Advertisement

ಬೇಸಿಗೆ ಬರ ನೀಗಿಸಿದ ಕೃಷ್ಣೆಯ ಒಡಲು

12:08 PM May 12, 2021 | Team Udayavani |

ವರದಿ: ಮಹಾದೇವ ಪೂಜೇರಿ

Advertisement

ಚಿಕ್ಕೋಡಿ: ಪ್ರತಿ ವರ್ಷದ ಬೇಸಿಗೆಯಲ್ಲಿ ತೀವ್ರ ಕುಡಿಯುವ ನೀರಿನ ಅಭಾವ ಸ್ಥಿತಿ ನಿರ್ಮಾಣವಾಗಿ ಜನ-ಜಾನುವಾರಗಳು ಹನಿ ನೀರಿಗಾಗಿ ಹಾಹಾಕಾರ ಪಡಬೇಕಿತ್ತು. ಆದರೆ ಪ್ರಸಕ್ತ ವರ್ಷದಲ್ಲಿ ಗಡಿ ಭಾಗದ ಜನರ ಜೀವನದಿ ಕೃಷ್ಣಾ ಹಾಗೂ ಉಪನದಿಗಳ ಒಡಲಿನಲ್ಲಿ ಅಪಾರ ಪ್ರಮಾಣದ ನೀರಿನ ಸಂಗ್ರಹವಿದ್ದು, ಪ್ರಸಕ್ತ ವರ್ಷದಲ್ಲಿ ಚಿಕ್ಕೋಡಿ ಉಪವಿಭಾಗದಲ್ಲಿ ನೀರಿನ ಸಮಸ್ಯೆ ಎದುರಾಗುವುದು ತೀರಾ ವಿರಳ.

ಕಳೆದ ಎರಡು ವರ್ಷಗಳ ಹಿಂದೆ ಕೃಷ್ಣಾ ಹಾಗೂ ಉಪನದಿಗಳಾದ ದೂಧಗಂಗಾ ಮತ್ತು ವೇದಗಂಗಾ ನದಿಗಳ ಒಡಲು ಬತ್ತಿ ಹೋಗಿ ಚಿಕ್ಕೋಡಿ ಉಪವಿಭಾಗದ ನಿಪ್ಪಾಣಿ, ಚಿಕ್ಕೋಡಿ, ರಾಯಬಾಗ, ಕಾಗವಾಡ ಹಾಗೂ ಅಥಣಿ ತಾಲೂಕಿನ ನದಿ ತೀರದ ಜನ ಗುಟುಕು ನೀರಿಗೆ ಹಾಹಾಕಾರ ಎದುರಿಸಿದ್ದರು. ನದಿ ನೀರನ್ನೇ ನಂಬಿಕೊಂಡಿರುವ ಅದೇಷ್ಟೋ ಬರಪೀಡಿತ ಗ್ರಾಮಗಳಿಗೆ ಆಸರೆಯಾಗಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಹ ಸಂಪೂರ್ಣ ಬಂದ ಆಗಿ ಹನಿ ನೀರಿಗೆ ಜನ ಪರದಾಡುವಂತ ಸ್ಥಿತಿ ಉದ್ಭವ ಆಗುತ್ತಿತ್ತು. ಪ್ರತಿ ಬೇಸಿಗೆಯ ಏಪ್ರಿಲ್‌ ಮತ್ತು ಮೇ ತಿಂಗಳ ಅವಧಿಯಲ್ಲಿ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗಳು ಸಂಪೂರ್ಣ ಬತ್ತಿ ಹೋಗುತ್ತಿದ್ದವು. ಆದರೆ ಕಳೆದ ವರ್ಷದಲ್ಲಿ ನೆರೆಯ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆ ಆಗಿ ಅಲ್ಲಿಯ ಜಲಾಶಯಗಳು ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದ ಮೇ ತಿಂಗಳ ಎರಡನೇ ವಾರ ಕಳೆಯುತ್ತಾ ಬಂದರೂ ಸಹ ನದಿಗಳ ನೀರಿನ ಸಂಗ್ರಹದಲ್ಲಿ ಕಡಿಮೆಯಾಗಿಲ್ಲ. ಇದರಿಂದ ನದಿ ತೀರದ ರೈತರ ಜಮೀನುಗಳಲ್ಲಿ ಬೆಳೆದ ಬೆಳೆಗಳು ಹಚ್ಚಹಸಿರಾಗಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಬೆಳಗಾವಿ ಜಿಲ್ಲೆಯ ಗಡಿ ಭಾಗದ ನಿಪ್ಪಾಣಿ ಹಾಗೂ ಚಿಕ್ಕೋಡಿ ತಾಲೂಕಿನಲ್ಲಿ ಹರಿಯುತ್ತಿರುವ ದೂಧಗಂಗಾ ಮತ್ತು ವೇದಗಂಗಾ ನದಿಗಳ ಒಡಲು ಆಗಾಗ ಖಾಲಿಯಾಗುತ್ತವೆ. ಕೂಡಲೇ ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ಚಿಕ್ಕೋಡಿ-ನಿಪ್ಪಾಣಿ ಭಾಗದ ಜನಪ್ರತಿನಿಧಿ ಗಳ ಒತ್ತಾಯದ ಮೇರಿಗೆ ಕೂಡಲೇ ಕರ್ನಾಟಕಕ್ಕೆ ಬರಬೇಕಾದ ನೀರಿನ ಪಾಲು ಸಮರ್ಪಕವಾಗಿ ಬರಲಾರಂಭಿಸಿದೆ. ಇದರಿಂದ ಎರಡು ನದಿಗಳಲ್ಲಿ ನೀರು ಸಂಗ್ರಹವಿರುತ್ತದೆ. ಇನ್ನೂ ಉತ್ತರ ಕರ್ನಾಟಕದ ಪ್ರಮುಖ ನದಿಗಳಲ್ಲೊಂದಾದ ಕೃಷ್ಣಾ ನದಿಯಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ 3 ಟಿಎಂಸಿ ನೀರು ಹರಿಯುವುದರಿಂದ ನದಿ ದಂಡೆಯ ನೂರಾರು ಗ್ರಾಮಗಳ ರೈತರಿಗೆ ವರದಾನವಾಗಿ ಪರಿಣಮಿಸಿದೆ. ಇನ್ನೂ ಒಂದು ತಿಂಗಳವರೆಗೆ ನದಿಯಲ್ಲಿ ನೀರು ಇರುತ್ತದೆ ಎನ್ನುತ್ತಾರೆ ನೀರಾವರಿ ಇಲಾಖೆ ಅಧಿಕಾರಿಗಳು.

