ಶಹಾಪುರ: ಕೊಳ್ಳೂರ (ಎಂ) ಸೇತುವೆ ಎತ್ತರಕ್ಕೆ ಬಂದು ತಲುಪಿದ ಕೃಷ್ಣಾ ನದಿ ನೀರು ಹಾಗೂ ಕೃಷ್ಣಾ ನದಿ ಪ್ರವಾಹದಿಂದ ಜಮೀನುಗಳಿಗೆ ನೀರು ನುಗ್ಗಿತ್ತು. (ಬಲಚಿತ್ರ).
ಶಹಾಪುರ: ಕೃಷ್ಣಾ ನದಿ ಪ್ರವಾಹ ಭೀತಿಯಲ್ಲಿರುವ ಕೊಳ್ಳೂರ (ಎಂ) ಸೇರಿದಂತೆ ಹತ್ತು ಹಲವು ಗ್ರಾಮಗಳ ಜನರ ರಕ್ಷಣೆ ಸೇರಿದಂತೆ ನದಿ ಪಾತ್ರದ ಜಮೀನಿಗೆ ನುಗ್ಗಿದ ನೀರಿನಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದು, ರೈತರಿಗೆ ಸಮರ್ಪಕ ಪರಿಹಾರ ಕಲ್ಪಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಮಾಗನೂರ ಆಗ್ರಹಿಸಿದರು.
ತಾಲೂಕಿನ ಕೊಳ್ಳೂರ (ಎಂ) ಸೇತುವೆಗೆ ಭೇಟಿ ನೀಡಿ ರೈತರ ಜಮೀನಿಗೆ ನುಗ್ಗಿರುವ ನೀರನ್ನು ಪರಿಶೀಲಿಸಿ ಅವರು ಮಾತನಾಡಿದರು.
ತಾಲೂಕಿನ ಹಯ್ನಾಳ (ಬಿ), ಗೌಡೂರ, ಕೊಳ್ಳೂರ (ಎಂ), ಮರಕಲ್, ಟೊಣ್ಣೂರ, ಯಕ್ಷಿಂತಿ, ಐಕೂರ, ತುಮಕೂರ, ಗೊಂದೆನೂರ, ಚೆನ್ನೂರ, ಕೊಂಕಲ್ ಸೇರಿದಂತೆ ಹಲವಾರು ಗ್ರಾಮಗಳ ಸೀಮಾಂತರದಲ್ಲಿ ಬರುವ ಅಂದಾಜು 2 ಸಾವಿರಕ್ಕೂ ಹೆಚ್ಚು ಹೆಕ್ಷೇರ್ ಪ್ರದೇಶದ ಜಮೀನು ಕೃಷ್ಣಾ ನದಿ ಪ್ರವಾಹದಿಂದ ಆವರಿಸಿಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ನದಿ ತಿರದ ಸಾಕಷ್ಟು ಹೊಲಗಳಿಗೆ ನೀರು ನುಗ್ಗಿದ್ದು, ಹೆಸರು, ಹತ್ತಿ, ಭತ್ತ ಇತರೆ ಬೆಳೆಗಳು ನಾಶಗೊಂಡಿವೆ. ಜಿಲ್ಲಾಡಳಿತ ನದಿ ತೀರದ ರೈತರ ಸಂಕಷ್ಟದಲ್ಲಿ ಭಾಗಿಯಾಗಿ ಅವರಿಗಾದ ನಷ್ಟ ಭರಿಸುವಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಚಂದ್ರಶೇಖರಗೌಡ ಮರಕಲ್, ಮುಖಂಡರಾದ ಬಸ್ಸಪ್ಪ ಭಂಗಿ, ಶಿವರಡ್ಡಿ ಕೊಳ್ಳೂರ, ಹಣಮೆಗೌಡ ಕೊಳ್ಳೂರ, ಅಂಬಲಯ್ಯ, ವೆಂಕಟೇಶ ನಾಯಕ, ಮಲ್ಲಿಕಾರ್ಜುನ ಮಸ್ತಿ, ಶರಣಗೌಡ ಹೊಸಪೇಟ, ಹಣಮಂತ ವಾಲ್ಮೀಕಿ ಸೇರಿದಂತೆ ಇತರರು ಇದ್ದರು.