Advertisement
ತಾಸುಕಾಲ ಸಾಲುಗಟ್ಟಿ ಸಾಗಿದ ಮುದ್ದುಕೃಷ್ಣರ ಕಲರವ ನೋಡಗರ ಮನ ಮುದಗೊಳಿಸಿತ್ತು. ಜಯಘೋಷ, ಪುಷ್ಪಾರ್ಚನೆ, ಬ್ಯಾಂಡ್‌ವಾದನ ಹೀಗೆ ಮುದ್ದುಕೃಷ್ಣ ಸ್ಮರಣೆ ಅಷ್ಟಮಿಯ ಸಂಭ್ರಮಕ್ಕೆ ಮೆರಗು ತುಂಬಿತ್ತು.ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಪುತ್ತೂರಿನಲ್ಲಿ ಸೋಮವಾರ ಏರ್ಪಡಿಸಿದ 18ನೇ ವರ್ಷದ ಶ್ರೀಕೃಷ್ಣಲೋಕ ಮೆರವಣಿಗೆ ಸಾವಿರಕ್ಕೂ ಅಧಿಕ ಮಕ್ಕಳು ಕೃಷ್ಣ- ಯಶೋದೆಯ ವೇಷ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ವಿವೇಕಾನಂದ ಶಿಶು ಮಂದಿರದ ಬಳಿಯಿಂದ ಆರಂಭಗೊಂಡು, ಕೋರ್ಟ್ ರಸ್ತೆ, ಮುಖ್ಯರಸ್ತೆಯಲ್ಲಿ ಸಾಗಿ, ನಟರಾಜ ವೇದಿಕೆಯಲ್ಲಿ ಸಮಾಪನಗೊಂಡಿತು.
Related Articles
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆದ “ಶ್ರೀಕೃಷ್ಣ ಲೋಕ’ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೊರನಾಡು ಆದಿಶಕ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮಕರ್ತ ಡಾ| ಜಿ. ಭೀಮೇಶ್ವರ ಜೋಶಿ ಮಾತನಾಡಿ, ಪ್ರತಿಯೊಂದು ಮಗುವಿನಲ್ಲೂ ಕೃಷ್ಣನ ವ್ಯಕ್ತಿತ್ವ ಅರಳಿ, ಪ್ರತಿ ಮಗುವೂ ಕೃಷ್ಣನೇ ಆಗಿ ಮೂಡಿ ಬರಲಿ ಎಂದರು.
Advertisement
ಮಾತೃದೇವೋ ಭವ, ಪಿತೃದೇವೋ ಭವ, ಆಚಾರ್ಯ ದೇವೋ ಭವ ಎಂಬ ನಮ್ಮ ಪ್ರಾಚೀನ ಉಕ್ತಿ ಇಂದಿನ ಕಾಲಘಟ್ಟದಲ್ಲಿ ಅದಕ್ಕಿಂತಲೂ ಸ್ವಲ್ಪ ಮುಂದೆ ಹೋಗಿ ಸಮಾಜ ದೇವೋಭವ ಮತ್ತು ರಾಷ್ಟ್ರದೇವೋಭವ ಅನ್ನುವುದು ಸಾಕಾರವಾಗಬೇಕು ಎಂದು ನುಡಿದರು.
ಇಸ್ಕಾನ್ ಸಂಸ್ಥೆಯ ಹಿರಿಯ ಉಪದೇಶಕರಾದ ಶಚಿಪುತ್ರದಾಸ್ ಮಾತನಾಡಿ, ಕೃಷ್ಣ ವೇಷ ಹಾಕುವುದು ಕೇವಲ ಮನೋರಂಜನೆಗೆ ಎಂಬ ಭಾವನೆ ನಮ್ಮಲ್ಲಿ ಇರಬಾರದು. ಭಗವಂತನ ಜನ್ಮದ ರಹಸ್ಯವನ್ನು ಅರ್ಥ ಮಾಡಿಕೊಳ್ಳಲು ನಮಗೆ ಸಾಧ್ಯವಾದರೆ ಭವಸಾಗರ ದಾಟಬಹುದು ಎಂದು ಸ್ವತಃ ಶ್ರೀಕೃಷ್ಣನೇ ಗೀತೆಯಲ್ಲಿ ಹೇಳಿದ್ದಾನೆ ಎಂದರು.
