಸಿ ಕೊನೆಗೂ 1969ರಲ್ಲಿ ಗೃಹ ಪ್ರವೇಶ ಮಾಡಿದ್ದರು. “ಕೃತ್ತಿಕಾ’ ರಾಮಕೃಷ್ಣ ಹೆಗಡೆಯವರ ಜನ್ಮ ನಕ್ಷತ್ರ. ಅದನ್ನು ಬಿಟ್ಟರೆ ಈ ಮನೆಗೆ ಯಾವುದೇ ಬೋರ್ಡ್‌ ಕೂಡ ಹಾಕಿಲ್ಲ. ಹೆಗಡೆಯವರು ಅಧಿಕಾರದಲ್ಲಿ ದ್ದಾಗಲೂ ಮನೆಗೆ ತಮ್ಮ ಹೆಸರಿನ ಬೋರ್ಡ್‌ ಹಾಕಿರಲಿಲ್ಲ. 1969ರಲ್ಲಿ ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್‌ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದರು. ಆಗ ವೀರೇಂದ್ರ ಪಾಟೀಲ್‌ ಮತ್ತು ರಾಮಕೃಷ್ಣ ಹೆಗಡೆಯವರನ್ನು ಸಮಕಾಲಿನ ರಾಜಕಾರಣಿಗಳು ಲವ-ಕುಶ ಎಂದು
ಕರೆಯುತ್ತಿದ್ದರು.

ಅದೇ ವರ್ಷ ರಾಷ್ಟ್ರಪತಿ ಚುನಾವಣೆ ನಡೆದಾಗ, ಆಗಿನ ಎಐಸಿಸಿ ಅಧ್ಯಕ್ಷರಾಗಿದ್ದ ಎಸ್‌.ನಿಜಲಿಂಗಪ್ಪನವರು ಬೆಂಗಳೂರಿನಲ್ಲಿ ನಡೆದ ಎಐಸಿಸಿ ಅಧಿವೇಶನದಲ್ಲಿ ನೀಲಂ ಸಂಜೀವ್‌ ರೆಡ್ಡಿ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಿಸಿದರು. ಆದರೆ, ಅವರ ವಿರುದಟಛಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ವಿ.ವಿ.ಗಿರಿಯನ್ನು ಬಂಡಾಯ ಅಭ್ಯರ್ಥಿಯನ್ನಾಗಿ ಮಾಡಿ, ಆತ್ಮ ಸಾಕ್ಷಿ ಮತ ಹಾಕಿಸಿ ಅವರನ್ನು ಗೆಲ್ಲಿಸಿಕೊಂಡರು. ಅದು ಕಾಂಗ್ರೆಸ್‌ ಇಬ್ಭಾಗಕ್ಕೆ ಕಾರಣವಾಯಿತು. ಇದಕ್ಕೆ ಸಂಬಂಧಿಸಿ ಹೆಗಡೆ ಮತ್ತು ನಿಜಲಿಂಗಪ್ಪ ನಡೆಸಿದ ಮಾತುಕತೆಗಳಿಗೂ “ಕೃತ್ತಿಕಾ’ ಸಾಕ್ಷಿಯಾಯಿತು. ನಿಜಲಿಂಗಪ್ಪ ನೇತೃತ್ವದಲ್ಲಿ ಆರಂಭವಾದ ಸಂಸ್ಥಾ ಕಾಂಗ್ರೆಸ್‌ ಉದಯಕ್ಕೆ ಇದೇ ಮನೆ ಸಾಕ್ಷಿಯಾಗಿದೆ. 1977ರಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗ ಸಂಘಟನೆಗಳು, ರಾಜಕೀಯ ಪಕ್ಷಗಳ ನಾಯಕರೂ ಇದೇ ಮನೆಯಲ್ಲಿಯೇ ಸೇರಿಕೊಂಡು ಕಾರ್ಯತಂತ್ರ ರೂಪಿಸಿದ್ದರು. ಅದೇ ಸಂದರ್ಭದಲ್ಲಿ ಕಾಂಗ್ರೆಸ್‌ನಿಂದ ಹೊರ ಬಂದ ಹೆಗಡೆಯವರು ಜನತಾ ಪಕ್ಷ ಸೇರಿಕೊಂಡರು. ಜನಸಂಘ, ಸಮಾಜವಾದಿ ಲೋಕದಳ, ಸ್ವತಂತ್ರ ಪಕ್ಷ ಎಲ್ಲ ಹೊಸ ಪಕ್ಷಗಳು ಒಗ್ಗೂಡಲು “ಕೃತ್ತಿಕಾ 229 ಸಾಕ್ಷಿಯಾಗಿತ್ತು! 1983ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜನತಾ ಪಾರ್ಟಿ ನೇತೃತ್ವದಲ್ಲಿ ರಾಮಕೃಷ್ಣ ಹೆಗಡೆಯವರು ಕ್ರಾಂತಿರಂಗ, ಬಿಜೆಪಿಯ ಬಾಹ್ಯ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗುತ್ತಾರೆ.

