ಕುಷ್ಟಗಿ:ಬರದ ನಾಡಿಗೆ ಒಣ ಬೇಸಾಯ ಪ್ರದೇಶವಾದ ಕುಷ್ಟಗಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ಕೃಷ್ಣೆಯ ನದಿ ನೀರು ವರದಾನವಾಗುವ ಆಶಾವಾದ ಮೂಡಿಸಿದೆ. ಕೃಷ್ಣ ಭಾಗ್ಯ ಜಲ ನಿಗಮದಿಂದ ತಾಲೂಕಿನ 17 ಕೆರೆಗಳ ಪೈಕಿ, ಯಲಬುಣಚಿ ಕೆರೆಗೆ ಶುಕ್ರವಾರ ಕೃಷ್ಣೆ ನದಿ ನೀರು ಹರಿಸಿರುವ ಪರೀಕ್ಷಾರ್ಥ ಪ್ರಯೋಗ ಯಶಸ್ಸು ಕಂಡಿದೆ.
ಕೊಪ್ಪಳ ಏತ ನೀರಾವರಿ ಯೋಜನೆ ಮೊದಲ ಹಂತದ ನಾರಾಯಣಪುರ ಜಲಾಶಯದಿಂದ ಹುನಗುಂದ ತಾಲೂಕಿನ ಮುರೋಳ, ಬಲಕುಂದಿ, ಕುಷ್ಟಗಿ ತಾಲೂಕಿನ ಕಲಾಲಬಂಡಿ ಡಿಲಿವೆರಿ ಚೇಂಬರ (ಡಿಸಿ-3) ಈಗಾಗಲೇ ಕೃಷ್ಣೆ ನದಿ ನೀರು ಹರಿಸಿರುವುದು ಪ್ರಾಯೋಗೀಕವಾಗಿ ಮೊದಲ ಯಶಸ್ವಿಯಾಗಿದೆ. ಅಲ್ಲಿಂದ 20 ಕಿ.ಮೀ. ಅಂತರದ ಪ್ರತ್ಯೇಕವಾಗಿ ಯಲಬುಣಚಿ ಕೆರೆಗೆ 456 ಅಶ್ವಶಕ್ತಿ ಎರಡು ಮೋಟಾರಗಳಿಂದ ನೀರನ್ನು ಪೈಪಲೈನ್ ಮೂಲಕ ಶುಕ್ರವಾರ ಹರಿಸಿದ್ದರಿಂದ ಬರದ ನಾಡಿನಲ್ಲಿ ಗಂಗೆಯ ಸ್ವರೂಪವಾಗಿ ಕೃಷ್ಣೆ ಬಂದಿರುವುದು ಗ್ರಾಮಸ್ಥರಲ್ಲಿ ಸಂತಸ ಇಮ್ಮಡಿಸಿದೆ.
ಯಲಬುಣಚಿ ಕೆರೆಗೆ ಪ್ರಪ್ರಥಮ ಬಾರಿಗೆ ನದಿ ನೀರು ಬಂದಿರುವ ಹಿನ್ನೆಲೆಯಲ್ಲಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಪೈಪಲೈನ್ ಮೂಲಕ ಚಿಮ್ಮುವ ನೀರಿಗೆ ಪೂಜೆ ಸಲ್ಲಿಸಿ ಧನ್ಯತಾ ಭಾವ ಸಮರ್ಪಿಸಿದರು. ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣ ಭಾಗ್ಯ ಜಲ ನಿಗಮದಿಂದ ಕುಷ್ಟಗಿ ತಾಲೂಕಿನ 17 ಕೆರೆಗಳಿಗೆ ನೀರು ತುಂಬುವ ಯೋಜನೆಯಲ್ಲಿ ಮೊದಲ ಹಂತವಾಗಿ ಯಲಬುಣಚಿ ಕೆರೆಗೆ ನೀರು ಪರೀಕ್ಷಾರ್ಥ ಪ್ರಯೋಗ ಇದಾಗಿದೆ. ಶೀಘ್ರದಲ್ಲೇ ಇನ್ನುಳಿದ ಕೆರೆಗಳಿಗೆ ನೀರು ಹರಿಸಲಾಗುವುದು. ಪ್ರತಿ ವರ್ಷ ಎರಡು ಬಾರಿ ಅಂದರೆ ಮಳೆಗಾಲ ಹಾಗೂ ಬೇಸಿಗೆಯ ಸಂಕಷ್ಟದ ಪರಿಸ್ಥಿತಿಯಲ್ಲಿ ನಾರಾಯಣಪುರ ಜಲಾಶಯದ ಮೂಲಕ ನೀರು ತಾಲೂಕಿನ ಕೆರೆಗಳಿಗೆ ಹರಿಸಿ ತುಂಬಿಸಲಾಗುವುದು.
