Advertisement

ಕೃಷ್ಣ ನಿರ್ಗಮನದಿಂದ ಯಾರಿಗೆ ಲಾಭ?

03:45 AM Jan 30, 2017 | Team Udayavani |

ಬೆಂಗಳೂರು: ಎಸ್‌.ಎಂ.ಕೃಷ್ಣ ಅವರು ಕಾಂಗ್ರೆಸ್‌ ಪಕ್ಷದಿಂದ ಹೊರನಡೆದ ಬೆನ್ನಲ್ಲೇ ಭವಿಷ್ಯದಲ್ಲಿ ಅವರ ನಡೆಯಿಂದ ಯಾವ ಪಕ್ಷಕ್ಕೆ ಲಾಭವಾಗುತ್ತದೆ ಮತ್ತು ಯಾರಿಗೆ ನಷ್ಟವಾಗುತ್ತದೆ ಎಂಬ ರಾಜಕೀಯ ಲೆಕ್ಕಾಚಾರ ಆರಂಭವಾಗಿದೆ.

Advertisement

ಹಿರಿಯ ರಾಜಕಾರಣಿಯಾಗಿರುವ ಎಸ್‌.ಎಂ.ಕೃಷ್ಣ ಪ್ರಭಲ ಒಕ್ಕಲಿಗ ಸಮುದಾಯದ ಮುಖಂಡರೂ ಆಗಿರುವುದರಿಂದ ಸಹಜವಾಗಿಯೇ ಈ ಸಮುದಾಯದ ರಾಜಕಾರಣಿಗಳಲ್ಲಿ ಆತಂಕ ಶುರುವಾಗಿದೆ.

ಕೃಷ್ಣ ಅವರ ರಾಜೀನಾಮೆಯಿಂದ ಕಾಂಗ್ರೆಸ್‌ಗೆ ನಷ್ಟವಾಗಲಿದೆ ಎಂಬುದು ಸತ್ಯ. ಆದರೆ, ಅವರು ತಮ್ಮ ಮುಂದಿನ ನಡೆಯನ್ನು ಬಹಿರಂಗಗೊಳಿಸದ ಕಾರಣ ಮತ್ತು ರಾಜಕೀಯವಾಗಿ ನಿವೃತ್ತಿಯಾಗುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಕಾರಣ, ರಾಜಕೀಯ ಪಕ್ಷಗಳಲ್ಲಿ ಪ್ರಶ್ನೆಗಳು ಮೂಡಿವೆ.

ಎಸ್‌.ಎಂ. ಕೃಷ್ಣ ಅವರು ಮುಂದಿನ ದಿನಗಳಲ್ಲಿ ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದೆ ತಟಸ್ಥವಾಗಿ ಉಳಿದುಕೊಂಡರೆ, ಕಾಂಗ್ರೆಸ್‌ಗೆ ಅದರಿಂದ ಯಾವುದೇ ನಷ್ಟವಾಗುವುದಿಲ್ಲ ಎಂಬ ವಾದವೂ ಕೇಳಿಬರುತ್ತಿದೆ.
ಆದರೆ, ಅವರು ಬಿಜೆಪಿ ಸೇರದಿದ್ದರೂ ಆ ಪಕ್ಷದ ಜತೆ ಪರೋಕ್ಷವಾಗಿ ಗುರುತಿಸಿಕೊಂಡರೆ ಆಗ ಹಳೆ ಮೈಸೂರು ಭಾಗದಲ್ಲಿ ಅಸ್ತಿತ್ವಕ್ಕಾಗಿ ಪರದಾಡುತ್ತಿರುವ ಬಿಜೆಪಿ ಸ್ವಲ್ಪ ಮಟ್ಟಿನ ಉಸಿರಾಟ ಮಾಡಲು ಅನುಕೂಲವಾಗಬಹುದು. ಆದರೆ, ಕೃಷ್ಣ ಒಬ್ಬರೇ ಹೋದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಅವರ ಜೊತೆಗೆ ಕಾಂಗ್ರೆಸ್‌ನಲ್ಲಿ ಅಸಮಾಧಾನಗೊಂಡಿರುವ ಚುನಾವಣೆಯಲ್ಲಿ ಸ್ಪರ್ಧಿಸುವ ಅಂಬರೀಶ್‌ ಅಂತವರೂ ಬಿಜೆಪಿ ಕಡೆಗೆ ಮುಖ ಮಾಡಿದರೆ ಅದು ಒಕ್ಕಲಿಗ ಸಮುದಾಯಕ್ಕೆ ಕಾಂಗ್ರೆಸ್‌ನಲ್ಲಿ ಅನ್ಯಾಯವಾಗುತ್ತಿದೆ ಎಂಬ ವಾತಾವರಣ ನಿರ್ಮಾಣವಾಗಲು ಕಾರಣವಾಗಬಹುದು. ಅದು ಬಿಜೆಪಿಗೆ ಲಾಭವಾಗಬಹುದು ಎನ್ನುವ ಲೆಕ್ಕಾಚಾರ ನಡೆಯುತ್ತಿದೆ.

