Advertisement

ಕೌಶಲ ಮೆರೆದ ಕೃಷ್ಣಕಲೆ

06:34 PM Aug 29, 2019 | mahesh |

ಭಾರತೀಯ ಸಾಂಪ್ರದಾಯಿಕ ರಜಪೂತ ಚಿಕಣಿಚಿತ್ರಕಲೆಗಳಲ್ಲಿ ಕೃಷ್ಣಕಲೆಯನ್ನು ವಿಶೇಷವಾಗಿ ಕಾಣಬಹುದು. ಇದು ವಿಶೇಷತಃ ವೈಷ್ಣವ ವಸ್ತು ಪ್ರಧಾನವಾಗಿದ್ದು, ಮೊಗಲ ಕಲೆಯ ಮುಂದುವರಿದ ಅಂಶಗಳು ಹಾಗೂ ಅಜಂತಾ ಕಲೆಯ ರೇಖಾಪದ್ಧತಿಗಳು ಕಾಣಸಿಗುತ್ತವೆ. ರಜಪೂತ ಕಲೆಯ ಕಾಂಗ್ರಾ ಕಲಂ ಮತ್ತು ಅಜ್ಮಿàರ್‌ ಕಲಂಗಳಲ್ಲಿ ಕೃಷ್ಣಚರಿತೆಯ ಚಿತ್ರಗಳು ಸಾಕಷ್ಟಿವೆ. ಕಾಂಗ್ರಾ ಕಲಂ ಪಹಾಡಿ ಶೈಲಿಯಾಗಿ ಬಾಸೋಲಿ, ಕುಲು, ಜಮ್ಮು, ಗಡ್‌ವಾಲ್‌, ಕಾಂಗ್ರಾಗಳಲ್ಲಿ ಮುಂದುವರಿಯಿತು. ಅಜ್ಮಿàರ್‌ ಕಲಂ ರಾಜಸ್ಥಾನಿ ಶೈಲಿಯಾಗಿ ಜೋಧ್‌ಪುರ, ಮೇವಾಡ್‌, ಬಿಕಾನೇರ್‌, ಬುಂದಿ, ಜೈಪುರ, ಕೋಟಾ, ಕಿಷನ್‌ಘಡ್‌ಗಳಲ್ಲಿ ಮುಂದುವರಿಯಿತು. ಈ ಚಿತ್ರಗಳಲ್ಲಿ ಶೃಂಗಾರಗೊಂಡ ಸೂಕ್ಷ್ಮ ರೇಖಾ ವಿನ್ಯಾಸಗಳು, ಮುಗ್ಧಮೋಹಕ ಸ್ವರೂಪ, ಬಳುಕುವ ದೇಹಭಂಗಿ, ಪಾರದರ್ಶಕ ಹೊಳೆಯುವ ಬಣ್ಣಗಳು, ಉಚ್ಚ ಮಟ್ಟದ ತಾಂತ್ರಿಕತೆ, ಮೂರನೇ ಆಯಾಮದ ಗೋಚರಿಕೆ ಕಂಡುಬರುತ್ತದೆ. ಪಂಡಿತ ಪಾಮರರೆಲ್ಲರ ಹೃದಯವನ್ನು ತಟ್ಟುವ ಕೃಷ್ಣನ ಬಾಲಚೇಷ್ಟೆಗಳು, ಶೌರ್ಯ ಸಾಹಸ ಮೆರೆದ ಕ್ಷಣಗಳು, ಗೋಪಿಕಾ ಸ್ತ್ರೀಯರೊಂದಿಗೆ ಸರಸ-ಸಲ್ಲಾಪ, ರಾಧೆಯೊಂದಿಗೆ ಪ್ರೇಮದಾಟ ಇಲ್ಲಿ ನಿರೂಪಿತವಾಗಿದೆ. ನಾವೇ ಕೃಷ್ಣ-ರಾಧೆಯರಾಗಿ ನಮ್ಮ ಜೀವನನುಭವಗಳನ್ನು ಹಂಚಿಕೊಳ್ಳುವಷ್ಟು ಈ ಚಿತ್ರಗಳು ನಮ್ಮನ್ನು ಮಂತ್ರಮುಗ್ಧಗೊಳಿಸುತ್ತವೆ.

