ಬಾಗಲಕೋಟೆ: ಕೃಷ್ಣೆಗಾಗಿ ಉತ್ತರ ಕರ್ನಾಟಕದ ಏಳು ಜಿಲ್ಲೆಗಳ ಸಂತ್ರಸ್ತರು ಮತ್ತೆ ಕೂಗೆಬ್ಬಿಸಿದ್ದಾರೆ. ನಮ್ಮ ತಾಳ್ಮೆ ಪರೀಕ್ಷಿಸಬೇಡಿ. 3ನೇ ಹಂತದ ಯೋಜನೆ ತ್ವರಿತವಾಗಿ ಪೂರ್ಣಗೊಳಿಸಿ ಎಂಬ ಒಕ್ಕೊರಲಿನ ಹಕ್ಕೊತ್ತಾಯವನ್ನು ಯುಕೆಪಿ 3ನೇ ಹಂತದ ಯೋಜನೆ ತ್ವರಿತ ಜಾರಿಗಾಗಿ ಉತ್ತರ ಕರ್ನಾಟಕದ ಸ್ವಾಭಿಮಾನ ವೇದಿಕೆಯಿಂದ ನಡೆದ ಪಾದಯಾತ್ರೆ ಸಂದರ್ಭದಲ್ಲಿ ಮಂಡಿಸಲಾಯಿತು.
ಶನಿವಾರ ಬೆಳಗ್ಗೆ 8 ರಿಂದ ಸಂಜೆ 5ರವರೆಗೆ ಅನಗವಾಡಿ ಕ್ರಾಸ್‌ನಿಂದ ಟಕ್ಕಳಕಿ ಕ್ರಾಸ್‌ವರೆಗೂ ನಡೆದ 24 ಕಿ.ಮೀ ಉದ್ದದ ಪಾದಯಾತ್ರೆಯಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಜನರು ಭಾಗಿಯಾಗಿದ್ದರು. ರಸ್ತೆ ಸಂತ್ರಸ್ತರು, ಮಠಾಧೀಶರು, ರೈತರು, ಹೋರಾಟಗಾರರಿಂದ ತುಂಬಿತ್ತು. ಸುಮಾರು ಒಂದು ಕಿ.ಮೀ.ವರೆಗೂ ಜನಜಂಗುಳಿ ಕಾಣುತ್ತಿತ್ತು. ಹೆದ್ದಾರಿಯಲ್ಲಿ ಎಲ್ಲಿ ನೋಡಿದರಲ್ಲಿ ಜನ, ಕೃಷ್ಣಾ ತೀರದ ಸಂತ್ರಸ್ತರು ಕಂಡು ಬಂದರು.
ನಾಡಿನ ವಿವಿಧ 20ಕ್ಕೂ ಹೆಚ್ಚು ಮಠಾಧೀಶರು ಪಾದಯಾತ್ರೆಗೆ ಚಾಲನೆ ನೀಡಿದರು. ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ ನೇತೃತ್ವದಲ್ಲಿ ಈ ಪಾದಯಾತ್ರೆ ನಡೆಯಿತಾದರೂ ಇದೊಂದು ಪಕ್ಷಾತೀತ-ಧರ್ಮಾತೀತ, ಜಾತ್ಯತೀತ ಪಾದಯಾತ್ರೆ ಎಂದು ಘೋಷಿಸಲಾಯಿತು.
ಗದಗ ತೋಂಟದಾರ್ಯಮಠದ ಜಗದ್ಗುರು ಸಿದ್ದರಾಮ ಸ್ವಾಮೀಜಿ, ಇಳಕಲ್ ಮಹಾಂತಮಠದ ಶ್ರೀ ಗುರುಮಹಾಂತ ಸ್ವಾಮೀಜಿ, ಶಿರೂರಿನ ವಿಜಯಮಹಾಂತ ತೀರ್ಥದ ಡಾ|ಬಸವಲಿಂಗ ಸ್ವಾಮೀಜಿ, ಬೋವಿ ಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸೇರಿದಂತೆ 20ಕ್ಕೂ ಹೆಚ್ಚು ಮಠಾಧೀಶರು ಭಾಗಿಯಾಗಿ ಸಂತ್ರಸ್ತರ ಸ್ವಾಭಿಮಾನದ ಹೋರಾಟಕ್ಕೆ ಧ್ವನಿಯಾದರು.
ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಗದಗ ತೋಂಟದಾರ್ಯಮಠದ ಜಗದ್ಗುರು ಸಿದ್ಧರಾಮ ಸ್ವಾಮೀಜಿ, ಯಾವುದೇ ಸರ್ಕಾರ ಇರಲಿ, ಆಲಮಟ್ಟಿ ಹಿನ್ನೀರಿನಿಂದ ಮನೆ-ಮಠ ಕಳೆದುಕೊಂಡ ರೈತರಿಗೆ ಯೋಗ್ಯ ಪರಿಹಾರ ನೀಡಬೇಕು. ಜನರ ರಕ್ಷಣೆಗೆ ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು. ರೈತರು ಸತ್ಯಾಗ್ರಹ ಮಾಡುವ ಮೂಲಕ ತಮ್ಮ ಪಾಲಿನ ಹಕ್ಕು ಪಡೆಯಬೇಕು. ಈ ಭಾಗದ ಜನರ ಸಮಸ್ಯೆ ಸತ್ಯಾಗ್ರಹ ಮಾಡಿಯೇ ತೀರಬೇಕಿದೆ. ರೈತರಿಗಾದ ಅನ್ಯಾಯ ವಿರುದ್ಧ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಬೇಕು. ಸರ್ಕಾರ ಬಹಳ ಮಹತ್ವದಲ್ಲ. ಈ ಭಾಗದ ರೈತರು ಸತ್ಯ ಅನ್ನುವ ಅಸ್ತ್ರ ಇಟ್ಟುಕೊಂಡು ಹೋರಾಟ ಮಾಡಬೇಕು. ಇಂದು ಗಾಂಧಿ ಜಯಂತಿ, ಧರ್ಮಾತೀತ ಹೋರಾಟ ಮಾಡಿದ್ರೆ ಸರ್ಕಾರ ಕಣ್ಣು ತೆರೆಯುತ್ತದೆ ಎಂದರು.