1984ರ ಲೋಕಸಭೆ ಚುನಾವಣೆಯಲ್ಲಿ ಜನತಾ ಪಾರ್ಟಿ ಸೋಲುತ್ತದೆ. ಹೀಗಾಗಿ ಹೆಗಡೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. 1985ರಲ್ಲಿ ವಿಧಾನಸಭೆ ಚುನಾವಣೆ ಎದುರಿಸಿ ಸ್ಪಷ್ಟ ಬಹುಮತದೊಂದಿಗೆ ಜಯಗಳಿಸಿ ಮತ್ತೆ ಸಿಎಂ ಆಗುತ್ತಾರೆ. ಈ ಎಲ್ಲಾ ಚಟುವಟಿಕೆಗಳಿಗೂ ಇದು ಚರ್ಚಾ ಸ್ಥಳವಾಗಿತ್ತು. ಅಧಿಕಾರ ಇರಲಿ, ಇಲ್ಲದಿರಲಿ ಇಲ್ಲೇ ವಾಸ ಬಾಟಲಿಂಗ್ ಹಗರಣ ಹಾಗೂ ರೇವ್‌ಜೀತ್‌ ಹಗರಣ ಕೇಳಿ ಬಂದಿದ್ದರಿಂದ ನೈತಿಕ ಹೊಣೆ ಹೊತ್ತು ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಎಸ್‌. ಆರ್‌.ಬೊಮ್ಮಾಯಿ ಒಂದು ವರ್ಷದ ಮಟ್ಟಿಗೆ
ಮುಖ್ಯಮಂತ್ರಿಯಾದರು. ಮುಖ್ಯಮಂತ್ರಿಯಾಗಿದ್ದಾಗಲೂ  ಇದೇ ನಿವಾಸವನ್ನು ರಾಜಕೀಯ ಚಟುವಟಿಕೆಗಳಿಗೆ ಕೇಂದ್ರವನ್ನಾಗಿ ಮಾಡಿಕೊಂಡಿದ್ದ ಹೆಗಡೆ ಅಧಿಕಾರ ಇಲ್ಲದಿರುವಾಗಲೂ ಇದೇ ಮನೆಯಲ್ಲಿಯೇ ವಾಸ ಮಾಡಿದರು. 1996ರಲ್ಲಿ ದೇವೇಗೌಡರು ಪ್ರಧಾನಿಯಾದ ನಂತರ ಜನತಾ ದಳದಿಂದ ಹೆಗಡೆ ಅವರನ್ನು ಉಚ್ಚಾಟಿಸಲಾಗುತ್ತದೆ. ನಂತರ ಹೆಗಡೆ ಸ್ಥಾಪಿಸಿದ ಲೋಕಶಕ್ತಿ ಉದಯಕ್ಕೂ ಈ ನಿವಾಸ ಸಾಕ್ಷಿಯಾಗಿತ್ತು.

ಶಂಕರ ಪಾಗೋಜಿ

Advertisement
Advertisement

Udayavani is now on Telegram. Click here to join our channel and stay updated with the latest news.

Next