Advertisement
ಹೌದು, ಆಲಮಟ್ಟಿ ಜಲಾಶಯದಿಂದ ಐತಿಹಾಸಿಕ ಬಾದಾಮಿ ಪಟ್ಟಣ, ಕೆರೂರ ಹಾಗೂ ಮಾರ್ಗಮಧ್ಯೆ ಬರುವ ಮೂರು ತಾಲೂಕಿನ 18 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ 227.80 ಕೋಟಿ ಮೊತ್ತದ ಯೋಜನೆ ಇದೇ ಫೆ. 3ರಂದು ಅನುಷ್ಠಾನಗೊಳ್ಳುತ್ತಿದೆ.
Related Articles
Advertisement
ನಿರಂತರ ನೀರಿಗೆ ಸಿದ್ದು ನಿರಂತರ ಪ್ರಯತ್ನ: ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಬಾದಾಮಿ ಕ್ಷೇತ್ರದಿಂದ ಆಯ್ಕೆಯಾದ ಬಳಿಕ ಬಾದಾಮಿಯಲ್ಲಿ ನಡೆದ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಪಟ್ಟಣದ ನೂರಾರು ಪ್ರಮುಖರು, ಈ ಯೋಜನೆಯ ಬೇಡಿಕೆಯೇ ಮೊದಲ ಮನವಿಯಾಗಿ ಸಲ್ಲಿಸಿದ್ದರು. ಐತಿಹಾಸಿಕ ಬಾದಾಮಿ ಪಟ್ಟಣದ ನೀರಿನ ಸಮಸ್ಯೆ ವಿವರಿಸಿ, ಆಲಮಟ್ಟಿ ಜಲಾಶಯದಿಂದ ನೀರು ಪೂರೈಕೆಗೆ ಕೇಳಿಕೊಂಡಿದ್ದರು. ಕೆರೂರಲ್ಲೂ ಇದೇ ಮನವಿ ಸಿದ್ದರಾಮಯ್ಯ ಅವರಿಗೆ ಬಂದಿತ್ತು. ಇನ್ನು ಗ್ರಾಮೀಣ ಭಾಗದಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಪ್ರವಾಸದ ವೇಳೆಯೂ ಕುಡಿಯುವ ನೀರಿಗಾಗಿಯೇ ಮನವಿ ಬರುತ್ತಿದ್ದವು. ಹೀಗಾಗಿ ಈ ಯೋಜನೆ ಕುರಿತು ಗಂಭೀರವಾಗಿ ಪ್ರಯತ್ನಿಸಿದ ಸಿದ್ದರಾಮಯ್ಯ, ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ, 227.80 ಕೋಟಿ ಮೊತ್ತದ ಬೃಹತ್ ಯೋಜನೆ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದರು.
ಯಾವ ಯಾವ ಹಳ್ಳಿಗೆ ನೀರು: ಈ ಯೋಜನೆಯಿಂದ ಬಾದಾಮಿ ಮತ್ತು ಕೆರೂರ ಪಟ್ಟಣ, ಹುನಗುಂದ ತಾಲೂಕಿನ ಐತಿಹಾಸಿಕ ಪ್ರವಾಸಿ ತಾಣ ಐಹೊಳೆ ಹಾಗೂ ಸೂಳೆಭಾವಿ, ಗುಳೇದಗುಡ್ಡ ಮತ್ತು ಬಾದಾಮಿ ತಾಲೂಕು ವ್ಯಾಪ್ತಿಯ ತೋಗುಣಸಿ, ಲಿಂಗಾಪುರ, ತಿಮ್ಮಸಾಗರ, ಕೆಲೂಡಿ, ತೆಗ್ಗಿ, ಕುಟುಕನಕೇರಿ, ಆಡಗಲ್, ಹಂಸನೂರ, ಹಿರೇಬೂದಿಹಾಳ, ಖಾಜಿಬೂದಿಹಾಳ, ಹನಸಗೇರಿ, ಕಟಗೇರಿ, ಕೊಂಕಣಕೊಪ್ಪ, ಹುಲಸಗೇರಿ, ಲಕ್ಕಸಕೊಪ್ಪ, ಜಮ್ಮನಕಟ್ಟಿ ಗ್ರಾಮಗಳಿಗೆ ಈ ಯೋಜನೆಯಿಂದ ನಿರಂತರ ನೀರು ಪೂರೈಕೆ ಆಗಲಿದೆ. ಈ ಯೋಜನೆಯನ್ನು ಕರ್ನಾಟಕ ನಗರ ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಅನುಷ್ಠಾನಗೊಳ್ಳುತ್ತಿದೆ. ಈ ಮಂಡಳಿಯಿಂದ ಇಳಕಲ್ಲ ನಗರ, ಬಾಗಲಕೋಟೆಯ ಹಳೆಯ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಈಗಾಗಲೇ ಇಂತಹದ್ದೇ ಕುಡಿಯುವ ನೀರಿನ ಯೋಜನೆ ಕೈಗೊಂಡಿದ್ದು, ಕಾಲಮಿತಿ ಮತ್ತು ಸರಿಯಾಗಿ ಅನುಷ್ಠಾನಗೊಳಿಸಿಲ್ಲ ಎಂಬ ಆರೋಪ ಮಂಡಳಿ ಮೇಲಿದೆ. ಹೀಗಾಗಿ ನಿರಂತರ ಕುಡಿಯುವ ಯೋಜನೆಗೆ ನಿರಂತರ ನಿಗಾ ಇಡಬೇಕಾದ ಜವಾಬ್ದಾರಿಯೂ ಸಿದ್ದರಾಮಯ್ಯ ಮೇಲಿದೆ. ಯೋಜನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ, ಕೃಷ್ಣೆಯಿಂದ ಮಲಪ್ರಭಾ ನದಿ ಭಾಗದ ಜನರಿಗೆ ನಿರಂತರ ನೀರು ದೊರೆಯಲಿ ಎಂಬುದೇ ಜನರ ಬಯಕೆ.
-ಶ್ರೀಶೈಲ ಕೆ. ಬಿರಾದಾರ