ಸದ್ಯಕ್ಕಂತೂ ಕೃಷ್ಣ ಅವರು ಕಾಂಗ್ರೆಸ್‌ನಿಂದ ದೂರವಾಗಿರುವುದು ಜೆಡಿಎಸ್‌ಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿಗೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಒಕ್ಕಲಿಗ ಸಮುದಾಯದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮತ್ತು ಎಸ್‌.ಎಂ.ಕೃಷ್ಣ ಪ್ರಮುಖ ನಾಯಕರು. ಹಳೇ ಮೈಸೂರು ಭಾಗದಲ್ಲಿ ಇವರ ನಾಯಕತ್ವವೇ ಒಕ್ಕಲಿಗರಿಗೆ ಪ್ರಮುಖ. ಎಸ್‌.ಎಂ.ಕೃಷ್ಣ ತಟಸ್ಥರಾದರೆ ಒಕ್ಕಲಿಗರು ದೇವೇಗೌಡರನ್ನು ಅವಲಂಬಿಸಬಹುದು. ಇದು ಸಹಜವಾಗಿಯೇ ಜೆಡಿಎಸ್‌ಗೆ ಹೆಚ್ಚು ಲಾಭ ತಂದುಕೊಡುತ್ತದೆ ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ.

Advertisement

ಇನ್ನು ಕೃಷ್ಣ ಬಿಜೆಪಿಗೆ ಬಂದರೂ ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಮತಗಳ ಸಂಖ್ಯೆ ಹೆಚ್ಚಾಗಬಹುದೇ ಹೊರತು ಗೆಲ್ಲುವಷ್ಟು ಸುಧಾರಣೆ ಕಷ್ಟಸಾಧ್ಯ. ಆದರೆ, ಆ ಭಾಗದಲ್ಲಿ ಕಾಂಗ್ರೆಸ್‌ನ ಹಿಡಿತ ತಪ್ಪಿಸಲು ಅನುಕೂಲವಾಗುತ್ತದೆ. ಆದರೆ, ಬೆಂಗಳೂರು ಸುತ್ತಮುತ್ತ ಬಿಜೆಪಿಯ ಶಕ್ತಿ ಹೆಚ್ಚಬಹುದು ಎಂಬ ಲೆಕ್ಕಾಚಾರವೂ ಇದೆ. ಈ ಕಾರಣಕ್ಕಾಗಿಯೇ ಎಸ್‌.ಎಂ.ಕೃಷ್ಣ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಕೂಡಲೇ, ಅವರು ಬಿಜೆಪಿಗೆ ಬಂದರೆ ಸ್ವಾಗತ ಎಂದು ಬಿಜೆಪಿ ನಾಯಕರು ಹೇಳಲಾರಂಭಿಸಿದ್ದಾರೆ.

ಒಟ್ಟಿನಲ್ಲಿ ಕೃಷ್ಣ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಬಳಿಕ ರಾಜಕೀಯ ಲೆಕ್ಕಾಚಾರಗಳು ಜೋರಾಗಿ ನಡೆಯುತ್ತಿದ್ದು, ಅವರು ತಮ್ಮ ಮುಂದಿನ ರಾಜಕೀಯ ನಡೆಯನ್ನು ತೀರ್ಮಾನಿಸುವವರೆಗೂ ಮುಂದುವರಿಯುವುದು ಖಚಿತ. ಆದರೆ, ಇದರ ಸತ್ಯಾಸತ್ಯತೆ ತಿಳಿಯಬೇಕಾದರೆ ಅವರು ತಮ್ಮ ಮುಂದಿನ ರಾಜಕೀಯ ನಿರ್ಧಾರ ಪ್ರಕಟಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next