ಇದನ್ನೂ ಓದಿ:
ಮೈಸೂರಿನಲ್ಲಿ ಪಂಚರತ್ನ ರಥಯಾತ್ರೆಯ ಬೃಹತ್ ಸಮಾರೋಪ ಸಮಾವೇಶಕ್ಕೆ ಸಿದ್ದತೆ
ಕೆರೆಗಳನ್ನು ತುಂಬಿಸುವ ಕೊಪ್ಪಳ ಏತ ನೀರಾವರಿ ಯೋಜನೆಯಲ್ಲಿ ನಮ್ಮ ಜಿಲ್ಲೆಯ ಕುಷ್ಟಗಿ, ಯಲಬುರ್ಗಾ, ಕನಕಗಿರಿ ಸ್ವಲ್ಪ ಭಾಗ ಕೊಪ್ಪಳ. ಗದಗ ಜಿಲ್ಲೆಯ ರೋಣ ತಾಲೂಕು, ಭಾಗಲಕೋಟೆ ಜಿಲ್ಲೆಯ ಹುನಗುಂದ ಬದಾಮಿ ಈ ರೀತಿ ಯೋಜನೆಯಲ್ಲಿ 12.08 ಟಿಎಂಸಿ ನೀರನ್ನು ಸರ್ಕಾರ ಹಂಚಿಕೆಗೆ ಅವಕಾಶ ಕಲ್ಪಿಸಿದೆ. 2013ರ ಆದೇಶದನ್ವಯ 1.12ಲಕ್ಷ ಹೆಕ್ಟೇರ್ ನೀರಾವರಿ ಅದರ ಜೊತೆಗೆ ಸದರಿ ಯೋಜನಾ ವ್ಯಾಪ್ತಿಯ ನೂರಕ್ಕೂ ಅಧಿಕ ಕೆರೆಗಳಿವೆ. ನಮ್ಮ ತಾಲೂಕಿಗೆ 17 ಕೆರೆಗಳು ಈ ಯೋಜನೆ ವ್ಯಾಪ್ತಿಯಲ್ಲಿದ್ದು ಪ್ರಪ್ರಥಮವಾಗಿ ಯಲಬುಣಚಿ ಕೆರೆ ಪ್ರಾಯೋಗೀಕವಾಗಿ ಚಾಲನೆ ನೀಡಲಾಗಿದೆ. ಇನ್ನುಳಿದ 16 ಕೆರೆಗಳಿಗೆ ಜಲಾಶಯದ ನೀರಿನ ಲಭ್ಯತೆ ಆಧರಿಸಿ ಕೆರೆ ತುಂಬಿಸುವ ಯೋಜನೆ ಇದೆ. ಈ ಯೋಜನೆಯ ಕೆರೆಯ ಲೋಕಾರ್ಪಣೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಮಾಡುವ ಹಿನ್ನೆಲೆಯಲ್ಲಿ ಅದರ ಅಂಗವಾಗಿ ಪ್ರಾಯೋಗೀಕವಾಗಿ ಮಾಡಲಾಗಿದೆ ಎಂದರು. ಈ ಯೋಜನೆ ಕೆರೆ ತುಂಬಿಸುದಷ್ಟೇ ಅಲ್ಲ ಇದರಿಂದ ತಾಲೂಕಿನಲ್ಲಿ 20ಸಾವಿರ ಎಕರೆಗೆ ನೀರಾವರಿ ಸಾದ್ಯವಾಗಲಿದೆ ಎಂದರು. ಈ ಯೋಜನೆ ಕಾರ್ಯಗತಗೊಳಿಸಿದ ಸಾಕಾರಗೊಳ್ಳಲು ಸರ್ಕಾರಕ್ಕೂ ಸಹಕರಿಸಿದ ರೈತ ಬಾಂಧವರಿಗೆ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.