ವಿವೇಕಾನಂದ ಶಿಶು ಮಂದಿರದ ಆಡಳಿತ ಮಂಡಳಿ ಅಧ್ಯಕ್ಷ ರವಿನಾರಾಯಣ ಎಂ., ಕಾರ್ಯದರ್ಶಿ ಅಶೋಕ್ ಕುಂಬ್ಳೆ, ಸಮಿತಿ ಅಧ್ಯಕ್ಷ ಡಾ| ಕೃಷ್ಣ ಪ್ರಸನ್ನ, ಪ್ರಧಾನ ಕಾರ್ಯದರ್ಶಿ ಮಚ್ಚಿಮಲೆ ವಿರೂಪಾಕ್ಷ ಭಟ್ ಉಪಸ್ಥಿತರಿದ್ದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ಡಾ| ಸುಧಾ ಶ್ರೀಪತಿ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಹಿರಿಯ ವಿದ್ಯಾರ್ಥಿನಿ ಆಶ್ರಯ ವೈಯಕ್ತಿಕ ಗೀತೆ ಹಾಡಿದರು. ವಿರೂಪಾಕ್ಷ ಭಟ್ ವಂದಿಸಿದರು. ಉಷಾ ಮುರಳೀಧರ್ ಕಾರ್ಯಕ್ರಮ ನಿರ್ವಹಿಸಿದರು. ಹರಿಣಿ ಪುತ್ತೂರಾಯ, ವಿದ್ಯಾಗೌರಿ, ಗೌರಿ ಬನ್ನೂರು ಮೊದಲಾದವರು ಸಹಕರಿಸಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪ್ರಭಾಕರ ಭಟ್ ಕಲ್ಲಡ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಅಚ್ಯುತ ನಾಯಕ್, ಆರೆಸ್ಸೆಸ್ ಮುಖಂಡ ಬಿರ್ಮಣ್ಣ ಗೌಡ, ಪ್ರಮುಖರಾದ ರವೀಂದ್ರ ಪಿ., ಸಂತೋಷ್ ಕುಮಾರ್ ಉಪಸ್ಥಿತರಿದ್ದರು. ಸಭಾ ಕಾರ್ಯುಕ್ರಮದ ಬಳಿಕ ವಿವೇಕಾನಂದ ಕನ್ನಡ ಮಾಧ್ಯಮ ಮತ್ತು ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಶೋಭಿತಾ ಸತೀಶ್ ಅವರ ಮಾರ್ಗದರ್ಶನದಲ್ಲಿ ಭಕ್ತಿಗಾನ ನಡೆಯಿತು. ಪ್ರೇರಣೆಯಾಗಲಿ
ನಮ್ಮ ಜನ್ಮದ ಸಾರ್ಥಕ್ಯಕ್ಕೆ ಕೃಷ್ಣ ಜನ್ಮಾಷ್ಟಮಿ ಪೂರಕ. ತೊಟ್ಟಿಲು ತೂಗುವ ವ್ಯವಸ್ಥೆಯೇ ಬುಡಮೇಲಾಗುತ್ತಿರುವ ಇಂದಿನ ದಿನಗಳಲ್ಲಿ ಕೃಷ್ಣನ ಮೇಲಿನ ಪ್ರೀತಿ ನಮ್ಮ ಮಕ್ಕಳ ಮೇಲೂ ಆವರಿಸಿ ಉತ್ತಮ ಪ್ರಜೆಗಳನ್ನಾಗಿ ಅವರನ್ನು ರೂಪಿಸುವಲ್ಲಿ ಪ್ರೇರಣೆಯಾಗಲಿ. ಮಕ್ಕಳಿಗೆ ಆಸ್ತಿ ಮಾಡಿಡುವ ಬದಲು ಮಕ್ಕಳನ್ನೇ ಆಸ್ತಿಯಾಗಿ ಬೆಳೆಸುವ ವ್ಯವಸ್ಥೆಯಾಗಬೇಕು ಎಂದು ಹೊರನಾಡು ಆದಿಶಕ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮಕರ್ತ ಡಾ| ಜಿ. ಭೀಮೇಶ್ವರ ಜೋಶಿ ಅವರು ಹೇಳಿದರು.