Advertisement

ಡಾ.ರಾಜ್‌ ಬಿಡುಗಡೆಗಾಗಿ ವೀರಪ್ಪನ್‌ ಜತೆ ಕೃಷ್ಣ ಸಂಧಾನ

06:00 AM Aug 14, 2018 | |

ಬೆಂಗಳೂರು: ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಿರಿಯ ರಾಜಕಾರಣಿ ಎಸ್‌.ಎಂ.ಕೃಷ್ಣ ಅವರ ಜೀವನ ಚರಿತ್ರೆ ಸದ್ದಿಲ್ಲದೆ ಪುಸ್ತಕವಾಗುತ್ತಿದ್ದು, ವರನಟ ಡಾ.ರಾಜ್‌ ಅಪಹರಣ ಸಂದರ್ಭದಲ್ಲಿ ನಡೆದ ರಾಜಿ ಸಂಧಾನ, ರಾಜಕಾರಣದ  ಹಾವು-ಏಣಿ ಆಟದ ಮಜಲುಗಳು ಒಳಗೊಂಡಿರಲಿದೆ.

Advertisement

ಎಸ್‌.ಎಂ.ಕೃಷ್ಣ ಅವರ ಐದು ದಶಕಕ್ಕೂ ಹೆಚ್ಚಿನ ರಾಜಕಾರಣದ ಏಳು-ಬೀಳು, ಒಳ ನೋಟಗಳು, ತೆರೆಮರೆಯ ಹಿಂದಿನ ಕೆಲವು ರಹಸ್ಯಗಳು ಜೀವನಚರಿತ್ರೆಯಲ್ಲಿ ಇರಲಿದ್ದು ರಾಜಕೀಯ ಸಂಚಲನ ಮೂಡಿಸುವುದು ಖಚಿತ.

700 ಪುಟಗಳ  ಈ ಕೃತಿಯಲ್ಲಿ ರಾಜ್‌ಕುಮಾರ್‌ ಅಪಹರಣ ಸಂದರ್ಭದಲ್ಲಿ ನಡೆದ ವಿದ್ಯಮಾನಗಳು, ವೀರಪ್ಪನ್‌ ಮತ್ತು ಸರ್ಕಾರದ ನಡುವಿನ ಶರತ್ತುಗಳ ಧ್ವನಿಮುದ್ರಿಕೆಗಳ ವಿನಿಮಯ,ಆಂತರಿಕವಾಗಿ ನಡೆದ ಮಾತುಕತೆಯ ರಹಸ್ಯಗಳೇನಿರಬಹುದು ಎಂಬ ಕುತೂಹಲವೂ ಇದೆ.

ಎಸ್‌.ಎಂ.ಕೃಷ್ಣ ಅವರು ಮಹಾರಾಷ್ಟ್ರ ರಾಜ್ಯಪಾಲರಾದ ನಂತರ ಜೀವನ ಚರಿತ್ರೆ ಬರೆಯಲು ಚಾಲನೆ ದೊರೆತಿತ್ತು. ಈಗ ಅಂದರೆ ಸುಮಾರು 13 ವರ್ಷಗಳಷ್ಟು ಸುದೀರ್ಘ‌ ಕಾಲದ ನಂತರ ಸಿದ್ಧಗೊಂಡಿರುವ ಈ ಕೃತಿಗೆ  ಯಾವ ಶೀರ್ಷಿಕೆ ನೀಡಬೇಕು ಎಂಬ ಚರ್ಚೆ ನಡೆಯುತ್ತಿದ್ದು  ಸೆಪ್ಟೆಂಬರ್‌ನಲ್ಲಿ ಬಿಡುಗಡೆಗೆ ಮಹೂರ್ತ ನಿಗದಿಯಾಗಿದೆ.