Advertisement

ಕಾಂಗ್ರಾ ಕಲಂನಲ್ಲಿ ಕೃಷ್ಣ ಲೀಲೆಯ ಚಿತ್ರಗಳು ಬಹಳಷ್ಟಿವೆ. ಒಂದು ವಿಷಯದ ಒಟ್ಟಾರೆ ದೃಶ್ಯವನ್ನು ಒಂದೇ ಚಿತ್ರದೊಳಗೆ ನಿರೂಪಿಸಿ ಕಲಾವಿದರು ಜಾಣ್ಮೆ ಮೆರೆದಿದ್ದಾರೆ. ಉದಾಹರಣೆಗೆ ಜನ್ಮಾಷ್ಟಮಿ ಚಿತ್ರವೊಂದರ ಸನ್ನಿವೇಶದಲ್ಲಿ ಎಡಬದಿಯ ಕಾರಾಗೃಹದಲ್ಲಿ ವಸುದೇವ-ದೇವಕಿಯರ ಭಕ್ತಿಗೆ ಒಲಿದು ವಿಷ್ಣುವು ಕೃಷ್ಣನಾಗಿ ಹುಟ್ಟಿದಾಗ, ಆ ಮಗುವನ್ನು ಕಂಸನ ಕ್ರೌರ್ಯದಿಂದ ರಕ್ಷಿಸಲು ವಸುದೇವ ಮಗುವನ್ನು ಹೊತ್ತುಕೊಂಡು ರಾತ್ರಿ ಹೊತ್ತೇ ಹೊರನಡೆದಿದ್ದಾನೆ. ದೇವರ ಮಾಯೆಯಿಂದ ಕಾವಲು ಭಟರೆಲ್ಲಾ ಮಂಕಾಗಿ ಕೂತಿದ್ದಾರೆ. ನದಿ ದಾಟಲು ಯಮುನೆ ದಾರಿಕೊಟ್ಟಿದ್ದಾಳೆ. ಮಳೆಯಿಂದ ಮಗು ಕೃಷ್ಣನನ್ನು ರಕ್ಷಿಸಲು ಶೇಷನಾಗ ಕೊಡೆಯಾಗಿ ಹಿಂಬಾಲಿಸಿದ್ದಾನೆ. ಬಲಬದಿಯ ದೃಶ್ಯದಲ್ಲಿ ಗೋಕುಲಕ್ಕೆ ಹೋದ ವಸುದೇವ ಮಗು ಕೃಷ್ಣನನ್ನು ಉಪ್ಪರಿಗೆ ಮೇಲೆ ಮಲಗಿರುವ ನಂದಾ-ಯಶೋದರ ಪಕ್ಕದಲ್ಲಿ ಬಿಟ್ಟು ಅವರ ಮಗುವಾದ ಯೋಗಮಾಯೆಯನ್ನು ಹೊತ್ತು ಹಿಂದಿರುಗುತ್ತಾನೆ. ದಾರಿಯಲ್ಲಿ ಮಲಗಿರುವ ಹುಲಿಯು ಮೌನವಾಗಿದೆ. ಹೀಗಿದೆ ಒಟ್ಟಾರೆ ದೃಶ್ಯ. ಇದೇ ರೀತಿ ಕಾಳಿಂಗ ಮರ್ದನ, ಮುಷ್ಟಿಕಾಸುರ ವಧೆ, ಗೊವರ್ಧನಗಿರಿಧಾರಿ, ರಾಸಲೀಲೆ, ರಾಗಿಣಿ, ಹೋಳಿಯಾಟ ಚಿತ್ರಗಳು ಮನಮೋಹಕವಾಗಿವೆ. ಒಟ್ಟಿನಲ್ಲಿ ಪ್ರಾಚೀನ ಕಲಾವಿದರ ಕರಕೌಶಲ್ಯ ಪುಳಕಿತಗೊಳಿಸುತ್ತವೆ.

ಉಪಾಧ್ಯಾಯ ಮೂಡುಬೆಳ್ಳೆ

Advertisement

Udayavani is now on Telegram. Click here to join our channel and stay updated with the latest news.

Next