Advertisement

ಕೃಷ್ಣ ಬೆಂಬಲಿಗರ ರಾಜೀನಾಮೆ ಪರ್ವ ಆರಂಭ

03:45 AM Feb 01, 2017 | Team Udayavani |

ಮಂಡ್ಯ: ಕಾಂಗ್ರೆಸ್‌ ಪಕ್ಷವನ್ನು ಮಾಜಿ ಸಿಎಂ ಎಸ್‌.ಎಂ.ಕೃಷ್ಣ ತೊರೆದ ಬೆನ್ನಲ್ಲೇ ಅವರ ಬೆಂಬಲಿಗರ ರಾಜೀನಾಮೆ ಪರ್ವ ಆರಂಭವಾಗಿದೆ.

Advertisement

 ಕೆಪಿಸಿಸಿ ಸದಸ್ಯರಾದ ರವೀಂದ್ರ ಶ್ರೀಕಂಠಯ್ಯ, ಕೃಷ್ಣ ಸಹೋದರನ ಪುತ್ರ ಎಸ್‌.ಗುರುಚರಣ್‌, ಮದ್ದೂರು ಬ್ಲಾಕ್‌
ಕಾಂಗ್ರೆಸ್‌ ಅಧ್ಯಕ್ಷ ಕದಲೂರು ರಾಮಕೃಷ್ಣ, ಸ್ಥಳೀಯ ಸಂಸ್ಥೆಗಳ ಸದಸ್ಯರು ಸೇರಿ 20ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ರವೀಂದ್ರ ಶ್ರೀಕಂಠಯ್ಯ, ತಾಪಂನ ಸದಸ್ಯರಾದ ಟಿ.ಎಂ.ದೇವೇಗೌಡ, ಕೋಮಲ, ಉಮೇಶ್‌, ಭವ್ಯಹರ್ಷ, ಭಾರತಿ, ಸರಸ್ವತಿ ಸೇರಿದಂತೆ ಬಳ್ಳೇಕೆರೆ ಗ್ರಾಪಂನ 7 ಜನ ಸದಸ್ಯರು ಮಂಗಳವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಇದೇ ವೇಳೆ ಮದ್ದೂರಿನ ಮುಖಂಡರಾದ ಗುರುಚರಣ್‌, ಕದಲೂರು ರಾಮಕೃಷ್ಣ ತಮ್ಮ ರಾಜೀನಾಮೆಯನ್ನು ಫ್ಯಾಕ್ಸ್‌ ಮೂಲಕ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ಗೆ ರವಾನಿಸಿದರು. ಬಳಿಕ ಗುರುಚರಣ್‌ ನೇತೃತ್ವದಲ್ಲಿ ಎಸ್‌.ಎಂ.ಕೃಷ್ಣ ಬೆಂಬಲಿಗರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಸಭೆ ನಡೆಯಿತು. ನೂರಕ್ಕೂ ಹೆಚ್ಚು ಜನ ಸೇರಿದ್ದ ಸಭೆಯಲ್ಲಿ ಕೃಷ್ಣ ಅವರ ರಾಜೀನಾಮೆ ಬೆಂಬಲಿಸಿ ತಾವೂ ರಾಜೀನಾಮೆ ನೀಡಲು ನಿರ್ಧರಿಸಿದರು.

ಬಿಜೆಪಿಯತ್ತ ಕೃಷ್ಣ ಒಲವು
ಮಂಡ್ಯ: ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿರುವ ಎಸ್‌.ಎಂ.ಕೃಷ್ಣ ಅವರು ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಕೃಷ್ಣ ಸಹೋದರ ಎಸ್‌.ಎಂ.ಶಂಕರ್‌ ಪುತ್ರ ಎಸ್‌.ಗುರುಚರಣ್‌ ಸುಳಿವು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸೇರುವ ಬಗ್ಗೆ ಈಗಾಗಲೇ ಒಂದು ಹಂತದ ಮಾತುಕತೆ ಪೂರ್ಣಗೊಂಡಿದೆ. ಜೆಡಿಎಸ್‌ ಪ್ರಾದೇಶಿಕ ಪಕ್ಷವಾಗಿರುವುದರಿಂದ ಆ ಪಕ್ಷ ಸೇರುವ ಬಗ್ಗೆ ಅವರಿಗೆ ಒಲವಿಲ್ಲ. ಕೃಷ್ಣ ರಾಷ್ಟ್ರೀಯ ನಾಯಕರು. ಅವರು ಸುದೀರ್ಘ‌ ಅವಧಿಯವರೆಗೆ ರಾಷ್ಟ್ರೀಯ ಪಕ್ಷಗಳಲ್ಲಿದ್ದವರು. ಅದಕ್ಕಾಗಿ ಬಿಜೆಪಿ ಬಗ್ಗೆ ಒಲವು ತೋರಿದ್ದಾರೆಂದರು. ಕೃಷ್ಣ ಬಿಜೆಪಿ ಸೇರುವುದಾದರೆ ತಾವು ಮದ್ದೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತೇನೆ ಎಂದು ತಿಳಿಸಿದರು. 