1962 ರಲ್ಲಿ ಪ್ರಜಾ ಸೋಷಲಿಸ್ಟ್‌ ಪಕ್ಷದಿಂದ ವಿಧಾನಸಭೆಗೆ ಪ್ರವೇಶಿಸಿ, ನಂತರ 1967 ರಲ್ಲಿ ಸೋಲು ಅನುಭವಿಸಿ, 1968 ರಲ್ಲಿ ಲೋಕಸಭೆ  ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿ, ನಂತರ ರಾಜಕಾರಣದಲ್ಲಿ ಸುದೀರ್ಘ‌ ಕಾಲ ಕಾಂಗ್ರೆಸ್‌ನ ಪಯಣ ಹಾಗೂ  ಆ ನಂತರ ಬಿಜೆಪಿ ಸೇರ್ಪಡೆಯ ಅನಿವಾರ್ಯತೆ ಸೇರಿದಂತೆ  ಇದುವರೆಗಿನ ಘಟನಾವಳಿಗಳು ಇರಲಿವೆ. ರಾಜ್ಯ ವಿಧಾನಸಭೆ -ವಿಧಾನಪರಿಷತ್‌ ಹಾಗೂ ಲೋಕಸಭೆ ಹಾಗೂ ರಾಜ್ಯಸಭೆ ನಾಲ್ಕೂ ಸದನಗಳಲ್ಲಿ ಕೆಲಸ ಮಾಡಿರುವ ಕೆಲವೇ ಮಂದಿ ರಾಜಕಾರಣಿಗಳಲ್ಲಿ ಒಬ್ಬರಾದ; ಸ್ಪೀಕರ್‌, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ,  ರಾಜ್ಯಪಾಲ, ಮಹತ್ವದ ಖಾತೆಯಾದ ವಿದೇಶಾಂಗ ಸಚಿವ ಹುದ್ದೆವರೆಗೂ ಏರಿದ ಎಸ್‌.ಎಂ.ಕೃಷ್ಣ ಐದುದಶಕಗಳಿಗೂ ಮಿಗಿಲಾದ ತನ್ನ ರಾಜಕೀಯ ಚಿತ್ರಣವನ್ನು ಉಣಬಡಿಸಲಿದ್ದಾರೆ. ಜತೆಗೆ ನೆಚ್ಚಿನ ಟೆನ್ನಿಸ್‌ ಆಟ, ಸಂಗೀತ ಸೇರಿದಂತೆ ಅಭಿರುಚಿ, ಹವ್ಯಾಸ, ವೈಯಕ್ತಿಕ ಜೀವನ ಎಲ್ಲವನ್ನೂ ಜೀವನಚರಿತ್ರೆಯಲ್ಲಿ ದಾಖಲು ಮಾಡಿದ್ದಾರೆ. ವಿದ್ವಾನ್‌ ಪಾವಗಡ ಪ್ರಕಾಶ್‌ರಾವ್‌ ಅವರು ಎಸ್‌.ಎಂ.ಕೃಷ್ಣ ಅವರ ಜೀವನಚರಿತ್ರೆ ಬರೆದಿದ್ದಾರೆ.

Advertisement

ವಿವಾದವೂ ಆಗಬಹುದು
ಜೀವನಚರಿತ್ರೆ ಸಿದ್ಧವಾಗಿರುವ ಬಗ್ಗೆ  ಉದಯವಾಣಿಗೆ ಖಚಿತಪಡಿಸಿದ ಎಸ್‌.ಎಂ.ಕೃಷ್ಣ  , ತಮ್ಮ ಬಾಲ್ಯ, ವಿದ್ಯಾಭ್ಯಾಸ, ರಾಜಕೀಯ ಜೀವನ ಎಲ್ಲವನ್ನೂ ಜೀವನಚರಿತ್ರೆಯಲ್ಲಿ ದಾಖಲಿಸಲಾಗಿದೆ. ಡಾ.ರಾಜ್‌ಕುಮಾರ್‌ ಅಪಹರಣ ಪ್ರಕರಣವಂತೂ ನಾನು ಮರೆಯಲು ಸಾಧ್ಯವೇ ಇಲ್ಲ. ಆಗ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿಯವರು ನೀಡಿದ ಸಹಕಾರ ನಾನು ಮರೆಯುವಂತಿಲ್ಲ.  ಕಾವೇರಿ ವಿಚಾರದಲ್ಲೂ ಅವರು ಮಾನವೀಯತೆಯಿಂದಲೇ ಪರಿಗಣಿಸುತ್ತಿದ್ದರು. ನನ್ನ ಜೀವನಚರಿತ್ರೆಯಲ್ಲಿ ಅದು ಪ್ರಮುಖವಾಗಿ ದಾಖಲಾಗಿದೆ ಎಂದು ತಿಳಿಸಿದ್ದಾರೆ.

