Advertisement

ಪರ್ಯಾಯೋತ್ಸವ: ಕಂಗೊಳಿಸುತ್ತಿರುವ ಉಡುಪಿ

02:16 AM Jan 16, 2022 | Team Udayavani |

ಉಡುಪಿ: ಕೃಷ್ಣಾಪುರ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯೋತ್ಸವಕ್ಕೆ ಇಡೀ ನಗರ ಸಂಭ್ರಮ ಸಡಗರದಿಂದ ಸಜ್ಜಾಗುತ್ತಿದ್ದು, ಬಗೆ ಬಗೆಯ ಅಲಂಕಾರದಿಂದ ಉಡುಪಿ ಕಂಗೊಳಿಸುತ್ತಿದೆ.

Advertisement

ಬರೋಬ್ಬರಿ 10 ಸಾವಿರ ಮೀಟರ್‌ ಕೇಸರಿ ಬಂಟಿಂಗ್ಸ್‌ ಮತ್ತು 300 ಕೇಸರಿ ಧ್ವಜಗಳಿಂದ ನಗರವನ್ನು ಶೃಂಗರಿಸಲಾಗಿದೆ. ಬಂಟಿಂಗ್ಸ್‌ ಮತ್ತು ವಿದ್ಯುತ್‌ ಅಲಂಕಾರದಿಂದ ನಗರದ ಸೌಂದರ್ಯ ಹೆಚ್ಚಿದೆ.

ಕಿನ್ನಿಮೂಲ್ಕಿಯಿಂದ ಜೋಡುಕಟ್ಟೆ ಪರ್ಯಾಯ ಮೆರವಣಿಗೆ ರಸ್ತೆ ಕೋರ್ಟ್‌ ರೋಡ್‌, ಡಯಾನ ವೃತ್ತ, ತೆಂಕಪೇಟೆ ಐಡಿಯಲ್‌ ಸರ್ಕಲ್‌ ಮೂಲಕ ರಥಬೀದಿವರೆಗೆ, ರಥಬೀದಿ ಸುತ್ತಲೂ, ಕರಾವಳಿ ಜಂಕ್ಷನ್‌ನಿಂದ ಕುಂಜಿಬೆಟ್ಟು ಓಶಿಯನ್‌ ಪರ್ಲ್ ಹೊಟೇಲ್‌ವರೆಗೆ ಬಂಟಿಂಗ್ಸ್‌ ಮತ್ತು ಕೇಸರಿ ಧ್ವಜ ಅಳವಡಿಸಲಾಗಿದ್ದು, ಎಲ್ಲರನ್ನು ಆಕರ್ಷಿಸುತ್ತಿದೆ.

ಹಿಂದೂ ಜಾಗರಣ ವೇದಿಕೆಯ ಮಹೇಶ್‌ ಬೈಲೂರು, ಸತೀಶ್‌ ಕುಮಾರ್‌ ನೇತೃತ್ವದ 20 ಕಾರ್ಯಕರ್ತರು ಕಳೆದ ಮೂರು ದಿನಗಳಿಂದ ರಾತ್ರಿ ವೇಳೆ ಬಂಟಿಂಗ್ಸ್‌ ಅಲಂಕಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ:ಪರ್ಯಾಯೋತ್ಸವಕ್ಕೆ: ದಾಖಲೆ ಹೊರೆಕಾಣಿಕೆ ಸಂಗ್ರಹ

13 ಕಡೆಗಳಲ್ಲಿ ಸ್ವಾಗತ ಕಮಾನು

ಬಂಟಿಂಗ್ಸ್‌ ನಡುವೆ 300 ಕೇಸರಿ ಧ್ವಜಗಳನ್ನು ಅಳವಡಿಸಲಾಗಿದ್ದು, ಪರ್ಯಾಯೋತ್ಸವ ಸಂಭ್ರಮಕ್ಕೆ ಮತ್ತಷ್ಟು ಕಳೆ ನೀಡಿದೆ. ಜೋಡು ಕಟ್ಟೆಯಿಂದ ರಥಬೀದಿವರೆಗೆ 13 ಕಡೆಗಳಲ್ಲಿ ಬೃಹತ್‌ ಆಕಾರದ ಆಕರ್ಷಕ ರೀತಿಯಲ್ಲಿ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿದೆ. ಕೃಷ್ಣಾಪುರ ಮಠದಲ್ಲಿಯೂ ಸಡಗರ ಮನೆ ಮಾಡಿದ್ದು, ರಥಬೀದಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಮಠದ ಒಳಾಂಗಣ, ಕೊಠಡಿಗಳನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿದೆ. ಮಠದ ಹೊರಭಾಗ ವಿವಿಧ ಬಗೆಯ ವಿದ್ಯುತ್‌ ಅಲಂಕಾರಗಳಿಂದ ಕಣ್ಮನ ಸೆಳೆಯುತ್ತಿದೆ. ರಥಬೀದಿ ಸಂಪರ್ಕಿಸುವ ತೆಂಕಪೇಟೆ, ಬಡುಗಪೇಟೆ ಸಹಿತ 4 ಇಕ್ಕೆಲದ ರಸ್ತೆಗಳು, ರಥಬೀದಿಯು ಎಲ್‌ಇಡಿ, ವಿವಿಧ ಬಣ್ಣಗಳಿಂದ ಕೂಡಿದ ವಿದ್ಯುತ್‌ ಅಲಂಕಾರದಿಂದ ಸ್ವಾಗತಿಸುತ್ತಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next