ಎಸ್‌ಎಂಕೆ ಭೇಟಿ ಮಾಡಿದ ರಾಜಕೀಯ ನಾಯಕರು
ಬೆಂಗಳೂರು:
ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಕೃಷ್ಣ ರಾಜಿನಾಮೆ ನೀಡಿದ ಬೆನ್ನಲ್ಲೇ ರಾಜಕೀಯ ನಾಯಕರು
ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸುತ್ತಿರುವುದು ಮುಂದುವ ರಿದಿದೆ. ಈ ಮಧ್ಯೆ, ಕೃಷ್ಣ ಅವರ ನಿವಾಸಕ್ಕೆ ಜೆಡಿಎಸ್‌ನಿಂದ ಅಮಾನತುಗೊಂಡ ಶಾಸಕರು ಭೇಟಿ ನೀಡಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.

Advertisement

ಮಾಜಿ ಸಚಿವ ಚಲುವರಾಯಸ್ವಾಮಿ, ಜಮೀರ್‌ ಅಹಮದ್‌, ಶಾಸಕ ಮಾಗಡಿ ಬಾಲಕೃಷ್ಣ, ವಿಧಾನಪರಿಷತ್‌ ಸದಸ್ಯ ಪುಟ್ಟಣ್ಣ ಅವರು ಮಂಗಳವಾರ ಸದಾಶಿವನಗರದ ಕೃಷ್ಣ ನಿವಾಸಕ್ಕೆ ಭೇಟಿ ನೀಡಿ ಕೆಲಹೊತ್ತು ಚರ್ಚಿಸಿದರು.

 ಈ ಸಂದರ್ಭ ಸುದ್ದಿಗಾರರ ಜತೆ ಮಾತನಾಡಿದ ಚೆಲುವರಾಯಸ್ವಾಮಿ, ಇದೊಂದು ಸೌಜನ್ಯ ಭೇಟಿ. ಎಸ್‌. ಎಂ.ಕೃಷ್ಣ, ಎಚ್‌.ಡಿ. ದೇವೇಗೌಡರು ರಾಷ್ಟ್ರಮಟ್ಟದ ಮುತ್ಸದ್ಧಿ ರಾಜಕಾರಣಿಗಳು. ಅವರು ನಮಗೆಲ್ಲಾ ಮಾದರಿ. ಜತೆಗೆ ಕೃಷ್ಣ
ಅವರು ನಮ್ಮ ಮಂಡ್ಯ ಜಿಲ್ಲೆಯವರು. ನಾನು ಅದೇ ಜಿಲ್ಲೆಯವನಾಗಿ ಅವರನ್ನು ಭೇಟಿ ಮಾಡಿದ್ದೆ ಎಂದು ಹೇಳಿದರು. ಜಮೀರ್‌ ಅಹಮದ್‌, ಹಿರಿಯ ನಾಯಕರಾದ ಎಸ್‌.ಎಂ.ಕೃಷ್ಣ ಅವರನ್ನು ಭೇಟಿಯಾಗಿ ಮಾತನಾಡಿದೆವು. ಇದು
ರಾಜಕೀಯ ಭೇಟಿಯಾಗಿರಲಿಲ್ಲ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವೂ ಇಲ್ಲ ಎಂದು ತಿಳಿಸಿದರು.

ನಾಯಕರ ದಂಡು:
ಎಸ್‌.ಎಂ.ಕೃಷ್ಣ ನಿವಾಸ ಮಂಗಳವಾರ ವಿವಿಧ ಪಕ್ಷಗಳ ನಾಯಕರಿಂದ ತುಂಬಿತ್ತು. ಇತ್ತೀಚೆಗಷ್ಟೇ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವ ವಿ.ಶ್ರೀನಿವಾಸಪ್ರಸಾದ್‌, ಈ ಹಿಂದೆ ಕಾಂಗ್ರೆಸ್‌ನಲ್ಲೇ ಇದ್ದು ಇದೀಗ ಬಿಜೆಪಿಯಲ್ಲಿರುವ ಮಾಜಿ ಸಂಸದ
ಜಿ.ಎಸ್‌.ಬಸವರಾಜು ಹಾಗೂ ಬಿಜೆಪಿ ನಾಯಕ ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌ ಸೇರಿ ಹಲವು ನಾಯಕರು ಭೇಟಿ ಮಾಡಿ ಚರ್ಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಶ್ರೀನಿವಾಸ್‌ ಪ್ರಸಾದ್‌, ನಾನು ಕಾಂಗ್ರೆಸ್‌ಗೆ ರಾಜಿನಾಮೆ ಕೊಡುವಾಗ
ಅವರ ಜತೆ ಮಾತನಾಡಿದ್ದೆ. ಈಗ ಅವರೂ ಕಾಂಗ್ರೆಸ್‌ ತ್ಯಜಿಸಿದ್ದಾರೆ. ಬಿಜೆಪಿಗೆ ಬರುವಂತೆ ಕೇಳಿಕೊಂಡಿಲ್ಲ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next