2001, ಜುಲೈ 29 ರಾತ್ರಿ 7.30 ಪಾರ್ವತಮ್ಮ ಅವರು ನನಗೆ ಕರೆ ಮಾಡಿದರು. ಆಗ ನಾನು ಅನುಗ್ರಹದಲ್ಲಿದ್ದೆ. ರಾಜ್‌ಕುಮಾರ್‌ ಅವರನ್ನು ವೀರಪ್ಪನ್‌ ಕರೆದುಕೊಂಡ ಹೋದ ಎಂದು ಹೇಳಿದರು. ನನಗೆ ಆಘಾತವಾಯಿತು. ಎಲ್ಲಿಗೆ ಕರೆದುಕೊಂಡ ಹೋದ ಎಂದು ಕೇಳಿದೆ. ಪಾರ್ವತಮ್ಮ ಅವರು ಗೊತ್ತಿಲ್ಲ, ಬಂದೂಕುಧಾರಿಗಳ ಜತೆ ಬಂದು ನನ್ನ ಜತೆ ಬರಬೇಕು ಎಂದರು, ರಾಜ್‌ಕುಮಾರ್‌ ಅವರು ಆಯ್ತು ನಡೀರಪ್ಪ ಎಂದು ಹೋದರು ಎಂದು ವಿವರಿಸಿದರು. ನನಗೆ ಏನು ಮಾಡುವುದು ಎಂಬ ಚಿಂತೆ ಪ್ರಾರಂಭವಾಯಿತು.

ಆಗ ಸರ್ಕಾರಕ್ಕೂ ರಾಜ್‌ಕುಮಾರ್‌ ಕುಟುಂಬಕ್ಕೂ ಒಪ್ಪಂದ ಆಗಿತ್ತು. ರಾಜ್‌ಕುಮಾರ್‌ ಗಾಜನೂರಿಗೆ  ಹೋಗುತ್ತಾರೆ ಎಂದಾಗ ಮಾಹಿತಿ ನೀಡಬೇಕಿತ್ತು. ನಾವು ಭದ್ರತೆ ಕೊಡುತ್ತಿದ್ದೆವು. ಆದರೆ, ಅಂದು ರಾಜ್‌ಕುಮಾರ್‌ ನಮಗೆ ತಿಳಿಸಿರಲಿಲ್ಲ. ಅದೇ ಸಂದರ್ಭ ನೋಡಿಕೊಂಡು ವೀರಪ್ಪನ್‌ ಆಪಹರಿಸಿದ್ದ,ಎಂದು ಕೃಷ್ಣ ವಿವರಿಸಿದರು.

