ಮಂಗಳೂರು: ಸುರತ್ಕಲ್ ನ ಕೃಷ್ಣಾಪುರ ಐದನೇ ಬ್ಲಾಕ್ ನ ಫ್ಯಾನ್ಸಿ ಸ್ಟೋರ್ ಮಾಲಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಅಲ್ಲದೆ ಮಂಗಳವಾರ ಬೆಳಿಗ್ಗೆಯವರಿಗೆ ಸೆಕ್ಷನ್ 144 ಜಾರಿ ಮಾಡಲಾಗಿದೆ.
ರವಿವಾರ ಬೆಳಗ್ಗೆ 6 ರಿಂದ ಡಿ.27ರ ಬೆಳಗ್ಗೆ 6 ರವರೆಗೆ ಸುರತ್ಕಲ್, ಪಣಂಬೂರು, ಬಜಪೆ, ಕಾವೂರು ಠಾಣಾ ವ್ಯಾಪ್ತಿಗಳಲ್ಲಿ ಸೆಕ್ಷನ್144 ನಂತೆ ನಿಷೇಧಾಜ್ಞೆ ಜಾರಿ ಮಾಡಿ ಆದೇಶಿಸಲಾಗಿದೆ.
ಮದ್ಯ ಮಾರಾಟ ನಿಷೇಧ: ಅಲ್ಲದೆ ಈ ಸಮಯದಲ್ಲಿ ನಗರ ಕಮಿಷನರೇಟ್ ವ್ಯಾಪ್ತಿಯ ಸುರತ್ಕಲ್, ಬಜಪೆ, ಕಾವೂರು ಮತ್ತು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.
ರಾತ್ರಿ ಸಂಚಾರ ನಿಷೇಧ: ಮುಂಜಾಗೃತಾ ಕ್ರಮವಾಗಿ ದಿನಾಂಕ 25 ಮತ್ತು 26ರಂದು ಸುರತ್ಕಲ್, ಬಜಪೆ, ಕಾವೂರು ಮತ್ತು ಪಣಂಬೂರು ಠಾಣಾ ವ್ಯಾಪ್ತಿಯ ಎಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಸಂಕೀರ್ಣಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಕರ್ತವ್ಯದ ಪಾಳಿಯನ್ನು ಸಂಜೆ 6 ಗಂಟೆಯ ಒಳಗಾಗಿ ಬದಲಾಯಿಸುವಂತೆ ಮತ್ತು ಸಂಜೆ 6ರಿಂದ ಬೆಳಗ್ಗೆ 6ರವರೆಗೆ ಸಿಬ್ಬಂದಿಯವರು ರಸ್ತೆಯಲ್ಲಿ ಸಂಚರಿಸಬಾರದು ಎಂದು ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.
ಏನಿದು ಘಟನೆ?: ಫ್ಯಾನ್ಸಿ ಸ್ಟೋರ್ ಮಾಲಕ ಜಲೀಲ್ (42) ಅವರಿಗೆ ಶನಿವಾರ ರಾತ್ರಿ ದುಷ್ಕರ್ಮಿಗಳಿಬ್ಬರು ಚೂರಿಯಿಂದ ಇರಿದಿದ್ದು, ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ರಾತ್ರಿ 8.30ರ ಸುಮಾರಿಗೆ ಗ್ರಾಹಕರ ಸೋಗಿನಲ್ಲಿ ಇಬ್ಬರು ಯುವಕರು ಅಂಗಡಿಗೆ ಬಂದಿದ್ದರು. ಓರ್ವ ಮಾಸ್ಕ್ ಧರಿಸಿದ್ದು, ಇನ್ನೋರ್ವ ಟವೆಲನ್ನು ಮುಖಕ್ಕೆ ಕಟ್ಟಿಕೊಂಡಿದ್ದ ಎನ್ನಲಾಗಿದೆ. ಕೃತ್ಯ ನಡೆಸಿ ದೂರದಲ್ಲಿ ನಿಲ್ಲಿಸಿದ್ದ ಬೈಕಿನಲ್ಲಿ ಪರಾರಿಯಾದರು.
ಇದನ್ನೂ ಓದಿ:ಬ್ಯಾಕ್‌ಅಪ್ ಆಟಗಾರರಿಗೆ ಮಣೆ ಹಾಕಿದ ಆರ್‌ಸಿಬಿ
ಜಲೀಲ್ ಬೊಬ್ಬೆ ಹಾಕಿ ಸಮೀಪದ ಅಂಗಡಿಯತ್ತ ಓಡುತ್ತಾ ಬರುತ್ತಿದ್ದಾಗಲೇ ಕುಸಿದು ಬಿದ್ದರು. ಕೂಡಲೇ ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಕೆಲವೇ ಹೊತ್ತಿನಲ್ಲಿ ಅವರು ಮೃತಪಟ್ಟರು.
ಕೃಷ್ಣಾಪುರ 9ನೇ ಬ್ಲಾಕ್ ನಿವಾಸಿಯಾಗಿದ್ದ ಜಲೀಲ್ ಪತ್ನಿಯನ್ನು ಅಗಲಿದ್ದಾರೆ.