ಬೆಂಗಳೂರು: ಸಿಲಿಕಾನ್ ಸಿಟಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಸಿದ್ಧಗೊಂಡಿದೆ. ಮಣಿಗಳ ಕಿರೀಟ, ಬಣ್ಣದ ಬಣ್ಣದ ಟಿಕ್ಕಿಗಳ ಕಿರೀಟ, ಸಂಪೂರ್ಣ ನವಿಲುಗರಿಯಲ್ಲಿ ಆದಂತಹ ಕಿರೀಟ, ಚುಮ್ಕಿ ಹಾಗೂ ಪುಟ್ಟ ಕನ್ನಡಿಗಳಲ್ಲಿ ಮಾಡಿದ ಕಿರೀಟ, ಬಣ್ಣ ಬಣ್ಣದ ಕೊಳಲುಗಳು, ಮಣಿಗಳಿಂದ ಮಾಡಿದ ವೇಷ ಹೀಗೆ ನಾನಾ ರೀತಿಯಲ್ಲಿ ಕೃಷ್ಣನ ವೇಷ ಭೂಷಣ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಭಾನುವಾರ ಮತ್ತು ಸೋಮವಾರ ಎರಡು ದಿನ ಆಚರಿಸುವ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ರಾಧಾ-ಕೃಷ್ಣ, ರುಕ್ಮಿಣಿ-ಕೃಷ್ಣನ ವೇಷಭೂಷಣಗಳಿಗೆ ಬೇಡಿಕೆ ಹೆಚ್ಚಿದ್ದು, ತರಹೇವಾರಿ ರೀತಿಯ ಅಲಂಕಾರಿಕ ವಸ್ತುಗಳು ಮಾರುಕಟ್ಟೆಗೆ ಬಂದಿವೆ.
ಇಸ್ಕಾನ್‌ನಲ್ಲಿ ಸಿದ್ಧತೆ: ಜನ್ಮಾಷ್ಟಮಿ ಅಂಗವಾಗಿ ಇಸ್ಕಾನ್‌ನಲ್ಲಿ ಶುಕ್ರವಾರ ರಾಧಾ ಕೃಷ್ಣ ವೇಷಭೂಷಣ ಸ್ಪರ್ಧೆ ನಡೆಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ 600 ಚಿಣ್ಣರು ಶ್ರೀಕೃಷ್ಣನ ಬಾಲ ಲೀಲೆಗಳನ್ನು ವೇಷಭೂಷಣದಲ್ಲಿ ತೋರಿಸಿದರು.
ಭಾನುವಾರ ಒಟ್ಟು 5 ಬಗೆಯ ಅಭಿಷೇಕ ನಡೆಯಲಿದೆ. ಬೆಳಗ್ಗೆ 6 ಗಂಟೆಗೆ, 9 ಗಂಟೆ ಮಧ್ಯಾಹ್ನ 12 ಗಂಟೆಗೆ, ಸಂಜೆ 6 ಗಂಟೆಗೆಸ ಹಾಗೂ ರಾತ್ರಿ 10 ಗಂಟೆಗೆ ರಾಧಾಕೃಷ್ಣನಿಗೆ ವಿಶೇಷ ಅಭಿಷೇಕ ಮಾಡಲಾಗುವುದು.
ಇದಲ್ಲದೆ ಶ್ರೀರಾಧಕೃಷ್ಣ ಉಯ್ನಾಲೆ ಸೇವೆ, ಅರ್ಚನೆ ಸೇವೆ, ಗೋಸೇವೆ, ಸಂಗೀತ ಸೇವೆ, ರಾಜ್‌ಭೋಗ್ ಆರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಅಲ್ಲದೆ ಭಕ್ತಾದಿಗಳಿಗೆ ಪ್ರಸಾದ ವಿತರಣೆಗೆಂದು
1 ಲಕ್ಷ ಲಾಡುಗಳನ್ನು ತಯಾರಿಸಲಾಗಿದೆ. 25 ಟನ್ ಸಕ್ಕರೆ ಪೊಂಗಲ್ ಹಾಗೂ 15 ಟನ್ ಬಿಸಿಬೇಳೆಬಾತು ಮಾಡಲು
ಉದ್ದೇಶಿಸಲಾಗಿದೆ.
ಮೊಸರು ಕುಡಿಕೆ ಒಡೆಯುವ ಸ್ಪರ್ಧೆ: ನಿರ್ಮಾಣ್ ದೇವಾಲಯಗಳ ವಿಶ್ವಸ್ಥ ಮಂಡಳಿಯಿಂದ ಸೆ.2ರಂದು ರಾತ್ರಿ 11.48ಕ್ಕೆ ಅರ್ಘಪ್ರದಾನ ಪೂಜೆ ಹಮ್ಮಿಕೊಳ್ಳಲಾಗಿದೆ. ಸೆ.3ರಂದು ಬೆಳಗ್ಗೆ 8.30ಕ್ಕೆ ಪಂಚಾಮೃತ ಅಭಿಷೇಕ, 10.30ಕ್ಕೆ ವಿಷ್ಣುಸಹಸ್ರನಾಮ ಮತ್ತು ಕೃಷ್ಣಾಷ್ಟೋತ್ತರ ಶತನಾಮಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ 11 ರಿಂದ ಶ್ರೀಗೋಪಾಲಕೃಷ್ಣ ದೇವಾಲಯದ ಬಳಿ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ ಆಯೋಜಿಸಲಾಗಿದೆ.