ಹಿಪ್ಪರಗಿ ಜಲಾಶಯದಲ್ಲಿ 3 ಟಿಎಂಸಿ ಅಡಿ ನೀರು: ನೆರೆಯ ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ನೀರು ಹರಿದು ಬರುತ್ತದೆ. ಮತ್ತು ಜಮಖಂಡಿ ತಾಲೂಕಿನ ಹಿಪ್ಪರಗಿ ಜಲಾಶಯದಲ್ಲಿ ಇನ್ನೂ 3 ಟಿಎಂಸಿ ಅಡಿ ನೀರಿನ ಸಂಗ್ರಹವಿದ್ದು, ಹೀಗಾಗಿ ಹಿಪ್ಪರಗಿ ಜಲಾಶಯದ ಹಿನ್ನೀರು ಚಿಕ್ಕೋಡಿ ತಾಲೂಕಿನವರೆಗೆ ನೀರು ನಿಲ್ಲುತ್ತದೆ. ಹೀಗಾಗಿ ಪ್ರಸಕ್ತ ವರ್ಷದಲ್ಲಿ ಕೃಷ್ಣಾ ನದಿ ತನ್ನ ಒಡಲು ಬರಿದು ಮಾಡಿಕೊಳ್ಳದೇ ನದಿ ತೀರದ ಗ್ರಾಮಗಳಿಗೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮತ್ತು ವ್ಯವಸಾಯಕ್ಕೆ ರೈತರಿಗೆ ಅನುಕೂಲವಾಗಿದೆ. ಚಿಕ್ಕೋಡಿ ನಗರಕ್ಕಿಲ್ಲ ಸಮಸ್ಯೆ: ಕೃಷ್ಣಾ ನದಿಯಿಂದಲ್ಲೇ ಜಿಲ್ಲಾ ಕೇಂದ್ರವಾದ ಚಿಕ್ಕೋಡಿ ನಗರಕ್ಕೆ ಕುಡಿಯುವ ನೀರು ಸರಬರಾಜು ಆಗುತ್ತದೆ. ಪ್ರತಿ ಬೇಸಿಗೆಯಲ್ಲಿ ನೀರಿನ ಅಭಾವ ಎದುರಾಗುತ್ತಿತ್ತು. ಆದರೆ ಈ ವರ್ಷ ಅಭಾವ ಸಾಧ್ಯತೆ ಕಡಿಮೆ ಇದೆ. ನದಿಯಲ್ಲಿ ಅಪಾರ ಪ್ರಮಾಣದ ನೀರು ಇರುವುದರಿಂದ ಚಿಕ್ಕೋಡಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎನ್ನುತ್ತಾರೆ ಪುರಸಭೆ ಮುಖ್ಯಾಧಿಕಾರಿ ಡಾ| ಸುಂದರ ರೋಗಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next