ಪಾರ್ವತಮ್ಮ ರಾಜ್‌ಕುಮಾರ್‌ ಅವರ ಕರೆ ಬಂದ ತಕ್ಷಣ ನನಗೆ ತಕ್ಷಣ ನೆನಪಾಗಿದ್ದು ಕರುಣಾನಿಧಿ. ನಡುರಾತ್ರಿ ಅವರಿಗೆ ಸಂದೇಶ ರವಾನಿಸಿ ಚೆನ್ನೈಗೆ ಬರುವುದಾಗಿ ತಿಳಿಸಿದೆ.  ಮರುದಿನ ಬೆಳಗ್ಗೆ 6.30 ಕ್ಕೆ ಸಂದೇಶ ಕಳುಹಿಸಿ ನೀವು ಬನ್ನಿ ಸಚಿವಾಲಯದಲ್ಲಿ ಭೇಟಿ ಆಗೋಣ ಎಂದರು. ನಾನು ಚೆನ್ನೈಗೆ ಹೋದಾಗ ದೊರೈ ಮುರುಗನ್‌ ಸೇರಿ ಇಬ್ಬರು ಸಚಿವರು ಬಂದು ಕರೆದೊಯ್ದರು. ನಾನು ಕರುಣಾನಿಧಿ ಅವರನ್ನು ಭೇಟಿ ಮಾಡಿ ರಾಜ್‌ಕುಮಾರ್‌ ಅವರು ದೊಡ್ಡ ನಟರು, ಜನಪ್ರಿಯರು, ದಯವಿಟ್ಟು ಅವರಿಗೆ ಅಪಾಯ ಆಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದೆ. ವೀರಪ್ಪನ್‌ ಜತೆ ಸಂಧಾನ ನಡೆಸಲು ಯಾರಾದರೂ ಹುಡುಕಲು ಕೋರಿದೆ. ಆಗ,ಸ್ವಲ್ಪ ಕಾಲಾವಕಾಶ ಕೋರಿದರು. ನಾನು ವಾಪಸ್‌ ಆಗಿ ಮರು ದಿನ ಮತ್ತೆ ಚೆನ್ನೈಗೆ ಹೋದೆ. ಆಗ ನಕ್ಕೀರನ್‌ ಗೋಪಾಲ್‌ ಅವರು ಸಂಧಾನಕಾರರಾಗಿ ಹೋಗಲಿದ್ದಾರೆ ಎಂಬ ಮಾಹಿತಿ ನೀಡಿದರು. ಆ ನಂತರ ನಡುಮಾರನ್‌, ಕೊಳತ್ತೂರು ಮಣಿ ಹೀಗೆ ವೀರಪ್ಪನ್‌ಗೆ ಪರಿಚಯವಿದ್ದವರನ್ನೆಲ್ಲಾ ಸಂಧಾನಕಾರರಾಗಿ ಕಳುಹಿಸಿದೆವು. ಕ್ಯಾಸೆಟ್‌ ಮೂಲಕ ಸಂದೇಶ ಬರುತ್ತಿತ್ತು. ಆದರೆ, ವೀರಪ್ಪನ್‌ ಆಗ ನಮ್ಮ ಮುಂದೆ ಇಟ್ಟಿದ್ದ 10 ಷರತ್ತುಗಳನ್ನು  ಈಡೇರಿಸಲು ಸಾಧ್ಯವೇ ಇರಲಿಲ್ಲ. ದೊಡ್ಡ ಮೊತ್ತ ಹಣ, ವೆಲ್ಲೂರು ಜೈಲಿನಲ್ಲಿದ್ದ 36 ಮಂದಿ ಸಹಚರರ ಬಿಡುಗಡೆ, ಕರ್ನಾಟಕದ ಎಲ್ಲ ಕನ್ನಡ ಶಾಲೆಗಳಲ್ಲೂ ತಮಿಳು ಮಾಧ್ಯಮ ಪ್ರಾರಂಭ ಹೀಗೆ ಷರತ್ತು ವಿಧಿಸಲಾಗಿತ್ತು, ಎಂದು ಘಟನಾವಳಿಗಳನ್ನು ಮೆಲುಕು ಹಾಕಿದರು.

ಒಮ್ಮೆ ವೀರಪ್ಪನ್‌ನನ್ನು ದೂರವಾಣಿ ಮೂಲಕ ಮಾತನಾಡಿ ರಾಜ್‌ಕುಮಾರ್‌ ಅವರನ್ನು ಬಿಟ್ಟುಬಿಡಿ ಎಂದಾಗಲೂ ನಾನು ಬಿಡುವುದಿಲ್ಲ. ನನ್ನ ಷರತ್ತು ಏನು ಮಾಡಿದಿರಿ ಎಂದು ಕೇಳಿದ. ಅದಕ್ಕೆ ಸಂಪುಟದಲ್ಲಿ ಪರಿಶೀಲನೆಯಲ್ಲಿದೆ ಎಂದು ಹೇಳಿದೆ. ಪೊಲೀಸ್‌ ಅಧಿಕಾರಿಯಾಗಿದ್ದ ಕೆ.ಆರ್‌.ಶ್ರೀನಿವಾಸನ್‌ ಅವರಂತೂ ವೀರಪ್ಪನ್‌ನಿಂದ ರಾಜ್‌ಕುಮಾರ್‌ ಅವರನ್ನು ಬಿಡಿಸಿ ತರಲು ಸಾಕಷ್ಟು ಶ್ರಮ ಹಾಕಿದ್ದರು.  ಒಮ್ಮೆ ನಾಗಪ್ಪ ಮಾರಡ‌ಗಿ ತಪ್ಪಿಸಿಕೊಂಡು ಬಂದ ನಂತರ ಆ ಕೋಪಕ್ಕೆ ರಾಜ್‌ಕುಮಾರ್‌ ಅವರಿಗೆ ಏನಾದರೂ ಆಗುತ್ತದೆಯೇನೋ ಎಂಬ ಆತಂಕವೂ ಇತ್ತು. ಏಕೆಂದರೆ ಅಂದು ರಾಜ್‌ಕುಮಾರ್‌ ಅವರು ಅಡ್ಡ ಬರದಿದ್ದರೆ ವೀರಪ್ಪನ್‌ನನ್ನು ಹತ್ಯೆ ಮಾಡಲು ನಾಗಪ್ಪ ಮಾಡರಗಿ ಹೋಗಿದ್ದರು. ಸಾಕಷ್ಟು ಪ್ರಯತ್ನದ ನಂತರ ರಾಜ್‌ಕುಮಾರ್‌ ಬಿಡುಗಡೆಯಾಯಿತು ಎಂದು ಕೃಷ್ಣ ಅವರು ಆಗಿನ ಘಟನೆಗಳನ್ನು ಸ್ಮರಿಸಿದರು.

ದಯಚೇಸಿ ವಿಡಿಂಗೋ ವೀರಪ್ಪನ್‌…… 
ವರನಟ ಡಾ.ರಾಜ್‌ಕುಮಾರ್‌ ಅಪಹರಣ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್‌.ಎಂ.ಕೃಷ್ಣ ಅವರು ಒಮ್ಮೆ ನೇರವಾಗಿ ವೀರಪ್ಪನ್‌ ಜತೆ ದೂರವಾಣಿ ಮೂಲಕ ಮಾತನಾಡಿದ್ದರು. ರಾಜ್‌ಕುಮಾರ್‌ ಅವರ ಬಿಡುಗಡೆಗೆ ನಕ್ಕೀರನ್‌ ಗೋಪಾಲ್‌, ನೆಡುಮಾರನ್‌, ಕೊಳತ್ತೂರು ಮಣಿ ಮೂಲ ಸಂಧಾನ ಸೇರಿದಂತೆ ಸಾಕಷಟು ಪ್ರಯತ್ನ ಪಟ್ಟಿದ್ದ ಎಸ್‌.ಎಂ.ಕೃಷ್ಣ ಅವರು ಒಮ್ಮೆ ನೇರವಾಗಿ ವೀರಪ್ಪನ್‌ ಜತೆಯೇ ಮಾತನಾಡಿ ಮನವಿ ಮಾಡಿದ್ದರು. ತಮಗೆ ಗೊತ್ತಿದ್ದ ತಮಿಳಿನಲ್ಲೇ ವಣಕ್ಕಂ, ದಯಚೇಸಿ ರಾಜ್‌ಕುಮಾರ್‌  ವಿಡಿಂಗೋ ವೀರಪ್ಪನ್‌ ಎಂದು ಹೇಳಿದ್ದರು. ಅದಕ್ಕೆ ವೀರಪ್ಪನ್‌, ನಾ ಉಡಮಾಟ್ಟೆ, ಎನ್ನ ಷರತ್ತು  ಒತ್ತುಕೊಂಗೋ ಎಂದು ಹೇಳಿದ್ದರಂತೆ. ಈ ಎಲ್ಲ ವಿಷಯಗಳೂ ಜೀವನಚರಿತ್ರೆಯಲ್ಲಿ ದಾಖಲಾಗಿವೆ.

