ಬೆಂಗಳೂರು: ಕೃಷ್ಣ ಜನ್ಮಾಷ್ಟಮಿಯ ದಿನದಂದು ಬಳ್ಳಾರಿ ಟಸ್ಕರ್ಸ್ ಆಟಗಾರ ಕೃಷ್ಣಪ್ಪ ಗೌತಮ್ ವಿಶ್ವರೂಪ ತೋರಿಸಿದ್ದಾರೆ. ಕೆಪಿಎಲ್ ನ ಶಿವಮೊಗ್ಗ ಲಯನ್ಸ್ ವಿರುದ್ದದ ಸಂಪೂರ್ಣ ಪಂದ್ಯವನ್ನು ತನ್ನ ಅಂಕೆಯಲ್ಲಿ ಕುಣಿಸಿದ ಕೃಷ್ಣಪ್ಪ ಭರ್ಜರಿ ಬ್ಯಾಟಿಂಗ್ ಮತ್ತು ಬೊಂಬಾಟ್ ಬೌಲಿಂಗ್ ನಡೆಸಿ ಹೊಸ ದಾಖಲೆ ಬರೆದರು.
ಮೊದಲು ಬ್ಯಾಟಿಂಗ್ ನಲ್ಲಿ ಅಕ್ಷರಶಃ ಅಬ್ಬರಿಸಿದ ಗೌತಮ್ ಕೇವಲ 56 ಎಸೆತಗಳಲ್ಲಿ 134 ರನ್ ಚಚ್ಚಿ ಬಿಸಾಕಿದರು. 13 ಭರ್ಜರಿ ಸಿಕ್ಸರ್ ಮತ್ತು ಏಳು ಬೌಂಡರಿ ಸಿಡಿಸಿದ ಗೌತಮ್ ಶಿವಮೊಗ್ಗ ಬೌಲರ್ ಗಳ ಬೆವರಿಳಿಸಿದರು.
ಬೌಲಿಂಗ್ ನಲ್ಲಿ ಅತ್ಯಪರೂಪದ ದಾಖಲೆ ಬರೆದ ಕೃಷ್ಣಪ್ಪ ತಾನೆಸೆದ ನಾಲ್ಕು ಓವರ್ ಗಳಲ್ಲಿ ಎಂಟು ವಿಕೆಟ್ ಕಿತ್ತು ಮೆರೆದಾಡಿದರು.
ಮಳೆಯಿಂದ ತೊಂದರೆಯಾದ ಪಂದ್ಯವನ್ನು ತಲಾ 17 ಓವರ್ ಗೆ ಕಡಿತಗೊಳಿಸಲಾಯಿತು. ಮೊದಲು ಬ್ಯಾಟಿಂಗ್ ನಡೆಸಿದ ಬಳ್ಳಾರಿ ಟಸ್ಕರ್ಸ್ ಗೌತಮ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಕೇವಲ ಮೂರು ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿತು. ಆರಂಭಿಕ ಅಭಿಷೇಕ್ ರೆಡ್ಡಿ ಅವರು 34 ರನ್ ಗಳಿಸಿದ್ದು ಬಿಟ್ಟರೆ ಮತ್ತೆಲ್ಲಾ ಕೃಷ್ಣಪ್ಪ ಗೌತಮ್ ರದ್ದೇ ಹವಾ. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ಗೌತಮ್ ಶಿವಮೊಗ್ಗ ಬೌಲರ್ ಗಲನ್ನು ಮನಬಂದಂತೆ ದಂಡಿಸಿದರು. ಚಿನ್ನಸ್ವಾಮಿ ಕ್ರೀಡಾಂಗಣದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದ ಕೃಷ್ಣಪ್ಪ ಕೇವಲ 39 ಎಸೆತಗಳಲ್ಲಿ ಶತಕ ಬಾರಿಸಿ ಕೆಪಿಎಲ್ ಇತಿಹಾಸದ ಅತೀ ವೇಗದ ಶತಕ ಬಾರಿಸಿದರು.
17 ಓವರ್ ಗಳಲ್ಲಿ 204 ರನ್ ಗಳಿಸುವ ಕಠಿಣ ಗುರಿ ಪಡೆದ ಶಿವಮೊಗ್ಗ ತಂಡಕ್ಕೆ ಕಾಡಿದ್ದು ಮತ್ತದೇ ಕೃಷ್ಣಪ್ಪ ಗೌತಮ್. ಬ್ಯಾಟಿಂಗ್ ನಲ್ಲಿ ಬೌಲರ್ ಗಳ ಬೆವರಿಳಿಸಿದ್ದ ಗೌತಮ್ ಬೌಲಿಂಗ್ ವೇಳೆ ಶಿವಮೊಗ್ಗ ಬ್ಯಾಟ್ಸ್ ಮನ್ ಗಳ ಅಟ್ಟಾಡಿಸಿದರು. ಅಕ್ಷಯ್ ಬಳ್ಳಾಲ್ ಮತ್ತು ಪವನ್ ದೇಶಪಾಂಡೆ ಸ್ವಲ್ಪ ಪ್ರತಿರೋಧ ತೋರಿದರೂ ಕೃಷ್ಣನ ಮಾಯಾಜಾಲದ ಎದುರು ಅವರ ಆಟ ನಡೆಯಲಿಲ್ಲ. ಕೇವಲ 15 ರನ್ ನೀಡಿ ಎಂಟು ವಿಕೆಟ್ ಕಬಳಿಸಿದ ಗೌತಮ್ ಟಿ ಟ್ವೆಂಟಿ ಇತಿಹಾಸದಲ್ಲಿ ಹೊಸ ದಾಖಲೆ ಬರೆದರು. ಕೃಷ್ಣಪ್ಪ ದಾಳಿಗೆ ಬೆದರಿದ ಶಿವಮೊಗ್ಗ ಕೇವಲ 133 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲನುಭವಿಸಿತು.