Advertisement

ಕೃಷ್ಣ ಮನವೊಲಿಸಲು ನಡೆದಿದೆ ಕಸರತ್ತು

03:45 AM Jan 30, 2017 | Team Udayavani |

ಬೆಂಗಳೂರು: ಕಾಂಗ್ರೆಸ್‌ಗೆ ವಿದಾಯ ಹೇಳಿರುವ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಬೇಕೆಂಬ ಕಸರತ್ತು ಅವರ ಆಪ್ತ ವಲಯದಿಂದ ಆರಂಭವಾಗಿದೆ.

Advertisement

ಕೃಷ್ಣ ಅವರ ಶಿಷ್ಯ ಬಳಗದಲ್ಲಿ ಗುರುತಿಸಿಕೊಂಡಿರುವ ಗೃಹ ಸಚಿವರೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಸಚಿವರಾದ ಡಿ.ಕೆ.ಶಿವಕುಮಾರ್‌, ರಾಮಲಿಂಗಾರೆಡ್ಡಿ, ಎಂ.ಬಿ.ಪಾಟೀಲ್‌ ಸೇರಿದಂತೆ ಅನೇಕ ನಾಯಕರು ಕೃಷ್ಣ ಅವರಿಗೆ ಪಕ್ಷದಲ್ಲಿ ಯಾವುದಾದರೂ ಹುದ್ದೆ ನೀಡಿ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಬೇಕು ಎಂದು ಹೈ ಕಮಾಂಡ್‌ಗೆ ಮನವಿ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್‌ ಪಕ್ಷದ ನಡುವೆ ಹೊಂದಾಣಿಕೆ ಮೂಡಿಸಲು ರಚಿಸಲಾಗಿರುವ ಸಮನ್ವಯ ಸಮಿತಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿಯೂ ಆಗಿರುವ ದಿಗ್ವಿಜಯ್‌ ಸಿಂಗ್‌  ಅವರ ಬದಲಿಗೆ ಎಸ್‌.ಎಂ. ಕೃಷ್ಣ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಬೇಕೆಂಬ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ, ಇದೆಲ್ಲಕ್ಕೂ ಹೈ ಕಮಾಂಡ್‌ ಒಪ್ಪುವ ಸಾಧ್ಯತೆ ಕಡಿಮೆ ಎಂಬ ಮಾತು ಕಾಂಗ್ರೆಸ್‌ನ ಇನ್ನೊಂದು ಬಣದಿಂದ ಕೇಳಿ ಬರುತ್ತಿದೆ. ಎಸ್‌.ಎಂ.ಕೃಷ್ಣ ಅವರಿಗೆ ಕಾಂಗ್ರೆಸ್‌ ಮುಖ್ಯಮಂತ್ರಿ, ಕೇಂದ್ರ ಸಚಿವ, ರಾಜ್ಯಪಾಲ, ರಾಜ್ಯಸಭೆ ಸದಸ್ಯತ್ವ ಸೇರಿದಂತೆ ಎಲ್ಲ ಅಧಿಕಾರಗಳನ್ನೂ ಕೊಟ್ಟಿದೆ. ಹೀಗಿರುವಾಗ ಅವರು ಅನಗತ್ಯವಾಗಿ ಪಕ್ಷದ ಮೇಲೆ ಗೂಬೆ ಕೂರಿಸಿ ಹೊರ ಹೋಗಿದ್ದು, ಹೈ ಕಮಾಂಡ್‌ ಅವರ ಮನವೊಲಿಸುವ ಪ್ರಯತ್ನ ಮಾಡುವ ಸಾಧ್ಯತೆ ಕಡಿಮೆ ಎಂಬ ವಾದವೂ ಕೇಳಿ ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next