ಅಣ್ಣಾದೊರೈ ಸಹಕಾರ 
ಸರಿ ಸುಮಾರು 1967 ರಲ್ಲಿ ಮದ್ದೂರಿನಲ್ಲಿ ವಿಧಾನಸಭೆ ಚುನಾವಣೆ ಸೋತಿದ್ದ ಎಸ್‌.ಎಂ.ಕೃಷ್ಣ ಅವರು ತೀವ್ರ ನಿರಾಶರಾಗಿದ್ದಾಗ 1968 ರಲ್ಲಿ  ಎದುರಾದ ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಗೆ ಶಿವಪ್ಪ, ಗೋಪಾಲಗೌಡ, ಸಿದ್ದವೀರಪ್ಪ, ಸಾಹುಕಾರ್‌ ಚೆನ್ನಯ್ಯ ಅವರ ಒತ್ತಾಯದ ಮೇರೆಗೆ ಮತ್ತೆ ಪ್ರಜಾ ಸೋಷಲಿಸ್ಟ್‌ ಪಕ್ಷದಿಂದ ಎಸ್‌.ಎಂ.ಕೃಷ್ಣ  ಸ್ಪರ್ಧೆ ಮಾಡಿ ಆರು ಜನ ಕಾಂಗ್ರೆಸ್‌ ಹಾಗೂ ಇಬ್ಬರು ಪಕ್ಷೇತರ ಶಾಸಕರಿದ್ದರೂ ಸಂಸದರಾಗಿ ಆಯ್ಕೆಯಾಗಿದ್ದು , ಡಿಎಂಕೆ ನಾಯಕ ಅಣ್ಣಾದೊರೈ ಅವರ ಸೂಚನೆ ಮೇರೆಗೆ ಮತಿ ಅಳಗನ್‌, ನಂಜಿಲ್‌ ಮನೋಹರನ್‌ ಅವರು ತಮ್ಮ ಪರವಾಗಿ ಪ್ರಚಾರ ಮಾಡಿದ್ದು, ತಮಿಳಿನಲ್ಲೇ ಭಾಷಣ ಮಾಡಿ ಎಂದು ಆಗ ಜನರು ಒತ್ತಾಯಿಸಿದ್ದು  ಪ್ರಚಾರ ಸಭೆಗೆ ಸೇರುತ್ತಿದ್ದ ಜನಸಮೂಹ ನೋಡಿ ಪುಳಕಿತಗೊಂಡು ನಾನು ಗೆಲ್ಲುತ್ತೇನೆ ಎಂದು ಆತ್ಮವಿಶ್ವಾಸ ತಂದುಕೊಂಡ ಅಪರೂಪದ ಪ್ರಸಂಗಗಳು ಜೀವನಚರಿತ್ರೆಯಲ್ಲಿ ದಾಖಲಾಗಿವೆ.

– ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next