ಬೆಂಗಳೂರು: ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ -ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಆಹಾರ ಸಚಿವ ಜಮೀರ್ ಅಹ್ಮದ್ ಖಾನ್, ಶಾಸಕ ಗೋಪಾಲಯ್ಯ ಅವರ ಜತೆ ಸೇರಿ ನಗರ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಬೆಂಗಳೂರು ಉತ್ತರ ಕ್ಷೇತ್ರದ ಮೈತ್ರಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ನಂತರ ಮಾತನಾಡಿದ ಡಾ.ಜಿ.ಪರಮೇಶ್ವರ್, ಬೆಂಗಳೂರು ಉತ್ತರ ಕ್ಷೇತ್ರದಿಂದ ಕೃಷ್ಣ ಬೈರೇಗೌಡ ಅವರು ಗೆಲ್ಲುವ ವಿಶ್ವಾಸವಿದೆ. ಬಿಜೆಪಿಯ ಸದಾನಂದ ಗೌಡ ಅವರು ಕೇಂದ್ರದ ಸಚಿವರಾಗಿದ್ದರೂ ಸಹ ಯಾವುದೇ ಕೆಲಸ ಮಾಡಿಲ್ಲ. ಬೆಂಗಳೂರಿಗೆ ಯಾವ ಕೊಡುಗೆಯನ್ನೂ ನೀಡಿಲ್ಲ. ಈ ಎಲ್ಲವನ್ನು ಜನ ಗಮನಿಸಿದ್ದಾರೆ. ಅಷ್ಟೆ ಅಲ್ಲದೆ ಕೃಷ್ಣ ಬೈರೇಗೌಡರ ವರ್ಚಸ್ಸು ಮೆಚ್ಚುವಂಥದ್ದು ಎಂದು ಹೇಳಿದರು.
ಆಸ್ತಿ ವಿವರ: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಸಚಿವ ಕೃಷ್ಣಭೈರೇಗೌಡ ಅವರು ಸುಮಾರು 53 ಎಕರೆ ಕೃಷಿ ಭೂಮಿ ಹೊಂದಿದ್ದರೂ, ಅವರ ಪತ್ನಿಯ ಹೆಸರಿನಲ್ಲಿ ಆದಾಯವೇ ಹೆಚ್ಚಿದೆ.
ಅವರ ಹೆಸರಿನಲ್ಲಿ 67.15 ಲಕ್ಷ ಚರಾಸ್ತಿ, ಪತ್ನಿ ಹೆಸರಿನಲ್ಲಿ 380 ಗ್ರಾಂ ಚಿನ್ನ, 50 ಗ್ರಾಂ ಬೆಳ್ಳಿ, 9.80 ಲಕ್ಷ ಮೌಲ್ಯದ ಕಾರು ಸೇರಿದಂತೆ 2.28 ಕೋಟಿ ಚರಾಸ್ತಿ ಇದೆ. ಸಚಿವರು 1.50 ಲಕ್ಷ, ಅವರ ಪತ್ನಿ 1.75 ಲಕ್ಷ ಹಾಗೂ ಅವರ ತಾಯಿ 1.50 ಲಕ್ಷ ನಗದು ಹೊಂದಿದ್ದಾರೆ.
ನಗದು: 4.75 ಲಕ್ಷ ರೂ.
ಚರಾಸ್ತಿ: 3,04,09,044
ಸ್ಥಿರಾಸ್ತಿ: ಸುಮಾರು 16 ಕೋಟಿ ರೂ.
ಸಾಲ: 1.55 ಕೋಟಿ ರೂ.